ADVERTISEMENT

ಆಲ್ದೂರು, ನರಸಿಂಹರಾಜಪುರದಲ್ಲಿ ಧಾರಾಕಾರ ಮಳೆ

ಬೆಳಿಗ್ಗೆ ಬಿಸಿಲು, ಮಧ್ಯಾಹ್ನ ಬಳಿಕ ಸುರಿದ ಮಳೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 16:21 IST
Last Updated 6 ಸೆಪ್ಟೆಂಬರ್ 2022, 16:21 IST
ಹಾಂದಿ ಆಟೊ ವೃತ್ತದ ಬಳಿ ಚಿಕ್ಕಮಗಳೂರು– ಮಂಗಳೂರು ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ನೀರು ಹರಿಯುತ್ತಿರುವುದು
ಹಾಂದಿ ಆಟೊ ವೃತ್ತದ ಬಳಿ ಚಿಕ್ಕಮಗಳೂರು– ಮಂಗಳೂರು ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ನೀರು ಹರಿಯುತ್ತಿರುವುದು   

ಆಲ್ದೂರು: ಆಲ್ದೂರು, ಹಾಂದಿ, ಐದಳ್ಳಿ, ಬೆಟ್ಟದಹಳ್ಳಿ ಸುತ್ತಲ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿದಿದ್ದು, ಬೆಟ್ಟದಹಳ್ಳಿ ಭೂತಪ್ಪ ಸ್ವಾಮಿ ದೇವಸ್ಥಾನಕ್ಕೆ ತೆರಳುವ ರಸ್ತೆ ಕುಸಿದಿದೆ.

ಈ ರಸ್ತೆ ಮೂಲಕ ಕಂಚಿನ ಕಲ್ ದುರ್ಗಕ್ಕೆ ಸಂಚರಿಸುತ್ತಿದ್ದ ಜನರು ಸುತ್ತು ಬಳಸಿ ಪ್ರಯಾಣಿಸಬೇಕಾಗಿದೆ. ಸ್ಥಳಕ್ಕೆ ಬಸರವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಸುಪ್ರಿತಾ, ಸದಸ್ಯ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲಿಸಿದರು. ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಕೈಗೊಳ್ಳುವ ಭರವಸೆ ನೀಡಿದರು.

ಐದಳ್ಳಿ ಗ್ರಾಮದ ಸಮೀಪದ ನರೋಡಿ ಸೇತುವೆ ಸಂಪೂರ್ಣ ಮಳೆಯ ನೀರಿನಿಂದ ಜಲಾವೃತವಾಗಿದೆ.

ADVERTISEMENT

ತುಂಬಿ ಹರಿದ ನದಿ, ಹಳ್ಳಕೊಳ್ಳ

ನರಸಿಂಹರಾಜಪುರ: ತಾಲ್ಲೂಕಿನಾದ್ಯಂತ ಮಂಗಳವಾರ ಮಧ್ಯಾಹ್ನದಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿವೆ.

ಮಂಗಳವಾರ ಬೆಳಿಗ್ಗೆಯಿಂದಲೂ ಬಿಸಿಲಿನ ವಾತಾವರಣವಿತ್ತು. ಮಧ್ಯಾಹ್ನ 3ರ ನಂತರ ಏಕಾಏಕಿ ಮೋಡ ಕವಿದ ವಾತಾವರಣವುಂಟಾಗಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಿತು.

ತಾಲ್ಲೂಕಿನ ಕುದುರೆಗುಂಡಿ ಸಮೀಪ ಭತ್ತದ ಗದ್ದೆಗಳು ಜಲಾವೃತವಾಗಿವೆ. ಗುಡ್ಡೆಹಳ್ಳ ಮುಖ್ಯರಸ್ತೆಯ ಸಮೀಪ ಹಳ್ಳಕೊಳ್ಳಗಳು ಮೈದುಂಬಿ ಹರಿದಿವೆ. ಎಲ್ಲೆಡೆ ಜಲಾವೃತವಾಗಿವೆ. ರಸ್ತೆಯ ತುಂಬಾ ನೀರು ನಿಂತಿದ್ದು, ಮಳೆ ಮುಂದುವರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.