ADVERTISEMENT

ಕನ್ನಡ ಉಳಿಸಿ, ಬೆಳೆಸುವ ಪ್ರಯತ್ನವಾಗಲಿ: ಶಾಸಕ ಟಿ.ಡಿ.ರಾಜೇಗೌಡ

ಜೈ ಕರ್ನಾಟಕ ಆಟೊ ಚಾಲಕರ ಮತ್ತು ಮಾಲೀಕರ ಸಂಘ: ಕರ್ನಾಟಕ ರಾಜ್ಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2024, 14:31 IST
Last Updated 30 ನವೆಂಬರ್ 2024, 14:31 IST
ನರಸಿಂಹರಾಜಪುರ ತಾಲ್ಲೂಕು ಬಿ.ಎಚ್.ಕೈಮರದ ಜೈ ಕರ್ನಾಟಕ ಆಟೊ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಶುಕ್ರವಾರ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭಕ್ಕೆ ಶಾಸಕ ಟಿ.ಡಿ.ರಾಜೇಗೌಡ ಚಾಲನೆ ನೀಡಿದರು
ನರಸಿಂಹರಾಜಪುರ ತಾಲ್ಲೂಕು ಬಿ.ಎಚ್.ಕೈಮರದ ಜೈ ಕರ್ನಾಟಕ ಆಟೊ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಶುಕ್ರವಾರ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭಕ್ಕೆ ಶಾಸಕ ಟಿ.ಡಿ.ರಾಜೇಗೌಡ ಚಾಲನೆ ನೀಡಿದರು   

ಬಿ.ಎಚ್.ಕೈಮರ(ಎನ್.ಆರ್.ಪುರ): ಕನ್ನಡ ಶ್ರೀಮಂತ ಭಾಷೆಯಾಗಿದ್ದು, ಕನ್ನಡಿಗರು ಹೃದಯ ಶ್ರೀಮಂತಿಕೆ ಬೆಳೆಸಿಕೊಂಡಿರುವುದರಿಂದ ಬೇರೆ ಭಾಷೆಯವರಿಗೂ ಆಶ್ರಯ ನೀಡಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಇಲ್ಲಿನ ಜೈ ಕರ್ನಾಟಕ ಆಟೊ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಶುಕ್ರವಾರ ಸಂಜೆ ಆಯೋಜಿಸಿದ್ದ 8ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಐದು ಪ್ರಾಂತ್ಯಗಳಾಗಿ ಹರಿದು ಹಂಚಿ ಹೋಗಿದ್ದ ನಾಡನ್ನು ಹೋರಾಟ ಮಾಡಿ ಒಗ್ಗೂಡಿಸಿ, ಮೈಸೂರು ಪ್ರಾಂತ್ಯ ಉದಯವಾಯಿತು. ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಬೇರೆ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ನೆಲೆಸಿದ್ದರು ಅವರು ಕನ್ನಡ ಭಾಷೆ ಕಲಿತು, ಉಳಿಸಿ–ಬೆಳೆಸುವ ಪ್ರಯತ್ನ ಮಾಡಬೇಕು’ ಎಂದರು.

ಕನ್ನಡ ಶ್ರೀಮಂತ ಭಾಷೆಯಾಗಿದ್ದು, ಅನೇಕ ಸಾಹಿತಿಗಳು, ಕವಿಗಳು ಲೇಖನದ ಮೂಲಕ ರಾಜ್ಯದ ಗಮನ ಸೆಳೆಯುವಂತೆ ಮಾಡಿದ್ದಾರೆ. ಕನ್ನಡ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಆಟೊ ಚಾಲಕರ ಕಾರ್ಯ ಶ್ಲಾಘನೀಯವಾಗಿದೆ. ಆಟೊ ಚಾಲಕರ ಮನವಿಯಂತೆ ಮುಂದಿನ ಕರ್ನಾಟಕ ರಾಜ್ಯೋತ್ಸವದೊಳಗೆ ಸರ್ಕಲ್‌ನಲ್ಲಿ ಹೈಮಾಸ್ಕ್ ದೀಪ ಹಾಗೂ ವಿಶ್ರಾಂತಿ ಕೊಠಡಿ ನಿರ್ಮಿಸಿಕೊಡಲು ಶ್ರಮಿಸಲಾಗುವುದು ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಜೆ.ಅಂತೋಣಿ ಮಾತನಾಡಿ, ‘ಕನ್ನಡ ಭಾಷೆಗೆ ಭವ್ಯವಾದ ಪರಂಪರೆಯಿದ್ದು, ಶ್ರೇಷ್ಠ ಭಾಷೆಯಾಗಿದೆ. 2,300 ವರ್ಷಗಳ ಇತಿಹಾಸ ಹೊಂದಿದ್ದು ಕನ್ನಡವನ್ನು ಲಿಪಿಗಳ ರಾಣಿ ಎಂದು ಕರೆಯುತ್ತಾರೆ. ಅಶೋಕ ಚಕ್ರವರ್ತಿಯ ಶಿಲಾಶಾಸನಗಳಲ್ಲೂ ಕನ್ನಡ ಪದಗಳಿವೆ. ಕನ್ನಡ ಎಂಬುದು ಕೇವಲ ಭಾಷೆಯಲ್ಲ ಅದೊಂದು ಸಂಸ್ಕೃತಿಯಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ರಾಜ್ಯದಲ್ಲಿ ಹುಟ್ಟಿದ ಎಲ್ಲರೂ ಪುಣ್ಯವಂತರು. ಶಾಂತಿ, ನೆಮ್ಮದಿಯಿಂದ ಅಣ್ಣ ತಮ್ಮಂದಿರಂತೆ ಎಲ್ಲರೂ ಬದುಕುತ್ತಿರುವುದು ದೇಶಕ್ಕೆ ಮಾದರಿ ಎಂದರು.

ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಎಚ್.ಆರ್.ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಆಟೊ ಚಾಲಕರು ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಯಾಣಿಕರು ಬಿಟ್ಟು ಹೋದ ಅಮೂಲ್ಯ ವಸ್ತುಗಳನ್ನು ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಕನ್ನಡ ಉಳಿಸುವ ನಿಟ್ಟಿನಲ್ಲಿ ನಿರಂತರ ಶ್ರಮಿಸುತ್ತಿದ್ದಾರೆ’ ಎಂದರು.

ಜೈ ಕರ್ನಾಟಕ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎಚ್.ಎ.ನವೀನ್ ಅಧ್ಯಕ್ಷತೆ ವಹಿಸಿದ್ದರು. ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾಬೆನ್ನಿ, ಗುಬ್ಬಿಗಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ, ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶ್ರೀನಿವಾಸ್, ಜೆಡಿಎಸ್ ಕ್ಷೇತ್ರಾಧ್ಯಕ್ಷ ದಿವಾಕರ್ ಭಟ್, ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಜಯಂತಿ, ವರ್ತಕರ ಸಂಘದ ಅಧ್ಯಕ್ಷ ಬಿ.ವಿ.ದೀಪಕ್, ಕುದುರೆಗುಂಡಿ ಆಟೊ ಚಾಲಕರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಬಾಳೆಹೊನ್ನೂರು ಆಟೊ ಚಾಲಕರ ಸಂಘದ ಅಧ್ಯಕ್ಷ ಸಂದೇಶ್, ಅಭಿನವಗಿರಿರಾಜ್ ಇದ್ದರು. ಸುಧೀ ಬಳಗದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.