
ಚಿಕ್ಕಮಗಳೂರು: ಕನ್ನಡದ ಕೆಲಸ ಮಾಡಲು ಜಾತಿ, ಧರ್ಮದ ಅಗತ್ಯವಿಲ್ಲ. ಕನ್ನಡಾಭಿಮಾನ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯೂರಿರಬೇಕು. ತನು ಕನ್ನಡ, ನುಡಿ ಕನ್ನಡ ಎಂಬ ಧ್ಯೇಯದೊಂದಿಗೆ ನಾಡನ್ನು ಕಟ್ಟುವ ಕಾಯಕ ಮಾಡಬೇಕು ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪನಹಳ್ಳಿ ಅಶೋಕ್ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಮಹಿಳಾ ಘಟಕದ ನೂತನ ಅಧ್ಯಕ್ಷರು ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್ ಭಾಷೆ ಯುವಸಮೂಹವನ್ನು ಆಕರ್ಷಿಸುತ್ತಿದೆ. ಆದರೆ, ಇಂಗ್ಲಿಷ್ ಭಾಷೆಗಿಂತ ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಾಡು, ನುಡಿಯ ಏಳಿಗೆಗೆ ದಾರ್ಶನಿಕರು, ಸಂತರು, ಕವಿಶ್ರೇಷ್ಠರು ತಮ್ಮದೇ ಶೈಲಿಯಲ್ಲಿ ಕೀರ್ತನೆ, ಸಾಹಿತ್ಯದ ಮೂಲಕ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಆಯಾ ಭಾಗದಲ್ಲಿ ಕರವೇ ಕಾರ್ಯಕರ್ತರು ಕನ್ನಡದ ಹಬ್ಬ, ಕವಿಗೋಷ್ಠಿ, ಸಾಹಿತ್ಯಾಭಿರುಚಿ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಂಡು ನಾಡಿನ ಏಕತೆಯನ್ನು ಎತ್ತಿಹಿಡಿಯಬೇಕು. ಕನ್ನಡತನಕ್ಕೆ ಧಕ್ಕೆಯಾದರೆ ಧೈರ್ಯವಾಗಿ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಕರವೇ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಗುರುಮೂರ್ತಿ ಮಾತನಾಡಿ, ಕಾರ್ಯಕರ್ತರ ಒಗ್ಗಟ್ಟು ಹಾಗೂ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಸಂಘಟನೆ ಗಟ್ಟಿಗೊಳಿಸಲಾಗುವುದು. ಕನ್ನಡಪರ ಕಾರ್ಯಕ್ರಮ ಹಮ್ಮಿಕೊಂಡು ಜನರಲ್ಲಿ ಕನ್ನಡ ಜಾಗೃತಿ ಮೂಡಿಸುವ ಕಾಯಕಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ನೂತನ ಪದಗ್ರಹಣ: ಪೂರ್ಣಿಮಾ ಗುರುಮೂರ್ತಿ (ಜಿಲ್ಲಾ ಘಟಕದ ಅಧ್ಯಕ್ಷೆ), ಅನ್ನಪೂರ್ಣ (ಚಿಕ್ಕಮಗಳೂರು ಘಟಕದ ಅಧ್ಯಕ್ಷೆ), ಆಶಾರತೀಶ್ (ಕಡೂರು ಘಟದಕ ಅಧ್ಯಕ್ಷೆ), ಬಿ.ಪಿ. ಚಂದ್ರಶೇಖರ್ (ತರೀಕೆರೆ ಘಟಕದ ಅಧ್ಯಕ್ಷ).
ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕುಮಾರ್‌ಶೆಟ್ಟಿ, ಉಪಾಧ್ಯಕ್ಷರಾದ ಕೋಟೆಮಲ್ಲೇಶ್, ದಶರಥರಾಜ್ ಅರಸ್, ಕಡೂರು ಅಧ್ಯಕ್ಷ ಮನೋಜ್‌ಶೆಟ್ಟಿ, ಸಂಚಾಲಕ ಯುವರಾಜ್, ಸಂಘಟನಾ ಕಾರ್ಯದರ್ಶಿ ರುದ್ರೇಶ್, ಕಾರ್ಯದರ್ಶಿ ಇಮ್ರಾನ್, ಸಹ ಕಾರ್ಯದರ್ಶಿ ನಿಸಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.