ADVERTISEMENT

ಚಿಕ್ಕಮಗಳೂರು|ಪಾಳುಭೂಮಿ ಭೂರಹಿತರಿಗೆ ಹಂಚಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 6:32 IST
Last Updated 9 ಆಗಸ್ಟ್ 2025, 6:32 IST
   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪಾಳುಬಿದ್ದಿರುವ ಕಂದಾಯ ಮತ್ತು ಗೋಮಾಳದ ಭೂಮಿಯನ್ನು ಜಮೀನು ಹೊಂದಿಲ್ಲದ ಬಡ ರೈತರಿಗೆ ವಿತರಿಸುವಂತೆ ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರನ್ನು ಭೇಟಿ ಮಾಡಿದ ಸಂಘಟನೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು. 

ಸಾವಿರಾರು ಎಕರೆ ಕಂದಾಯ ಭೂಮಿ ಮತ್ತು ಗೋಮಾಳದ ಭೂಮಿಯನ್ನು ಅರಣ್ಯ ಇಲಾಖೆ ತನ್ನ ವಶದಲ್ಲಿಟ್ಟುಕೊಂಡಿದೆ. ಆ ಭೂಮಿ ಪಾಳು ಬಿದ್ದಿದ್ದು ಯಾರಿಗೂ ಉಪಯೋಗಕ್ಕೆ ಬಾರದಂತಾಗಿದೆ ಎಂದರು.

ADVERTISEMENT

ಅರಣ್ಯ ಇಲಾಖೆಯ ವಶದಲ್ಲಿರುವ ಭೂಮಿಗೆ ಕಂದಾಯ ಇಲಾಖೆಯಿಂದ ಯಾವುದೇ ಮ್ಯುಟೇಷನ್ ಮತ್ತು ಆರ್‌ಆರ್‌ ಇಂಡೆಕ್ಸ್ ಲಭ್ಯವಿಲ್ಲ. ಆದರೂ, ಅರಣ್ಯ ಇಲಾಖೆ ಸೆಕ್ಷನ್ 4 ಮತ್ತು 17ರ ಅಡಿ ಈ ಜಾಗವನ್ನು ಅರಣ್ಯ ಇಲಾಖೆ ವಶಕ್ಕೆ ಪಡೆಯಲು ಮುಂದಾಗಿದೆ. ಈ ಪೈಕಿ ಸಾವಿರಾರು ಎಕರೆ ಭೂಮಿಗೆ ರೈತರು ಈಗಲೂ ಕಂದಾಯ ಕಟ್ಟುತ್ತಿದ್ದಾರೆ ಎಂದು ಹೇಳಿದರು.

ಅರಣ್ಯ ಇಲಾಖೆ ಸ್ವಾಧೀನದಲ್ಲಿರುವ ಜಾಗದ ದಾಖಲೆ ಪರಿಶೀಲಿಸಿದರೆ ಅವು ಗೋಮಾಳ ಮತ್ತು ಹುಲ್ಲು ಬನ್ನಿ ಎಂದೇ ಬರುತ್ತಿದೆ. ಆದ್ದರಿಂದ ಏನೂ ಬೆಳೆಯದೆ ಪಾಳು ಬಿದ್ದಿರುವ ಈ ಭೂಮಿಯನ್ನು ಭೂರಹಿತ ಬಡ ರೈತರಿಗೆ ವಿತರಿಸಿದರೆ ಅವರ ಬದುಕು ಹಸನಾಗುತ್ತದೆ ಎಂದು ಹೇಳಿದರು.

ಈ ಸಂಬಂಧ ಹಲವು ಬಾರಿ ಮನವಿ ನೀಡಿದ್ದರೂ ಉಪಯೋಗವಾಗಿಲ್ಲ. ಈಗಲೂ ಸ್ಪಂದಿಸದಿದ್ದರೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಸೋಮು ನಾಯಕ್, ಜಿಲ್ಲಾ ಘಟಕ ಅಧ್ಯಕ್ಷ ಕುಮಾರ್, ಉಪಾಧ್ಯಕ್ಷ ರೂಪೇಶ್, ಕಾರ್ಯಕರ್ತ ಎಂ.ಎಸ್. ಮಲ್ಲೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.