ADVERTISEMENT

ಮಹಲ್–ಕೆಮ್ಮಣ್ಣುಗುಂಡಿ ರಸ್ತೆ ಅಭಿವೃದ್ಧಿ

ಹುಲಿ ಯೋಜನೆ ವಲಯದಲ್ಲಿ ಹಾದು ಹೋಗುವ ರಸ್ತೆ: ₹33 ಕೋಟಿ ಮೊತ್ತದ ಪ್ರಸ್ತಾವನೆ

ವಿಜಯಕುಮಾರ್ ಎಸ್.ಕೆ.
Published 17 ಆಗಸ್ಟ್ 2024, 6:43 IST
Last Updated 17 ಆಗಸ್ಟ್ 2024, 6:43 IST
ಅತ್ತಿಗುಂಡಿ–ಮಹಲ್–ಕೆಮ್ಮಣ್ಣುಗುಂಡಿ ರಸ್ತೆ
ಅತ್ತಿಗುಂಡಿ–ಮಹಲ್–ಕೆಮ್ಮಣ್ಣುಗುಂಡಿ ರಸ್ತೆ   

ಚಿಕ್ಕಮಗಳೂರು: ಭದ್ರಾ ಹುಲಿ ಯೋಜನೆ ವಲಯದಲ್ಲಿ ಹಾದು ಹೋಗುವ ಅತ್ತಿಗುಂಡಿ–ಮಹಲ್–ಕೆಮ್ಮಣ್ಣುಗುಂಡಿ ರಸ್ತೆ ಮತ್ತೆ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ರಸ್ತೆ ಅಭಿವೃದ್ಧಿಗೆ ₹33 ಕೋಟಿ ಮೊತ್ತದ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಲೋಕೋಪಯೋಗಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.

ಮಹಲ್ ಮಾರ್ಗವಾಗಿ ಕೆಮ್ಮಣ್ಣುಗುಂಡಿ ತಲುಪಲು ದತ್ತಪೀಠ ತಿರುವಿನಿಂದ 16 ಕಿಲೋ ಮೀಟರ್ ದೂರವಿದೆ. ಅದೇ ಜಾಗದಿಂದ ಕೈಮರಕ್ಕೆ ವಾಪಸ್ ಬಂದು ಲಿಂಗದಹಳ್ಳಿ ಮಾರ್ಗವಾಗಿ ಕೆಮ್ಮಣ್ಣುಗುಂಡಿ ತಲುಪಲು 71 ಕಿಲೋ ಮೀಟರ್‌ ಕ್ರಮಿಸಬೇಕಿದೆ. ಸಮೀಪದ ದಾರಿಯಾದರೂ ಭದ್ರಾ ಹುಲಿ ಅಭಯಾರಣ್ಯದಲ್ಲಿ ರಸ್ತೆ ಹಾದು ಹೋಗುವುದರಿಂದ 2018ರಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಸಂಜೆ 6ರಿಂದ ಬೆಳಿಗ್ಗೆ 6ರ ತನಕ ಸಂಚಾರ ನಿಷೇಧಿಸಲಾಗಿತ್ತು. ಬಳಿಕ ಕಾಡುಪ್ರಾಣಿಗಳ ಒಡಾಟ ಹೆಚ್ಚಾಗಿರುವುದರಿಂದ ಅವುಗಳಿಗೆ ತೊಂದರೆ ಆಗದಂತೆ ವಾಹನಗಳ ಸಂಚಾರ ನಿರ್ಬಂಧಿಸಲಾಯಿತು. 

ಈಗ ಆ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ವಾಹನಗಳು ಚಲಿಸಲು ಸಾಧ್ಯವಿಲ್ಲದ ಸ್ಥಿತಿ ಇದೆ. ಜೀಪ್‌ಗಳಲ್ಲಿ ಮಾತ್ರ ಸಂಚಾರ ಮಾಡಬಹುದಾಗಿದೆ. ‌ಮಹಲ್‌ ಮತ್ತು ಸುತ್ತಮುತ್ತಲ ಹಳ್ಳಿಗಳ ಜನ ಕೆಮ್ಮಣ್ಣುಗುಂಡಿ, ಲಿಂಗದಹಳ್ಳಿ ಕಡೆಗೆ ಹೋಗಬೇಕಾದರೆ 75 ಕಿಲೋ ಮೀಟರ್ ಸುತ್ತಾಡಬೇಕಿದೆ. ಆದ್ದರಿಂದ ಈ ಮೊದಲೇ ಇದ್ದ ರಸ್ತೆ ಆಗಿರುವುದರಿಂದ ವಾಹನ ಮತ್ತು ಜನ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂಬ ಮನವಿ ಈ ಭಾಗದ ಗ್ರಾಮಸ್ಥರಿಂದ ಬಂದಿತ್ತು. ಮುಳ್ಳಯ್ಯನಗಿರಿ ಮೀಸಲು ವಿರೋಧ ಹೋರಾಟ ಸಮಿತಿ ಕೂಡ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು.

ADVERTISEMENT

ಈ ರಸ್ತೆ ಅಭಿವೃದ್ಧಿಪಡಿಸಲು ಈಗ ಜಿಲ್ಲಾಡಳಿತ ಮುಂದಾಗಿದೆ. ಲೋಕೋಪಯೋಗಿ ಅಧಿಕಾರಿಗಳು 10 ಕಿಲೋ ಮೀಟರ್ ಡಾಂಬರ್ ರಸ್ತೆ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಿದ್ದಾರೆ. 11 ಅಡಿ ಅಗಲದ ರಸ್ತೆ ಅಭಿವೃದ್ಧಿಪಡಿಸಲು ₹33 ಕೋಟಿ ಮೊತ್ತದ ಅಂದಾಜು ಪಟ್ಟಿ ತಯಾರಿಸಿ ಕಳುಹಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಕೂಡ ಆಸಕ್ತಿ ತೋರಿಸಿದ್ದು, ರಸ್ತೆ ಅಭಿವೃದ್ಧಿಗೆ ಅನುದಾನ ಕೊಡಿಸುವ ಭರವಸೆ ನೀಡಿದ್ದಾರೆ. ಈ ಹಿಂದೆಯೇ ಜನ ಮತ್ತು ವಾಹನ ಸಂಚಾರ ಇದ್ದ ರಸ್ತೆ ಆಗಿರುವುದರಿಂದ ಅರಣ್ಯ ಇಲಾಖೆಯ ಅನುಮತಿ ಕೂಡ ಬೇಕಾಗುವುದಿಲ್ಲ. ಆದ್ದರಿಂದ ಕೆಲವೇ ದಿನಗಳಲ್ಲಿ ರಸ್ತೆ ಅಭಿವೃದ್ಧಿಯಾಗಲಿದೆ ಎಂಬುದು ಅಧಿಕಾರಿಗಳ ಅಂದಾಜು.

ಈ ರಸ್ತೆ ನಿರ್ಮಾಣವಾದರೆ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾ, ಮಾಣಿಕ್ಯಾಧಾರ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗುರು ಕೆಮ್ಮಣ್ಣುಗುಂಡಿಗೆ ಸಾಗಲು ಅನುಕೂಲ ಆಗಲಿದೆ. ಸದ್ಯ ಎಲ್ಲಾ ವಾಹನಗಳು ಕೈಮರ ತನಕ ವಾಪಸ್ ಬರಬೇಕಿರುವುದರಿಂದ ರಸ್ತೆ ನಿರ್ಮಾಣವಾದರೆ ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ ಎಂದು ಹೇಳುತ್ತಾರೆ.

ವಾಹನ ಸಂಚಾರ ಆರಂಭವಾದರೆ ವನ್ಯಜೀವಿ ಸಂಚಾರಕ್ಕೆ ಅಡಚಣೆ ಆಗಲಿದೆ. ಆದ್ದರಿಂದ ಕೆಲವು ನಿರ್ಬಂಧಗಳನ್ನು ವಿಧಿಸಲು ಅಧಿಕಾರಿಗಳು ಆಲೋಚಿಸಿದ್ದಾರೆ. ಮಧ್ಯದಲ್ಲಿ ಎಲ್ಲಿಯೂ ವಾಹನ ನಿಲುಗಡೆ ಮಾಡುವಂತಿಲ್ಲ. ರಾತ್ರಿ ವೇಳೆ ಸಂಚಾರ ನಿಷೇಧ ಸೇರಿ ಹಲವು ನಿರ್ಬಂಧಗಳನ್ನು ವಿಧಿಸಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ರಸ್ತೆ ಅಭಿವೃದ್ಧಿಯಾದರೆ ಎಲ್ಲರಿಗೂ ಅನುಕೂಲ : ಕೆ.ಜೆ. ಜಾರ್ಜ್ ‘ಈಗಾಗಲೇ ಅಸ್ಥಿತ್ವದಲ್ಲಿರುವ ರಸ್ತೆಯನ್ನು ಅಗಲ ಮಾಡದೆ ಇರುವಷ್ಟನ್ನೇ ಅಭಿವೃದ್ಧಿಪಡಿಸಲು ಅವಕಾಶ ಇದೆ. ರಸ್ತೆ ಅಭಿವೃದ್ಧಿಯಾದರೆ ಎಲ್ಲರಿಗೂ ಅನುಮೂಲ ಆಗಲಿದೆ’  ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ‘ಈ ಮೊದಲೇ ಅಸ್ಥಿತ್ವದಲ್ಲಿದ್ದ ರಸ್ತೆಯಲ್ಲಿ ನಾನು ಹಲವು ಬಾರಿ ಸಂಚಾರ ಮಾಡಿದ್ದೇನೆ. ರಸ್ತೆ ಅಭಿವೃದ್ಧಿ ಬೇಡ ಎನ್ನುವ ಪರಿಸರವಾದಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಯಾವ ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ’ ಎಂದು ಪ್ರಶ್ನಿಸಿದರು. ಮುಳ್ಳಯ್ಯನಗಿರಿಗೆ ಬರುವ ಪ್ರವಾಸಿಗರು ಇದೇ ಮಾರ್ಗದಲ್ಲಿ ಕೆಮ್ಮಣ್ಣುಗುಂಡಿಗೆ ತೆರಳು ಅವಕಾಶವಾದರೆ ಅನುಕೂಲವೇ ಆಗಲಿದೆ. ಪ್ರವಾಸಿಗರು ಬರುವುದ ಬೇಡ ಎನ್ನಲು ಆಗುವುದಿಲ್ಲ. ಪರಿಸರ ಸಂರಕ್ಷಣೆ ಜೊತೆ ಜೊತೆಯೇ ಪ್ರವಾಸೋದ್ಯಮ ಕೂಡ ಇರಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.