
ಆಲ್ದೂರು: ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣಗೊಂಡ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿಯನ್ನು ಸೋಮವಾರ ಆದಿಚುಂಚನಗಿರಿ ಪೀಠಾಧೀಶ ನಿರ್ಮಲಾನಂದ ಸ್ವಾಮೀಜಿ, ಶೃಂಗೇರಿ ಶಾಖಾ ಮಠದ ಗುಣಾನಾಥ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.
ಈರ್ವರು ಶ್ರೀಗಳನ್ನು ಆಲ್ದೂರು ಕೆಳ ಬಸ್ ನಿಲ್ದಾಣದಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿ ರಥದ ಮೂಲಕ ಮೆರವಣಿಗೆ ನಡೆಸಿ ವಾದ್ಯ ತಾಳ ಮೇಳಗಳೊಂದಿಗೆ, ಗೊಂಬೆ ನೃತ್ಯಗಳೊಂದಿಗೆ ಕೆಂಪೇಗೌಡ ವೃತ್ತಕ್ಕೆ ಕರೆತರಲಾಯಿತು. ಬಳಿಕ ಮಹಾಗಣಪತಿ ದೇವಸ್ಥಾನದ ಬಳಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕಿ ನಯನಾ ಮೋಟಮ್ಮ, ನನ್ನ ಅಧಿಕಾರವಧಿಯಲ್ಲಿ ಆಲ್ದೂರಿನಲ್ಲಿ ಅಂಬೇಡ್ಕರ್ ಪುತ್ಥಳಿ, ಪ್ರಸ್ತುತ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಲೋಕಾರ್ಪಣೆಗೊಂಡಿರುವುದು ಅದೃಷ್ಟ. ಮಹನೀಯರ ಇತಿಹಾಸ, ಅವರು ನೀಡಿದ ಕೊಡುಗೆಯನ್ನು ಮುಂದಿನ ಪೀಳಿಗೆಗಳಿಗೆ ತಿಳಿಸಸಲು ಪುತ್ಥಳಿ ನಿರ್ಮಾಣ ಅಗತ್ಯ ಎಂಬುದನ್ನು ಮನಗಂಡಿದ್ದೇನೆ. ಮಹಾನ್ ವ್ಯಕ್ತಿಗಳು ಯಾವುದೇ ಜಾತಿ, ಧರ್ಮಕ‌್ಕೆ ಸೀಮಿತರಲ್ಲ. ಅವರನ್ನು ಏಕತೆ ಮೂಡಿಸುವ ಶಕ್ತಿಯನ್ನಾಗಿ ಪರಿಗಣಿಸಬೇಕು ಎಂದು ಹೇಳಿದರು.
ಆದಿಚುಂಚನಗಿರಿ ಪೀಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಇಂದು ದೇಶದಲ್ಲಿ ಸ್ಟಾರ್ಟ್ ಅಪ್, ಯೂನಿಕಾರ್ನ್ ಪರಿಕಲ್ಪನೆಗಳಿದ್ದು 2 ಲಕ್ಷ ಸ್ಟಾರ್ಟ್‌ಅಪ್, ಸುಮಾರು 130 ಯೂನಿಕಾರ್ನ್‌ಗಳಿವೆ. ಅಂದರೆ ಒಂದು ಬಿಲಿಯನ್ ಡಾಲರ್ ಅಂದಾಜು ₹9 ಸಾವಿರ ಕೋಟಿ ವಹಿವಾಟಿನ ವ್ಯವಸ್ಥೆ ಹೊಂದಿರುವ ಸಂಸ್ಥೆಯನ್ನು ಯೂನಿಕಾರ್ನ್ ಪಟ್ಟಿಗೆ ಸೇರಿಸಲಾಗುತ್ತದೆ. ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯಿಂದ 64 ಪೇಟೆಗಳನ್ನು ಅಂದಿನ ಕಾಲಕ್ಕೆ ನಿರ್ಮಿಸಿದ್ದರು. ಕುಶಲತೆ, ಕೌಶಲವನ್ನು ವೃದ್ಧಿಸುವ ಯೋಜನೆಯ ಪ್ರತೀಕವೇ ಪೇಟೆಗಳಾಗಿದ್ದು, ಐಟಿ ಬಿಟಿ ಕ್ಷೇತ್ರಕ್ಕೆ ಹೆಚ್ಚಿನ ಆದಾಯವನ್ನು ಬೆಂಗಳೂರು ಒದಗಿಸುವುದರಿಂದಲೇ ಪ್ರಸ್ತುತ ಬಜೆಟ್‌ನಲ್ಲಿ ಹೆಚ್ಚುವರಿಯಾಗಿ ₹5 ಸಾವಿರ ಕೋಟಿ ಒದಗಿಸಿದ್ದಾರೆ ಎಂದರು.
ದೇಶ ಅಭಿವೃದ್ಧಿಗೊಳ್ಳಲು ಶ್ರಮಿಸಿದ ಅಂಬೇಡ್ಕರ್, ಕೆಂಪೇಗೌಡ, ಗಾಂಧೀಜಿ, ನೇತಾಜಿ, ರಾಮಕೃಷ್ಣ ಪರಮಹಂಸ, ವಿವೇಕಾನಂದ ಮುಂತಾದ ವ್ಯಕ್ತಿತ್ವಗಳ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮ ಕರ್ತವ್ಯ ಎಂದರು.
ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಕೆಂಪೇಗೌಡರು ಬೆಂಗಳೂರು ದೇಶಕ್ಕೆ ಮಾತ್ರವಲ್ಲ ಪ್ರಪಂಚಕ್ಕೆ ಗುರುತಾಗಲು ಕಾರಣಿಭೂತರಾಗಿದ್ದು, ಅವರು ನಿರ್ಮಿಸಿದ 64 ಪೇಟೆಗಳು ಅಭಿವೃದ್ಧಿಯ ಸಂಕೇತ ಎಂದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ‘ಕೆಂಪೇಗೌಡ ದೇಶದ ಆಸ್ತಿ’ ಎಂದರು.
ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಮಾತನಾಡಿದರು. ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಶುಭ ಹಾರೈಸಿದರು. ಪುತ್ಥಳಿ ನಿರ್ಮಾಣ ಮಾಡಿದ ಶಿಲ್ಪಿ ವಿಜಯ ಜಿ, ಎಂಜಿನಿಯರ್ ಪ್ರಶಾಂತ್ ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಐ.ಎ. ಪೂರ್ಣೇಶ್, ವಲಯ ಒಕ್ಕಲಿಗ ಸಂಘದ ಗೌರವಾಧ್ಯಕ್ಷ ಎಚ್.ಎಸ್. ಕವೀಶ್, ಉಪಾಧ್ಯಕ್ಷರಾದ ಸಂಪತ್ ಹೆಡದಾಳು, ಕಾರ್ಯದರ್ಶಿ ಡಿ.ಎಸ್. ವಸಂತ್ ಕುಮಾರ್, ಸಹ ಕಾರ್ಯದರ್ಶಿ ಡಿ.ಪಿ. ರಂಜಿತ್, ಖಜಾಂಚಿ ಎಸ್.ಕೆ. ಲಿಂಗೇಗೌಡ, ನಿರ್ದೇಶಕರಾದ ಎ.ಡಿ. ಕೌಶಿಕ್, ಡಿ.ಎನ್. ನಾರಾಯಣ, ಡಿ.ಆರ್. ಶ್ರೀಧರ್, ಎಚ್.ಕೆ. ರಘು, ಎಚ್.ಎಸ್. ಗಿರೀಶ್, ಡಿ.ಜೆ. ಸತೀಶ್, ಡಿ.ಎಂ. ಪ್ರವೀಣ್, ಎಚ್.ಆರ್. ವಿಶ್ವನಾಥ್, ವಿ.ಪಿ. ಪ್ರದೀಪ್, ತುಡುಕೂರು ಮಂಜು, ಆತ್ಮಿಕ್ ಡಿ.ಜಿ, ಸಿ.ಡಿ. ಶಿವಕುಮಾರ್, ಪ್ರತಾಪ್, ಪಂಚಾಯತಿ ಅಧ್ಯಕ್ಷೆ ಜುಬೇದಾ ಅಸೈನರ್, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಮುಖಂಡರಾದ ಬಿ.ಬಿ. ನಿಂಗಯ್ಯ, ಎಂ.ಪಿ. ಕುಮಾರಸ್ವಾಮಿ, ದಲಿತ ಸಂಘಟನೆ, ಬಿಲ್ಲವ, ವೀರಶೈವ ಸಮುದಾಯದ ಮುಖಂಡರು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮಂಡಲ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಲಯ ಒಕ್ಕಲಿಗ ಸಂಘದ ಅಧ್ಯಕ್ಷ ಡಿ.ಬಿ. ಅಶೋಕ್, ಚಿಕ್ಕಮಗಳೂರು ಜಿಲ್ಲೆಯಲ್ಲಿ ನಾಡಪ್ರಭು ಕೆಂಪೇಗೌಡರ ಪ್ರಥಮ ಪುತ್ಥಳಿ ನಿರ್ಮಿಸಿದ ಹೆಗ್ಗಳಿಕೆ ನಮ್ಮದಾಗಿದ್ದು, ಇದರ ನಿರ್ಮಾಣಕ್ಕೆ ಒಕ್ಕಲಿಗ ಸಮುದಾಯದವರಿಂದ ದೇಣಿಗೆ ಸಂಗ್ರಹಿಸಲಾಗಿದೆ. ₹24 ಲಕ್ಷ ವ್ಯಯವಾಗಿರುವ ಕಂಚಿನ ಪುತ್ಥಳಿ 2,400 ಕೆ.ಜಿ. ತೂಕ, 12 ಅಡಿ ಎತ್ತರ 6 ಅಡಿ ಅಗಲ 16 ಅಡಿ ಉದ್ದವಿದೆ. ಬಿಡದಿಯ ಶಿಲ್ಪಿ ವಿಜಯ ಜಿ. ಅವರು ನಿರ್ಮಿಸಿದ್ದಾರೆ ಎಂದು ತಿಳಿಸಿದರು. ಆಡಳಿತಾತ್ಮಕ ಸಹಕಾರ ಪಡೆದು, ಎಲ್ಲಾ ಸಮುದಾಯಗಳ ಸಹಯೋಗದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ತಂತ್ರಜ್ಞಾನವಿಲ್ಲದ ಕಾಲದಲ್ಲಿಯೇ ಕೆಂಪೇಗೌಡರು ದೂರದೃಷ್ಟಿಯಿಂದ ಜಲಸಂಪನ್ಮೂಲ ರೈತರಿಗಾಗಿ ಮಾರುಕಟ್ಟೆ ಪಟ್ಟಣ ನಿರ್ಮಾಣ ಮಾಡಿದ್ದರುನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.