ADVERTISEMENT

ಸರ್ಕಾರಗಳು ಆರ್ಥಿಕ ದಿವಾಳಿಯಾಗಿವೆ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 6:34 IST
Last Updated 31 ಆಗಸ್ಟ್ 2020, 6:34 IST
ಕಿಮ್ಮನೆ ರತ್ನಾಕರ್
ಕಿಮ್ಮನೆ ರತ್ನಾಕರ್   

ಕೊಪ್ಪ: ‘ಕೋವಿಡ್ ಇರುವ ಕಾರಣಕ್ಕೆ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದೂಡಬೇಕು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಪಕ್ಷದ ಚಿಹ್ನೆ ನೀಡಬೇಕು’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ಪಟ್ಟಣದಲ್ಲಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯೊಂದಿಗೆ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಬೇಕು. ಇದರಿಂದ ಹೆಚ್ಚಿನ ಹಣವ್ಯಯ ಆಗುವುದನ್ನು ತಡೆಗಟ್ಟಬಹುದು’ ಎಂದು ಸಲಹೆ ನೀಡಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರ್ಥಿಕ ದಿವಾಳಿಯಾಗಿ ನಿಂತಿವೆ. ಅದನ್ನು ಮರೆಮಾಚಲು ಬಿಜೆಪಿ ಜಾತಿ, ಧರ್ಮ, ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಆಡಳಿತ ನಡೆಸುತ್ತಿದೆ. ಕೋವಿಡ್ ನಿಂದಾಗಿ ಜನರಿಗೆ ಚಿಕಿತ್ಸೆ ಸಿಗದೇ ಸಾಯುವವರ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಇದೀಗ ದೇವರ ಮೇಲೆ ಆರೋಪ ಹೊರಿಸಿದ್ದಾರೆ’ ಎಂದು ಹೇಳಿದರು.

ADVERTISEMENT

‘ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಬಡ ರೈತರನ್ನು ಸಂಕಷ್ಟಕ್ಕೆ ತಳ್ಳುವಂತೆ ಮಾಡಿದ್ದಾರೆ. ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದು ಕಾರ್ಮಿಕರನ್ನು ಕಡೆಗಣಿಸಿ, ಕಾರ್ಖಾನೆ ಮಾಲೀಕರನ್ನು ಉದ್ಧಾರ ಮಾಡುವಂತೆ ಮಾಡಿದ್ದಾರೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ವಿದ್ಯುತ್ ಇಲಾಖೆಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ವಿಮಾನ ನಿಲ್ದಾಣ ಖಾಸಗೀಕರಣ, ಬಿಎಸ್ಎನ್ಎಲ್ ಮುಚ್ಚಿ ಖಾಸಗಿಯವರಿಗೆ ಮಣೆ ಹಾಕಿದ್ದಾರೆ’ ಎಂದು ಆರೋಪಿಸಿದರು.

‘ಸರ್ಕಾರದ ಜನವಿರೋಧಿ ನೀತಿಯನ್ನು ಪ್ರತಿಭಟಿಸಲು ಕಾಂಗ್ರೆಸ್ ಮುಂದಾದರೆ, ಅದನ್ನು ತಡೆಯಲು ಬಿಜೆಪಿ ಸರ್ಕಾರ ಯತ್ನಿಸುತ್ತಿದೆ. ಆದರೆ, ಆಡಳಿತ ಪಕ್ಷದ ಸಭೆ, ಸಮಾರಂಭಗಳಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ’ ಎಂದರು.

ಶಾಸಕ ಟಿ.ಡಿ. ರಾಜೇಗೌಡ, ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗ, ಕ್ಷೇತ್ರ ಕಾಂಗ್ರೆಸ್ ಉಸ್ತುವಾರಿ ಪದ್ಮಪ್ರಸಾದ್ ಜೈನ್, ಕಿಸಾನ್ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣೇಗೌಡ, ಕೆಪಿಸಿಸಿ ತರಬೇತಿ ಘಟಕದ ಸದಸ್ಯರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.