ADVERTISEMENT

ಬಿಹಾರದ ಕಿಶನ್‌ಗಂಜ್‌: ಕಾಫಿನಾಡಿನ ಯೋಧನ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 8:27 IST
Last Updated 13 ಜೂನ್ 2022, 8:27 IST
ಯೋಧ ಗಣೇಶ್‌
ಯೋಧ ಗಣೇಶ್‌   

ಚಿಕ್ಕಮಗಳೂರು: ತಾಲ್ಲೂಕಿನ ಮಸಿಗದ್ದೆಯವರಾದ ಯೋಧ ಎಂ.ಎನ್‌.ಗಣೇಶ್‌ (36) ಅವರ ಮೃತದೇಹ ಬಿಹಾರದ ಕಿಶನ್‌ಗಂಜ್‌ ಪ್ರದೇಶದಲ್ಲಿ ಶನಿವಾರ ಪತ್ತೆಯಾಗಿದೆ.

ಗಣೇಶ್‌ಅವರು ಏ.24ರಂದು ಊರಿಗೆ ಬಂದಿದ್ದರು. ಜೂ.9ರಂದು ಊರಿನಿಂದ ವಾಪಸ್‌ಹೋಗಿದ್ದರು.

‘ಶನಿವಾರ ತಡರಾತ್ರಿ ಅಂಬುಲೆನ್ಸ್‌ ಸಿಬ್ಬಂದಿಯೊಬ್ಬರು ಫೋನ್‌ ಮಾಡಿ ಕಿಶನ್‌ಗಂಜ್‌ಬಳಿ ರಸ್ತೆ ಬದಿ ಗಣೇಶ್‌ ಅವರ ಶವ ಪತ್ತೆಯಾಗಿದೆ ಎಂದು ತಿಳಿಸಿದರು. ಪತಿ ಗಣೇಶ್‌ ಅವರು ಜೂನ್‌ 9ರಂದು ಊರಿನಿಂದ ಹೋಗಿದ್ದರು. ಜೂ.12ರಂದು ಕರ್ತವ್ಯಕ್ಕೆ ಹಾಜರಾಗಬೇಕಿತ್ತು’ ಎಂದು ಗಣೇಶ್‌ ಅವರ ಪತ್ನಿ ಶ್ವೇತಾ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಗಣೇಶ್‌ ಅವರು ಮಸಿಗದ್ದೆಯ ಕೂಲಿಕಾರ ನಾಗಯ್ಯ ಮತ್ತು ಗಂಗಮ್ಮ ದಂಪತಿ ಪುತ್ರ. ಪಿಯುಸಿ ವಿದ್ಯಾಭ್ಯಾಸ ಮಾಡಿದ್ದರು. 14 ವರ್ಷಗಳಿಂದ ಸೇನೆಯಲ್ಲಿ ಇದ್ದರು. ರಾಜಸ್ತಾನ, ದೆಹಲಿ, ಗೋವಾ, ಜಮ್ಮುವಿನಲ್ಲಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಗಣೇಶ್‌ ಗುವಾಹಟಿಯಲ್ಲಿ ಸೇನೆಯಲ್ಲಿ ಇದ್ದರು. ವಿವಾಹವಾಗಿ ಆರು ವರ್ಷವಾಗಿತ್ತು. ಪುತ್ರಿ ಆದ್ಯಾ ಇದ್ದಾರೆ.

ಅಸ್ಸಾಂಗೆ ವಾಪಾಸಾಗುವಾಗ ಅವಘಡ: ‘ಗಣೇಶ್‌ ಅವರು ಮಸಿಗದ್ದೆಯಿಂದ ಗುವಾಹಟಿಗೆ ವಾಪಸ್‌ ಪ್ರಯಾಣಿಸುವಾಗ ಮೃತಪಟ್ಟಿದ್ದಾರೆ. ಏನಾಯಿತು ಎಂಬುದು ಗೊತ್ತಿಲ್ಲ. ಕಿಶನ್‌ಗಂಜ್‌ ಪ್ರದೇಶಕ್ಕೆ ಪರಿಶೀಲನೆಗೆ ತಂಡ ತೆರಳಿರುವುದಾಗಿ ಸೇನೆಯವರು ತಿಳಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ತಿಳಿಸಿದರು.

‘ಮೃತದೇಹವನ್ನು ಇನ್ನು ಎರಡು ದಿನದಲ್ಲಿ ಊರಿಗೆಕಳಿಸಬಹುದು. ಸಂಬಂಧಪಟ್ಟವರೊಂದಿಗೆ ಫೋನ್‌ನಲ್ಲಿ ಸಂಪರ್ಕದಲ್ಲಿ ಇದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.