ಕೊಪ್ಪ: ‘ವಸತಿ ಶಾಲೆಯಲ್ಲಿ ಇಬ್ಬರು ಬಾಲಕಿಯರ ಸಾವಿನ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ(ಎಸ್ಐಟಿ) ರಚನೆ ಮಾಡಿ, ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು. ಇವುಗಳು ಆತ್ಮಹತ್ಯೆಯಲ್ಲ ಕೊಲೆ’ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್ ಹೇಳಿದರು.
ಪಟ್ಟಣ ಸಮೀಪದ ಹರಂದೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇಬ್ಬರು ಬಾಲಕಿಯರ ಅಸಹಜ ಸಾವಿನ ಪ್ರಕರಣವನ್ನು ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಒತ್ತಾಯಿಸಿ ಬಸ್ ನಿಲ್ದಾಣದ ಆವರಣದಲ್ಲಿ ಶುಕ್ರವಾರ ಸಾರ್ವಜನಿಕ ಹಿತರಕ್ಷಣಾ ಸಮಿತಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸುವುದರಿಂದ ಯಾವುದೇ ಪ್ರಯೋಜನವಿಲ್ಲ’ ಎಂದರು.
‘ಈ ಹಿಂದೆ ಬಾಲಕಿ ಮೃತಪಟ್ಟಾಗ ಇದ್ದ ಸಿಬ್ಬಂದಿ ಅಮಾನತುಗೊಂಡು ಬೇರೆಡೆ ಹೋದವರು ಮತ್ತೆ ಇಲ್ಲಿಗೆ ಹೇಗೆ ಬಂದರು. ಅವರ ಅವಧಿಯಲ್ಲೇ ಎರಡನೇ ಪ್ರಕರಣ ನಡೆದಿದ್ದರಿಂದ ಸಿಬ್ಬಂದಿಯನ್ನು ಬಂಧಿಸಿ ತನಿಖೆ ನಡೆಸಬೇಕಿತ್ತು. ಅವರನ್ನು ಅಮಾನತು ಮಾಡಿದರೆ ಸಾಲದು, ಕೆಲಸದಿಂದ ವಜಾ ಮಾಡಬೇಕಿತ್ತು’ ಎಂದು ಹೇಳೀದರು.
‘ಬಾಲಕಿ ಮೃತಪಟ್ಟ ದಿನ ಶಾಸಕರು ಭೇಟಿ ನೀಡಲಿಲ್ಲ. ಅವರ ಪಿ.ಎ ಹೋಗಿದ್ದು ಏಕೆ, ನಿಮ್ಮ ಬಗ್ಗೆ ಆಕ್ರೋಶ ವ್ಯಕ್ತವಾದ ನಂತರ ಭೇಟಿ ಕೊಟ್ಟಿದ್ದೀರಿ. ವಸತಿ ಶಾಲೆಗೆ ಬಾಲಕಿ ಪೋಷಕರು ಬರುವ ಮುನ್ನ ಯಾರು ಬಂದಿದ್ದರು. ಘಟನೆ ನಡೆದ ದಿನದ ಫೋನ್ ಕಾಲ್ ಲಿಸ್ಟ್ ತೆಗೆಸಿ, ತನಿಖೆ ನಡೆಸಬೇಕು’ ಎಂದರು.
‘ಪರಿಹಾರವು ಯಾರ ಮನೆಯ ಹಣವಲ್ಲ, ಬಿಕ್ಷೆಯಲ್ಲ. ಅದು ವಸತಿ ಶಾಲೆ ಮಕ್ಕಳ ವಿಮೆ. ಸರ್ಕಾರದ ಪರಿಹಾರ ಎಲ್ಲಿ, ಘಟನೆಯ ದಿನ ನೀವು(ಶಾಸಕರು) ನಿಮ್ಮ ಬಾಡಿಗೆ ಭಾಷಣಕಾರರನ್ನು ಕಳುಹಿಸಿದ್ದೀರಿ ಅವರು ಏನೇನೊ ಮಾತನಾಡುತ್ತಿದ್ದರು. ನಾನು ಪೊಲೀಸರಿಗೆ ಒತ್ತಾಯ ಮಾಡುತ್ತೇನೆ. ನಿಮ್ಮ ಮಗು ಎಂದು ತಿಳಿದುಕೊಂಡು ಆತ್ಮತೃಪ್ತಿಯ ಸಲುವಾಗಿ ಸರಿಯಾದ ತನಿಖೆ ಮಾಡಿ, ರಾಜಕೀಯದವರ ಕೈಗೊಂಬೆಯಾಗಿ ಕೆಲಸ ಮಾಡಬೇಡಿ’ ಎಂದು ಹೇಳಿದರು.
‘ಇತ್ತೀಚೆಗೆ ಒಂದು ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆದಾಗ ಸಾವಿಗೆ ನ್ಯಾಯ ಕೊಡಿಸಬೇಕಾದವರೂ ಪಾಲ್ಗೊಂಡು ಪ್ರತಿಭಟಿಸಿದರು. ನಿಮ್ಮ ಪ್ರತಿಭಟನೆ ಯಾರ ವಿರುದ್ಧ? ಕೋಳಿ ಕಾಯಲು ತೋಳ ಬಿಟ್ಟ ಹಾಗಿದೆ’ ಎಂದು ಲೇವಾಡಿ ಮಾಡಿದರು.
ಸುಧಾಕರ ಶೆಟ್ಟಿ ಮಾತನಾಡಿ, ‘ಸಾಯಲು ಸಿದ್ಧವಿದ್ದವರು ಹೊಸ ಬಟ್ಟೆ, ವಾಚ್ ಧರಿಸಿ, ಮೇಕಪ್ ಯಾಕೆ ಮಾಡಿಕೊಳ್ಳುತ್ತಾರೆ. ಘಟನೆ ನಡೆದ ತಕ್ಷಣ ಪೊಲೀಸರಿಗೆ ದೂರು ನೀಡಿಲ್ಲ ಏಕೆ. ಶಾಸಕರ ಪಿ.ಎ ಬಂದು ಹೋಗಿದ್ದಾರೆ. ಘಟನೆಗೆ ತಹಶೀಲ್ದಾರ್, ಡಿವೈಎಸ್ಪಿ ಉತ್ತರ ಕೊಡಬೇಕು. ಬಾಲಕಿಯರ ಕುಟುಂಬಕ್ಕೆ ನ್ಯಾಯ ಒದಗಿಸಲು ಜೆಡಿಎಸ್, ಬಿಜೆಪಿ ಜೊತೆಯಾಗಿ ಹೋರಾಟ ಮಾಡಲಿವೆ’ ಎಂದರು.
ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆಸಕೊಡಿಗೆ ಕೃಷ್ಣಮೂರ್ತಿ, ಕ್ಷೇತ್ರ ಆಟೊ ಚಾಲಕರ ಸಂಘದ ಗೌರವಾಧ್ಯಕ್ಷ ಎಚ್.ಆರ್.ಜಗದೀಶ್, ಆರ್ಯ ಈಡಿಗ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಪೃಥ್ವಿರಾಜ್, ಬಂಟರ ಸಂಘದ ಅಧ್ಯಕ್ಷ ಕೆ.ಎಸ್.ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿದರು.
ಮುಖಂಡರಾದ ನವೀನಕುಮಾರ್, ಶಾಂತಕುಮಾರ್ ಜೈನ್, ಪದ್ಮಾವತಿ ರಮೇಶ್, ಸುಧಾಕರ್, ಮಣಿಕಂಠನ್ ಕಂದಸ್ವಾಮಿ, ಶಾರದಾ ವಿಠಲ್, ಎಸ್.ಎನ್.ರಾಮಸ್ವಾಮಿ, ದಿನೇಶ್ ಹೊಸೂರ್, ಈ ಹಿಂದೆ ಮೃತಪಟ್ಟ ಬಾಲಕಿಯ ಪೋಷಕರು ಭಾಗವಹಿಸಿದ್ದರು.
ಸಮಾವೇಶಕ್ಕೂ ಮುನ್ನ ಬಾಲಕಿ ಮನೆ ಅಸೂಡಿಯಿಂದ ಕೊಪ್ಪ ಚಲೊ ನಡೆಸಲಾಯಿತು. ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ತಹಶೀಲ್ದಾರ್ ಲಿಖಿತಾ ಮೋಹನ್ ಅವರ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಸಮಾಜಕ್ಕೆ ಕಪ್ಪು ಚುಕ್ಕೆ’
ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ. ನಾಗರಿಕ ಸಮಾಜಕ್ಕೆ ಈ ಘಟನೆ ಕಪ್ಪು ಚುಕ್ಕಿ ಎಂದು ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಚ್.ಎಂ.ರವಿಕಾಂತ್ ಹೇಳಿದರು. ‘ಯಾರನ್ನು ತನಿಖೆ ಮಾಡಬೇಕಿತ್ತು ಅವರೇ ಮೊನ್ನೆ ಭಾಷಣ ಮಾಡಲು ಬಂದಿದ್ದರು. ಮಹಿಳಾ ವಾರ್ಡನ್ ನೇಮಿಸಲಾಗದವರು ಸರ್ಕಾರ ನಡೆಸಲು ಯೋಗ್ಯರಲ್ಲ. ಪ್ರಾಂಶುಪಾಲರು ವಾರ್ಡನ್ ಇಬ್ಬರನ್ನು ಕೆಲಸದಿಂದ ವಜಾ ಮಾಡಬೇಕು. ಮೃತ ಬಾಲಕಿಯರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಕೊಡಬೇಕು. ಕ್ರೈಸ್ ಸಂಸ್ಥೆ ಆಡಳಿತ ಪ್ರಶ್ನಾತೀತವಾಗಿದೆ. ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಬಾಲಕಿ ಕುಟುಂಬದ ಜತೆಗೆ ಎಂದಿಗೂ ನಾವು ನಿಲ್ಲುತ್ತೆವೆ. ಪೋಲೀಸರ ಮೇಲೆ ನಂಬಿಕೆ ಇಲ್ಲ ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.