ADVERTISEMENT

ಬೆಳೆ ವಿಮೆ ಪಾವತಿಯಲ್ಲಿ ತಾರತಮ್ಯ: ಪ್ರತಿಭಟನೆಗೆ ನಿರ್ಧಾರ

ಸಮಸ್ಯೆ ನಿವಾರಿಸದಿದ್ದರೆ ರೈತ ಪರವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 7:53 IST
Last Updated 1 ಜನವರಿ 2026, 7:53 IST
ಕೊಪ್ಪದಲ್ಲಿ ನಡೆದ ಸಭೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಸಹಕಾರಿ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು
ಕೊಪ್ಪದಲ್ಲಿ ನಡೆದ ಸಭೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಸಹಕಾರಿ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು   

ಕೊಪ್ಪ: ಹವಾಮಾನ ಆಧಾರಿತ ಬೆಳೆ ವಿಮೆ ಪಾವತಿಯಲ್ಲಿ ಈ ಬಾರಿ ವಿಮಾ ಸಂಸ್ಥೆಯಿಂದ ರೈತರಿಗೆ ತಾರತಮ್ಯವಾಗಿದೆ ಎಂದು ಆರೋಪಿಸಿರುವ ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 24 ಸಹಕಾರಿ ಸಂಸ್ಥೆಗಳು ಹೋರಾಟಕ್ಕೆ ನಿರ್ಧರಿಸಿವೆ. ಬೆಳೆ ವಿಮೆ ತಾರತಮ್ಯ ನಿವಾರಣೆ ನಿಟ್ಟಿನಲ್ಲಿ ರೈತ ಪರವಾಗಿ ಪಕ್ಷಾತೀತವಾಗಿ ಹೋರಾಟ ರೂಪಿಸಲು, ಬುಧವಾರ ಪಟ್ಟಣದ ಪುರಭವನದಲ್ಲಿ ಕೃಷಿ ಸಹಕಾರ ಸಂಘಗಳ ಪದಾಧಿಕಾರಿಗಳ ಸಭೆ ನಡೆಯಿತು.

ಈ ವೇಳೆ ಮಾತನಾಡಿದ ಹಿರೇಕೊಡಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ರಾಮಸ್ವಾಮಿ, ‘ಕರ್ನಾಟಕ ರಾಜ್ಯ ನೈಸರ್ಗಿಕ ನಿರ್ವಹಣೆ ಸಂಸ್ಥೆ(ಕೆ.ಎಸ್.ಎನ್.ಡಿ.ಸಿ) ಮಳೆಮಾಪನ ಸರಿಯಾಗಿ ನಿರ್ವಹಣೆ ಮಾಡದೆ ರೈತರಿಗೆ ಅನ್ಯಾಯವಾಗಿದೆ. ಲೋಕಸಭೆ, ವಿಧಾನಸಭೆಯಲ್ಲಿ ಚರ್ಚೆಯಾಗಿದೆ. ಆದರೆ, ಅಧಿಕಾರಿಗಳು ಏನೂ ಕ್ರಮವಹಿಸಿಲ್ಲ. ವಿಮಾ ಅವಧಿ 11 ತಿಂಗಳು ಮಾತ್ರ ಪರಿಗಣಿಸಲಾಗುತ್ತಿದೆ. ಜೂನ್ ತಿಂಗಳಲ್ಲಿ ಮಳೆಯಾಗಿದ್ದರೂ ಕೂಡ ಆ ತಿಂಗಳನ್ನು ಪರಿಗಣಿಸಿಲ್ಲ. ವಿಮೆ ಹಣ ನಾಲ್ಕು ತಿಂಗಳು ತಡವಾಗಿ ಕೊಟ್ಟಿದ್ದಾರೆ. ಇದರಿಂದ ವಿಮಾ ಕಂಪನಿಗೆ ಕೋಟ್ಯಂತರ ರೂಪಾಯಿ ಲಾಭವಾಗಿದೆ’ ಎಂದು ದೂರಿದರು.

ಶೃಂಗೇರಿಯ ಪಿ.ಸಿ.ಎ.ಆರ್.ಡಿ ಬ್ಯಾಂಕ್ ಅಧ್ಯಕ್ಷ ನೆಮ್ಮಾರ್ ದಿನೇಶ್ ಹೆಗ್ಡೆ ಮಾತನಾಡಿ, ಕ್ಷೇತ್ರದಲ್ಲಿರುವ 24 ಪ್ರಾಥಮಿಕ ಕೃಷಿ ಸಹಕಾರ ಸಂಸ್ಥೆ ಪೈಕಿ 19 ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಳೆಮಾಪನ ಹಾಳಾಗಿದೆ. ನಿಖರ ಮಾಹಿತಿ ಆಧರಿಸಿ ವಿಮೆ ಹಣ ನೀಡಬೇಕು. ಜೂನ್ ತಿಂಗಳು ಒಳಗೊಂಡಂತೆ ಪ್ರೀಮಿಯಂ ಕಟ್ಟಿದ್ದರೂ ಈವರೆಗೆ ವಿಮೆ ಹಣ ಪಾವತಿಸಿಲ್ಲ. ರೈತರಿಗೆ ಆದ ತಾರತಮ್ಯ ಆದಷ್ಟು ಬೇಗ ನಿವಾರಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಶಂಕರಪ್ಪ ಮಾತನಾಡಿ, ಅಧಿಕಾರಿಗಳ ಲೋಪದಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ರೈತರ ಆತ್ಮಹತ್ಯೆ ತಡೆಯಲು ಸರ್ಕಾರ ಬೆಳೆ ಪರಿಹಾರ ಕೊಡಲು ವಿಮೆ ಪದ್ಧತಿ ಜಾರಿಗೆ ತಂದಿತು. ಈ ಭಾಗದಲ್ಲಿ ಅಡಿಕೆ, ಕಾಳು ಮೆಣಸು ಪ್ರಕೃತಿ ವಿಕೋಪದಿಂದ ರೈತರಿಗೆ ಪ್ರತಿವರ್ಷ ನಷ್ಟವಾಗುತ್ತಿದೆ. ರೈತರ ಪರವಾಗಿ ಚಳವಳಿ ಮಾಡಬೇಕಿದೆ. ಮಳೆಮಾಪನ ಸರಿಪಡಿಸಬೇಕು. ವಿಮೆ ಟರ್ಮ್ ಶೀಟ್ ಮಾಡುವಾಗ ರೈತ ಪ್ರತಿನಿಧಿಗಳನ್ನು ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಆದ ತೆಕ್ಕೂರು ಸಹಕಾರ ಸಂಸ್ಥೆ ಅಧ್ಯಕ್ಷ ರಮೇಶ್ ಭಟ್, ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಆದ ಹೇರೂರು ಸಹಕಾರಿ ಸಂಸ್ಥೆ ನಿರ್ದೇಶಕ ಕುಕ್ಕುಡಿಗೆ ರವೀಂದ್ರ, ಕೊಪ್ಪ ಪಿ.ಎ.ಸಿ.ಎಸ್ ಸಂಸ್ಥೆ ಅಧ್ಯಕ್ಷ ಸತೀಶ್ ಅದ್ದಡ, ಅತ್ತಿಕೊಡಿಗೆ ಪ್ರಾಥಮಿಕ ಕೃಷಿ ಸಹಕಾರಿ ಸಂಸ್ಥೆ ಅಧ್ಯಕ್ಷ ಸುಂದರ್ ಮೂರ್ತಿ, ಎನ್.ಆರ್.ಪುರ ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಸುಧಾಕರ್ ಸೇರಿದಂತೆ ಮೂರು ತಾಲ್ಲೂಕಿನ ವಿವಿಧ ಸಹಕಾರಿ ಸಂಸ್ಥೆ, ಸಹಕಾರಿ ಬ್ಯಾಂಕ್‌ಗಳ ನಿರ್ದೇಶಕರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.