ADVERTISEMENT

ಕೊಪ್ಪ: ಹಿರಿಯ ಪ್ರಾಥಮಿಕ ಶಾಲೆಯ ಚಾವಣಿಗೆ ಕಬ್ಬಿಣದ ಕಂಬ ಆಸರೆ

ಶಿಥಿಲಾವಸ್ಥೆಗೆ ತಲುಪಿದ ಹರಿಹರಪುರ ಸರ್ಕಾರಿ ಶಾಲಾ ಕಟ್ಟಡ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 6:10 IST
Last Updated 14 ಜುಲೈ 2025, 6:10 IST
ಕೊಪ್ಪ ತಾಲ್ಲೂಕಿನ ಹರಿಹರಪುರ ಸರ್ಕಾರಿ ಶಾಲೆಯ ಚಾವಣಿಗೆ ಕಬ್ಬಿಣದ ಕಂಬ ನಿಲ್ಲಿಸಿರುವುದು
ಕೊಪ್ಪ ತಾಲ್ಲೂಕಿನ ಹರಿಹರಪುರ ಸರ್ಕಾರಿ ಶಾಲೆಯ ಚಾವಣಿಗೆ ಕಬ್ಬಿಣದ ಕಂಬ ನಿಲ್ಲಿಸಿರುವುದು   

ರವಿಕುಮಾರ್ ಶೆಟ್ಟಿಹಡ್ಲು

ಕೊಪ್ಪ: ತಾಲ್ಲೂಕಿನ ಹರಿಹರಪುರದ ರಾಮಾನಂದ ಸರಸ್ವತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಕುಸಿಯುವ ಆತಂಕ ಎದುರಾಗಿದೆ.

1961ರಲ್ಲಿ ಆರಂಭಗೊಂಡ ಈ ಶಾಲೆಯಲ್ಲಿ ‍ಪ್ರಸ್ತುತ 110 ವಿದ್ಯಾರ್ಥಿಗಳು ವ್ಯಾಂಸಗ ಮಾಡುತ್ತಿದ್ದಾರೆ. ಎಲ್.ಕೆ.ಜಿ, ಯು.ಕೆ.ಜಿ ತರಗತಿಗಳು ಇದೆ. ಬಹುತೇಕ ಕೊಠಡಿಗಳು ಸೋರುತ್ತಿದ್ದು, ಅನಿವಾರ್ಯವಾಗಿ ನಿತ್ಯ ಈ ಕೊಠಡಿಗಳಲ್ಲೇ ಪಾಠ ಪ್ರವಚನ ನಡೆಸುವಂತಾಗಿದೆ.

ADVERTISEMENT

ದೊಡ್ಡ ಕೊಠಡಿಯಲ್ಲಿ ಚಾವಣಿ ಕುಸಿಯುವ ಹಂತಕ್ಕೆ ತಲುಪಿದೆ. ಪಕಾಸು, ರೀಪುಗಳು ಮುರಿದಿವೆ. ಚಾವಣಿ ಕುಸಿಯದಂತೆ ಕಬ್ಬಿಣದ ಸೆಂಟ್ರಿಂಗ್ ಕಂಬ ನಿಲ್ಲಿಸಲಾಗಿದೆ. ಈ ಕೊಠಡಿಗೆ ಹೊಂದಿಕೊಂಡಿರುವ 1ನೇ ತರಗತಿ, 6ನೇ ತರಗತಿ, 3ನೇ ತರಗತಿ ಕೊಠಡಿ ಗೋಡೆಗಳು ಬಿರುಕು ಬಿಟ್ಟಿದೆ. ಹೆಂಚುಗಳು ಅಲ್ಲಲ್ಲಿ ಒಡೆದಿದ್ದು ಮಳೆ ನೀರು ಗೋಡೆ ಮೇಲೆ, ವಿದ್ಯಾರ್ಥಿಗಳ ಮೇಲೆ ಸೋರುತ್ತಿದೆ.

ಇತ್ತೀಚೆಗೆ ಕಾರಿಡಾರ್‌ನ ಮೂಲೆಯಲ್ಲಿ ಪಿಲ್ಲರ್ ಕಂಬವೊಂದರ ಗಾರೆ ಬಾಯ್ತೆರೆದಿತ್ತು. ಇದನ್ನು ಗಮನಿಸಿದ ಶಿಕ್ಷಕರು ಸಿಮೆಂಟ್ ಪ್ಯಾಚ್ ವರ್ಕ್ ಮಾಡಿಸಿದ್ದಾರೆ. ಇದ್ದಕ್ಕಿದ್ದಂತೆ ಮತ್ತೊಮ್ಮೆ ಗಾರೆ ಕಿತ್ತು ಬಂದಾಗ ಪಕ್ಕದ ದೊಡ್ಡ ಕೊಠಡಿ ಚಾವಣಿ ಕುಸಿಯುವ ಹಂತಕ್ಕೆ ತಲುಪಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಶಿಕ್ಷಕರು ಇಲಾಖೆ ಗಮನಕ್ಕೆ ತಂದಿದ್ದಾರೆ.

ಶಾಲಾಭಿವೃದ್ಧಿ ಸಮಿತಿ, ಹಿರಿಯ ವಿದ್ಯಾರ್ಥಿಗಳು, ದಾನಿಗಳಿಂದ ಶಾಲೆಯಲ್ಲಿ ಕೆಲವು ಅಭಿವೃದ್ಧಿ ಕೆಲಸಗಳು ನಡೆದಿವೆ. ಆದರೆ, ಕೊಠಡಿ ದುರಸ್ತಿಪಡಿಸದಿದ್ದರೆ ವಿದ್ಯಾರ್ಥಿಗಳ ಜೀವಕ್ಕೆ ಕುತ್ತು ತರುವಂತಿದೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಶಾಲೆಯ ಗೋಡೆ ಬಿರುಕು ಮೂಡಿದೆ
ಶಾಲೆಯ ಗೋಡೆ ಬಿರುಕು ಮೂಡಿದೆ
ಕಟ್ಟಡ ದುರಸ್ತಿಗೆ ಪಟ್ಟಿ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅನುದಾನ ಬಂದ ಕೂಡಲೇ ಕೆಲಸ ಆರಂಭಗೊಳ್ಳಲಿದೆ. ಅಪಾಯವಿರುವ ಕೊಠಡಿಯಲ್ಲಿ ಮಕ್ಕಳನ್ನು ಕೂರಿಸದಂತೆ ಸೂಚಿಸಲಾಗುವುದು .
ರಾಘವೇಂದ್ರ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಕೊಪ್ಪ
ಚಾವಣಿ ಗೋಡೆ ಗಟ್ಟಿ ಇಲ್ಲ. ದುರಸ್ತಿಗೆ ₹2 ಲಕ್ಷ ಮಂಜೂರು ಆಗಿದೆ ಎಂಬ ಮಾಹಿತಿ ಇದೆ. ಡಯಟ್‌ನಿಂದ ಒಬ್ಬರು ಇತ್ತೀಚೆಗೆ ಭೇಟಿ ಕೊಟ್ಟಿದ್ದರು
ಕಮಲಾಕ್ಷಿ ಮುಖ್ಯ ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಹರಪುರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.