ಕೊಪ್ಪ: ಪಟ್ಟಣದ ಬಸ್ ನಿಲ್ದಾಣವು ಖಾಸಗಿ ವಾಹನಗಳ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿರುವುದಕ್ಕೆ ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಿಲ್ದಾಣದ ಆವರಣದಲ್ಲಿ ಖಾಸಗಿ ವಾಹನಗಳನ್ನು ಹೆಚ್ಚಾಗಿ ನಿಲ್ಲಿಸುತ್ತಿರುವುದರಿಂದ ಇಲ್ಲಿ ಬಸ್‌ಗಳನ್ನು ತಿರುಗಿಸಲು ಜಾಗ ಸಾಕಾಗುತ್ತಿಲ್ಲ. ಇದು ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ.
ಬಸ್ ನಿಲ್ದಾಣದ ಎದುರು ಇರುವ ಪಟ್ಟಣ ಪಂಚಾಯಿತಿಗೆ ಸೇರಿದ ಮಳಿಗೆಗಳ ಮುಂದೆ ಬೆಳಿಗ್ಗೆ ಖಾಸಗಿ ವಾಹನಗಳನ್ನು ನಿಲ್ಲಿಸಿ ಬೇರೆ ಊರುಗಳಿಗೆ ಹೋಗುತ್ತಾರೆ. ಇದರಿಂದ ಪ್ರತಿನಿತ್ಯ ಬಸ್ ಚಾಲಕರಿಗೆ, ನಿರ್ವಾಹಕರಿಗೆ ಕಿರಿಕಿರಿಯಾಗುತ್ತಿದೆ.
ಸಾರ್ವಜನಿಕರ ಆಕ್ಷೇಪದ ಬಳಿಕ ಪಟ್ಟಣ ಪಂಚಾಯಿತಿ ಫಲಕ ಅಳವಡಿಸಿ, ಸರ್ಕಾರಿ ಹಾಗೂ ಖಾಸಗಿ ಬಸ್ ಹೊರತುಪಡಿಸಿ ಉಳಿದೆಲ್ಲ ಖಾಸಗಿ ವಾಹನಗಳನ್ನು ನಿಲ್ದಾಣದ ಒಳಗೆ ನಿಷೇಧಿಸಿದ್ದು, ಒಂದು ವೇಳೆ ನಿಲ್ಲಿಸಿದರೆ ಪೊಲೀಸ್ ಇಲಾಖೆಯಿಂದ ನಿಯಮಾನುಸಾರ ದಂಡ ವಿಧಿಸಿ, ವಾಹನ ಸುಪರ್ದಿಗೆ ಪಡೆಯುವುದಾಗಿ ಎಚ್ಚರಿಸಿದೆ.
ಪಟ್ಟಣ ಪಂಚಾಯಿತಿಯಿಂದ ಹರಾಜು ಮೂಲಕ ಪಡೆದಿರುವ ಮಳಿಗೆಗಳಿಗೆ ಸರಕುಗಳನ್ನು ತರುವ ವಾಹನಗಳಿಗೆ ಮಾತ್ರ ಅರ್ಧ ಗಂಟೆ ಕಾಲಾವಕಾಶ ನೀಡಲಾಗಿದೆ ಎಂದು ಫಲಕದಲ್ಲಿ ಬರೆಯಲಾಗಿದೆ. ಆದರೆ, ಖಾಸಗಿ ವಾಹನಗಳನ್ನು ಪಾರ್ಕಿಂಗ್ ಮಾಡುವುದನ್ನು ಹಲವರು ಇನ್ನೂ ಮುಂದುವರಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಬಸ್ ನಿಲ್ದಾಣದ ನಿರ್ವಹಣೆ ಕೂಡ ಸಮರ್ಪಕವಾಗಿ ನಡೆಯುತ್ತಿಲ್ಲ. ಕಟ್ಟಡದಲ್ಲಿರುವ ಮಳಿಗೆ ದುರಸ್ತಿಪಡಿಸುವ ಕೆಲಸ ಮಾಡುವುದಾಗಿ ಹೇಳಿದ ಚುನಾಯಿತ ಪ್ರತಿನಿಧಿಗಳ ಹೇಳಿಕೆ ಕೇವಲ ಮಾತಿಗೆ ಸೀಮಿತವಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಬಸ್ ತಿರುಗಿಸಲು ಜಾಗ ಸಾಲುತ್ತಿಲ್ಲ. ಹಲವು ಬಾರಿ ಸಮಸ್ಯೆ ಹೇಳಿದರೂ ಪರಿಹಾರ ಸಿಕ್ಕಿಲ್ಲ.ಜನಾರ್ದನ್ ಖಾಸಗಿ ಬಸ್ ಏಜೆಂಟ್ ಕೊಪ್ಪ
ವಾಹನ ಪಾರ್ಕಿಂಗ್‌ಗೆ ಜಾಗದ ಕೊರತೆ ಇದ್ದು ಎರಡು ಪಾರ್ಕಿಂಗ್ ಯಾರ್ಡ್‌ಗಳನ್ನು ಗುರುತಿಸಲಾಗಿದೆ. ಪಟ್ಟಣ ಪಂಚಾಯಿತಿ ಅದನ್ನು ಪರಿಶೀಲಿಸಬೇಕುಬಸವರಾಜ್ ಜಿ.ಕೆ. ಸಬ್ ಇನ್‌ಸ್ಪೆಕ್ಟರ್
‘ರಸ್ತೆ ವಿಸ್ತರಣೆ ಶೀಘ್ರ ನಡೆಯಲಿ’
ಖಾಸಗಿ ವಾಹನಗಳನ್ನು ನಿಗದಿತ ದಿನದಂದು ರಸ್ತೆ ಒಂದು ಬದಿಯಲ್ಲಿ ನಿಲ್ಲಿಸಲು ಸೂಚನೆ ಫಲಕ ಅಳವಡಿಸಲಾಗಿದೆ. ದಿನ ಕಳೆದಂತೆ ಪಟ್ಟಣದಲ್ಲಿ ವಾಹನಗಳ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಮುಖ್ಯ ರಸ್ತೆಯೂ ಕಿರಿದಾಗಿದ್ದು ಇಲ್ಲಿ ಪಾರ್ಕ್ ಮಾಡುವ ವಾಹನಗಳು ಅರ್ಧ ರಸ್ತೆಗೆ ನಿಂತಿರುತ್ತವೆ. ಇದರಿಂದ ಹೋಗುವ ಬರುವ ವಾಹನ ಚಾಲಕರು ಪರದಾಡುವಂತಾಗಿದೆ. ರಸ್ತೆ ವಿಸ್ತರಿಸುವ ಪ್ರಸ್ತಾವ ಇದ್ದರೂ ಅದನ್ನು ಅನುಷ್ಠಾನ ಮಾಡುವಲ್ಲಿ ಪಟ್ಟಣ ಪಂಚಾಯಿತಿ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂಬುದು ಜನರ ಒತ್ತಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.