ಕೊಪ್ಪ: ಪಟ್ಟಣದ ಬಸ್ ನಿಲ್ದಾಣದ ಹಿಂಭಾಗದ ಮಳಿಗೆಗಳನ್ನು ದುರಸ್ತಿ ಪಡಿಸುವಲ್ಲಿ ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ ತೋರಿದೆ.
ಕಟ್ಟಡದಲ್ಲಿರುವ ಒಟ್ಟು 20 ಮಳಿಗೆಗಳು ದುರಸ್ತಿಪಡಿಸದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಹತ್ತಾರು ವರ್ಷಗಳಿಂದ ಬಾಗಿಲು ಮುಚ್ಚಿರುವ ಮಳಿಗೆಗಳಿಂದಾಗಿ ಪಟ್ಟಣ ಪಂಚಾಯಿತಿಗೆ ಕೋಟ್ಯಂತರ ರೂಪಾಯಿ ಆದಾಯ ಕೈ ತಪ್ಪುತ್ತಿದೆ.
ಪಂಚಾಯಿತಿಯು ಮಳಿಗೆ ದುರಸ್ತಿಪಡಿಸಿ ಹರಾಜು ಪ್ರಕ್ರಿಯೆ ನಡೆಸಿದ್ದರೆ ವ್ಯಾಪಾರ ವ್ಯವಹಾರ ಮಾಡುವವರ ಜೀವನೋಪಾಯಕ್ಕೆ ಅನುಕೂಲವಾಗುತ್ತಿತ್ತು. ಬೀದಿಬದಿ ವ್ಯಾಪಾರ ಮಾಡುವ ಮಂದಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಿದಂತಾಗುತ್ತಿತ್ತು. ಈ ಮೂಲಕ ಪಾರ್ಕಿಂಗ್, ಪಾದಚಾರಿ ಮಾರ್ಗದ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಣೆ ಮಾಡಲು ಒತ್ತು ನೀಡಿದಂತಾಗುತ್ತಿತ್ತು.
‘ಮಳಿಗೆ ದುರಸ್ತಿಗೆ ಪಟ್ಟಣ ಪಂಚಾಯಿತಿ ಮುಂದಾಗಿದೆ, ಶಿವಮೊಗ್ಗದಿಂದ ಎಂಜಿನಿಯರ್ ತಂಡ ಪರಿಶೀಲಿಸಿದೆ. ಸದ್ಯದಲ್ಲಿಯೇ ಕಾಮಗಾರಿಯೂ ಆರಂಭಗೊಳ್ಳಲಿದೆ’ ಎಂಬುದು ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಪ್ರತಿಬಾರಿಯ ಉತ್ತರವಾಗಿದೆ.
ಪಟ್ಟಣದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಸ್ಥಳಾವಕಾಶ ಇಲ್ಲದೆ ಬಸ್ ನಿಲ್ದಾಣ ಆವರಣದಲ್ಲಿ ಖಾಸಗಿ ವಾಹನಗಳ ಪಾರ್ಕಿಂಗ್ ಮಾಡಲಾಗುತ್ತಿದೆ. ಕೆಲವೊಮ್ಮೆ ಬಸ್ ತಿರುಗಿಸಲು ಇದರಿಂದ ಸಮಸ್ಯೆಯಾಗುತ್ತಿದೆ. ಇದರಿಂದ ಪ್ರಯಾಣಿಕರಿಗೂ ಕಿರಿಕಿರಿ ಉಂಟು ಮಾಡುತ್ತಿದೆ. ಈ ಸಮಸ್ಯೆ ನಿವಾರಿಸಲು ಪಟ್ಟಣ ಪಂಚಾಯಿತಿ ಆಸಕ್ತಿ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರೋತ್ಥಾನದಿಂದ ಮಳಿಗೆ ದುರಸ್ತಿ ಕಾಮಗಾರಿ ನಡೆಯಲಿದೆ. ಮುಂದಿನ ವಾರ ಕೆಲಸ ಆರಂಭಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ.ಗಾಯತ್ರಿ ವಸಂತ್ ಪಟ್ಟಣ ಪಂಚಾಯಿತಿ ಅಧ್ಯಕ್ಷೆ (ನಿರ್ಗಮಿತ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.