ಕೊಪ್ಪ: ಮತಗಳ್ಳತನ ವಿರುದ್ಧ ಹೋರಾಟ ನಡೆಸದಿದ್ದರೆ ಪ್ರಜಾಪ್ರಭುತ್ವ ನಾಶ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಜಿತ್ ದಂಡಿನಮಕ್ಕಿ ತಿಳಿಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಶೃಂಗೇರಿ ಕ್ಷೇತ್ರ ಯುವ ಕಾಂಗ್ರೆಸ್ ಸಮಿತಿ, ಕೊಪ್ಪ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಮತಗಳ್ಳತನದ ವಿರುದ್ಧ ಜನಜಾಗೃತಿ ಅಭಿಯಾನ’ ಭಾಗವಾಗಿ ಸಹಿ ಸಂಗ್ರಹ ಮತ್ತು ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ಹೋಬಳಿ, ಬೂತ್ ಮಟ್ಟದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಲಾಗಿದೆ. ಮತಗಳ್ಳತನ ವಿರುದ್ಧ ರಾಹುಲ್ ಗಾಂಧಿ ಅವರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಕೆಡಿಪಿ ಸದಸ್ಯ ರಾಜಶಂಕರ್ ಮಾತನಾಡಿ, ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ಹತ್ತಿಕ್ಕಬೇಕು. ಪ್ರಜಾಪ್ರಭುತ್ವ ಉಳಿವಿಗಾಗಿ ಹೋರಾಡಬೇಕು, ಮತಗಳ್ಳತನ ಹೋಗಲಾಡಿಸಲು ಎಲ್ಲರೂ ಒಗ್ಗೂಡಬೇಕು ಎಂದರು.
ಮುಖಂಡ ನವೀನ್ ಕರುವಾನೆ, ಬಿಜೆಪಿಗರು ಇಂದು ಅಧಿಕಾರಕ್ಕಾಗಿ ಮತಗಳ್ಳತನ ಮಾಡಿದ್ದಾರೆ. ಇಂದಿರಾಗಾಂಧಿ, ನೆಹರೂ ಪ್ರಧಾನಿಯಾಗಿದ್ದಾಗ ಭಾರತಕ್ಕೆ ಭದ್ರತೆ ಇತ್ತು, ಈಗ ಭದ್ರತೆ ಇಲ್ಲ. ಬಿಜೆಪಿಗರು ಮತಗಳ್ಳತನದಿಂದ ಗೆದ್ದಿದಾರೆ ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನುಗ್ಗಿ ಮಂಜುನಾಥ್, ನೋಟು ಅಮಾನ್ಯ ಪ್ರಕರಣ ಜನಸಾಮಾನ್ಯರಿಗೆ ಸಮಸ್ಯೆ ತಂದಿತು. ಆದರೆ ಮಾಧ್ಯಮಗಳು ಮೋದಿ, ಬಿಜೆಪಿ ಪರವಾಗಿ ನಿಂತವು. ಬಿಜೆಪಿ ನಿರೀಕ್ಷೆಗೂ ಮೀರಿ ಗೆಲುವು ಸಾಧ್ಯವಾಗಿದ್ದು, ಮತಗಳ್ಳತನದಿಂದ. ಪ್ರಧಾನಿ ಮೋದಿ, ಚುನಾವಣಾ ಆಯೋಗವು ಇದೀಗ ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಹೆದರುತ್ತಿದೆ. ಶಾಸಕ ರಾಜೇಗೌಡ ಅವರ ವಿರುದ್ಧ ಜೀವರಾಜ್ ಅವರ ಷಡ್ಯಂತ್ರದ ಒಂದೊಂದೇ ಮೆಟ್ಟಿಲು ಕಳಚಿ ಬೀಳುವ ಕಾಲ ದೂರವಿಲ್ಲ ಎಂದರು.
ಶೃಂಗೇರಿ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ದುರ್ಗಾ ಚರಣ್, ಕಾರ್ಯದರ್ಶಿ ಕಾರ್ತಿಕ್ ಕಾರ್ಗದ್ದೆ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಾನಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತಯೀಬ್, ಮುಖಂಡರಾದ ನವೀನ್ ಮಾವಿನಕಟ್ಟೆ, ಓಣಿತೋಟ ರತ್ನಾಕರ್, ಪ್ರಶಾಂತ್, ನಿಸಾರ್ ನಾರ್ವೆ, ಸಂತೋಷ್ ಕುಲಾಸೋ, ಪಟ್ಟಣ ಪಂಚಾಯಿತಿ ಸದಸ್ಯರಾದ ವಿಜಯಕುಮಾರ್, ಮೈತ್ರಾ ಗಣೇಶ್, ಸಂದೇಶ್, ಸುಮಾ ಪರ್ವತೆಗೌಡ, ಮಾಜಿ ಅಧ್ಯಕ್ಷೆ ಸಿ.ಕೆ.ಮಾಲತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.