ADVERTISEMENT

ಕೋಟೆ ಕೆರೆಗೆ ಕಾಯಕಲ್ಪ; ಕಾಮಗಾರಿ ಶುರು

ಬಿ.ಜೆ.ಧನ್ಯಪ್ರಸಾದ್
Published 12 ಮೇ 2019, 20:00 IST
Last Updated 12 ಮೇ 2019, 20:00 IST
ಹೂಳೆತ್ತುವ ಕಾಮಗಾರಿ ಪ್ರಜಾವಾಣಿ ಚಿತ್ರ– ಎ.ಎನ್‌.ಮೂರ್ತಿ
ಹೂಳೆತ್ತುವ ಕಾಮಗಾರಿ ಪ್ರಜಾವಾಣಿ ಚಿತ್ರ– ಎ.ಎನ್‌.ಮೂರ್ತಿ   

ಚಿಕ್ಕಮಗಳೂರು: ಕೊಳಚೆ ನೀರು, ಗಿಡಗಂಟಿ, ಪ್ಲಾಸ್ಟಿಕ್‌, ತ್ಯಾಜ್ಯಮಯವಾಗಿ ದುರವಸ್ಥೆಗೆ ತಲುಪಿದ್ದ ನಗರದ ಕೋಟೆ ಕೆರೆ ಒಣಗಿದ್ದು, ಕೆರೆಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಕಾಮಗಾರಿ ಶುರುವಾಗಿದೆ.

ರಾಜ್ಯಸಭಾ ಸದಸ್ಯ ಜೈರಾಂ ರಮೇಶ್‌ ಅವರ ಅನುದಾನದಲ್ಲಿ ಈ ಕಾಮಗಾರಿಗೆ ₹ 1.30 ಕೋಟಿ ಮಂಜೂರಾಗಿದೆ. ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ಹೊಣೆ ವಹಿಸಲಾಗಿದೆ. ಕೆರೆ ಅಂಗಳದ ಕೊಳಚೆ, ಹೂಳೆತ್ತುವ ಕಾಯಕದಲ್ಲಿ ಜೆಸಿಬಿ, ಹಿಟಾಚಿ, ಟ್ರಾಕ್ಟರ್‌ಗಳು ತೊಡಗಿವೆ.

ಕೆರೆಯ ಸುತ್ತಲಿದ್ದ ಚೈನ್‌ಲಿಂಕ್‌ ಬೇಲಿಯನ್ನು ತೆರವುಗೊಳಿಸಲಾಗಿದೆ. ನಗರದ ಚರಂಡಿ ಕೊಳಕು ಕೆರೆಗೆ ಹರಿಯದಂತೆ ವ್ಯವಸ್ಥೆ ಮಾಡಲಾಗುತ್ತಿದೆ. ದಂಡೆಗೆ ಕಲ್ಲುಗಳನ್ನು ಅಳವಡಿಸಿ ಲೈನಿಂಗ್‌ ಮಾಡಲಾಗುತ್ತಿದೆ. ಅಂಗಳದಲ್ಲಿನ ಜೊಂಡುಹುಲ್ಲು, ಗಿಡಗಂಟಿಗಳನ್ನು ಬಗೆದು ತೆರವುಗೊಳಿಸಲಾಗುತ್ತಿದೆ.

ADVERTISEMENT

ನಗರದೊಡಲಿನ ಈ ಕೆರೆ ಮಲಿನಮಯವಾಗಿರುವುದು, ನೀರು ಬಳಕೆಗೆ ಯೋಗ್ಯವಾಗಿಲ್ಲದಿರುವ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನಗರಸಭೆ, ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು. ಕೆರೆ ಅಭಿವೃದ್ಧಿಗೆ ಕ್ರಮ ವಹಿಸಬೇಕು ಎಂದುಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಸ್ವಯಂ ಸೇವಾಸಂಸ್ಥೆಗಳವರು, ಪರಿಸರಾಸಕ್ತರು, ನಾಗರಿಕರು ಒತ್ತಡ ಹಾಕಿದ್ದರು.

‘ಕಾಮಗಾರಿ ಶುರುವಾಗಿ ಒಂದು ತಿಂಗಳಾಗಿದೆ. ಆರು ತಿಂಗಳಲ್ಲಿ ಮುಗಿಸುವ ಗುರಿ ಇದೆ. ಫೀಡರ್‌ ಚಾನೆಲ್‌ ಕಾಂಕ್ರಿಟ್‌ ಡ್ರೈನ್‌ ನಿರ್ಮಾಣ, ಫಿಲ್ಟರೇಷನ್‌ ಬಂಡ್‌ ನಿರ್ಮಾಣ, ಲೈನಿಂಗ್‌, ಗಿಡಗಂಟಿ ತೆರವು, ಹೂಳು ಎತ್ತುವುದು (6 ಇಂಚು) ಇವಿಷ್ಟು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ’ ಎಂದು ನಿರ್ಮಿತಿ ಕೇಂದ್ರ ರಾಮಕೃಷ್ಣೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆರೆಯ ಉತ್ತರ ಭಾಗದಲ್ಲಿ ಫಿಲ್ಟರ್‌ ಟ್ಯಾಂಕ್‌ ನಿರ್ಮಿಸಲಾಗುತ್ತದೆ. ಈ ಟ್ಯಾಂಕ್‌ ನಿರ್ಮಾಣ ಪೂರ್ಣವಾದರೆ ಗಲೀಜು ಕೆರೆಯೊಳಗೆ ಸೇರುವುದಕ್ಕೆ ತಡೆ ಬೀಳುತ್ತದೆ. ಈಗ ಅಭಿವೃದ್ಧಿ ಪಡಿಸಿದ ನಂತರ ನಿರ್ವಹಣೆ ಮಾಡದಿದ್ದರೆ ಕೆರೆ ಯಥಾಸ್ಥಿತಿಗೆ ಬರುತ್ತದೆ. ಕಳೆ ಸಸ್ಯರಾಶಿಯನ್ನು ಆಗಾಗ್ಗೆ ತೆರವುಗೊಳಿಸಬೇಕು, ಕಾಲಕಾಲಕ್ಕೆ ಫಿಲ್ಟರ್‌ ಬೆಡ್‌ ಸ್ವಚ್ಛಗೊಳಿಸಬೇಕು, ತ್ಯಾಜ್ಯ ಸೇರದಂತೆ ನಿಗಾ ವಹಿಸಬೇಕು. ಸಂಬಂಧಪಟ್ಟ ಇಲಾಖೆಯವರು ಈ ನಿಟ್ಟಿನಲ್ಲಿ ಆದ್ಯ ಗಮನ ಹರಿಸಬೇಕು’ ಎಂದು ತಿಳಿಸಿದರು.

‘ಇದೊಂದು ಐತಿಹಾಸಿಕ ಕೆರೆ. ನಿರ್ಲಕ್ಷ್ಯದಿಂದಾಗಿ ಹದಗೆಟ್ಟಿದೆ. ಕೆರೆಯ ನೀರಿನ ಮೂಲಗಳನ್ನು ಭದ್ರ ಮಾಡಬೇಕು, ಮಳೆ ನೀರು ಸರಾಗವಾಗಿ ಕೆರೆ ತಲುಪುವಂತೆ ವ್ಯವಸ್ಥೆ ಮಾಡಬೇಕು. ಒತ್ತುವರಿಯಾಗಿದ್ದರೆ ತೆರವುಗೊಳಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಕೆರೆಗೆ ತಾಜ್ಯ ಎಸೆಯುವುದನ್ನು ತಪ್ಪಿಸಬೇಕು’ ಎಂದು ಕೋಟೆ ನಿವಾಸಿ ಸೀನಪ್ಪ ಒತ್ತಾಯಿಸುತ್ತಾರೆ.

‘ದಂಡೆಯಲ್ಲಿ ‘ವಾಕಿಂಗ್‌ ಪಾಥ್‌’ ವೀಕ್ಷಣ ಕಟ್ಟೆ ಇತ್ಯಾದಿ ನಿರ್ಮಿಸಿ ಕೆರೆಯ ಅಂದವನ್ನು ಹೆಚ್ಚಿಸಬೇಕು. ಕೆರೆಯನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಬೇಕು ಸಂಬಂಧಪಟ್ಟವರಿಗೆ ತಿಳಿಸಲಾಗಿದೆ’ ಎಂದು ಸ್ವಚ್ಛ ಟ್ರಸ್ಟ್‌ನ ಡಾ.ಶುಭಾ ವಿಜಯ್‌ ತಿಳಿಸಿದರು.

‘ಸ್ವಚ್ಛ ಟ್ರಸ್ಟ್‌ನಿಂದ ಕೆರೆ ಅಭಿವೃದ್ಧಿ ಸಮಿತಿಯೊಂದನ್ನು ರಚಿಸಲಾಗಿದೆ. ನಿವೃತ್ತ ಎಂಜಿನಿಯರ್‌ ಶಿವಪ್ರಕಾಶ್‌, ನಾಗೇಂದ್ರ, ಡಾ.ಗೀತಾವೆಂಕಟೇಶ್‌ ಮೊದಲಾದವರು ಸಮಿತಿಯಲ್ಲಿ ಇದ್ದಾರೆ. ಕೆರೆ ನಿರ್ವಹಣೆಯನ್ನು ಸಣ್ಣ ನೀರಾವರಿ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ ಯಾವುದಾದರೊಂದು ಸಂಸ್ಥೆಗೆ ವಹಿಸುವಂತೆ ಕೋರಲಾಗಿದೆ. ಸಮಿತಿಯು ಮೇಲುಸ್ತುವಾರಿ ಮಾಡಲಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.