ADVERTISEMENT

ಕೊಪ್ಪ | 'ಕುವೆಂಪು ವಿಚಾರಧಾರೆ ಅಳವಡಿಸಿಕೊಳ್ಳಿ'

ಕುವೆಂಪು ಜನ್ಮಸ್ಥಳದಲ್ಲಿ ವಿಶ್ವಮಾನವ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 7:18 IST
Last Updated 30 ಡಿಸೆಂಬರ್ 2025, 7:18 IST
ಕೊಪ್ಪ ತಾಲ್ಲೂಕು ಹಿರೇಕೊಡಿಗೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆಯನ್ನು ತಹಶೀಲ್ದಾರ್ ನೂರುಲ್ ಹುದಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಉದ್ಘಾಟಿಸಿದರು
ಕೊಪ್ಪ ತಾಲ್ಲೂಕು ಹಿರೇಕೊಡಿಗೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆಯನ್ನು ತಹಶೀಲ್ದಾರ್ ನೂರುಲ್ ಹುದಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಉದ್ಘಾಟಿಸಿದರು   

ಕೊಪ್ಪ: ‘ರಾಷ್ಟ್ರಕವಿ ಕುವೆಂಪು ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಘವೇಂದ್ರ ತಿಳಿಸಿದರು.

ಕುವೆಂಪು ಅವರ ಜನ್ಮಸ್ಥಳವಾದ ತಾಲ್ಲೂಕಿನ ಹಿರೇಕೊಡಿಗೆಯಲ್ಲಿ ಸೋಮವಾರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಎಂಬುದು ರಾಷ್ಟ್ರಕವಿ ಕುವೆಂಪು ಅವರ ವಿಶ್ವ ಮಾನವ ಸಂದೇಶದ ಪ್ರಮುಖ ತತ್ವಗಳಾಗಿವೆ. ನಾವು ಯಾವುದೇ ಸಂಕೋಲೆಗಳಿಗೆ ಒಳಗಾಗಬಾರದು. ಪ್ರತಿಯೊಬ್ಬರೂ ಹುಟ್ಟುತ್ತಾ ವಿಶ್ವಮಾನವರಾಗಿರುತ್ತಾರೆ. ನಂತರ ಬೆಳೆಯುತ್ತಾ ಸಂಕುಚಿತ ಗುಣಗಳನ್ನು ಹೊಂದುತ್ತಾರೆ. ಆದರೆ, ವಿಶ್ವಮಾನವರಾಗಿಯೇ ಉಳಿಯಲು ಪ್ರಯತ್ನಿಸಬೇಕು ಎಂದರು.

ADVERTISEMENT

ಪ್ರಭಾರ ತಹಶೀಲ್ದಾರ್ ನೂರುಲ್ ಹುದಾ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುವೆಂಪು ರಾಷ್ಟ್ರೀಯತೆ, ಮಾನವೀಯತೆ ಬಗ್ಗೆ ಬೆಳಕು ಚೆಲ್ಲಿದ್ದಾರೆ. ವ್ಯಕ್ತಿಯೊಬ್ಬ ಜಾತಿ ಮೀರಿ ಬೆಳೆಯಬೇಕು ಎಂದು ಸಂದೇಶ ಕೊಟ್ಟಿದ್ದಾರೆ. ಜಾತಿ, ಭಾಷೆ ಇತರ ವಿಚಾರಕ್ಕಾಗಿ ಸಂಘರ್ಷ ನಡೆಯುತ್ತಿರುವ ಈ ಸಂದರ್ಭದಲ್ಲಿ ಕುವೆಂಪು ಅವರ ಕೃತಿ ಓದುವುದು ಪ್ರಾಮುಖ್ಯತೆ ಪಡೆಯುತ್ತದೆ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಅವರು ಕಾರ್ಯಕ್ರಮದ ಕುರಿತು ಕಳುಹಿಸಿದ ಸಂದೇಶವನ್ನು ಕನ್ನಡ ಸಾಹಿತ್ಯ ಪರಿಷತ್‌ನ ರಮೇಶ್ ವಾಚಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್, ಶಿಕ್ಷಕರಾದ ಎನ್.ಪಿ.ಸುಕೇಶ್, ಮಾರುತಿ ಪ್ರಸಾದ್, ಗಂಗಾ ಸುಭಾಷ್, ಸುನೀತ ನೆಲಗದ್ದೆ, ಪ್ರಸನ್ನ ಕುಮಾರ್ ಬಿ.ಬಿ., ನಾಗಭೂಷಣ್ ಹುಲ್ಮಕ್ಕಿ, ವಕೀಲ ಸುಧೀರ್ ಕುಮಾರ್ ಮುರೊಳ್ಳಿ, ಸುಧಾಕರ್, ಸುಚಿತ್ ಚಂದ್ರ, ಸರಳ ಗಿರೀಶ್, ವಿನುತಾ ಸಂದೀಪ್, ನವೀನ್ ಕುಮಾರ್, ಸಮನ್ವಿ, ಗೌತಮಿ ಕುವೆಂಪು ಅವರ ಕವನ ವಾಚಿಸಿದರು.

ಹಿರೇಕೊಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷ ಅಭಿಷೇಕ್, ಸದಸ್ಯರಾದ ರಾಜೀವಿ, ರವೀಂದ್ರ, ಭೂ ಮಂಜೂರಾತಿ ಸಮಿತಿ ಸದಸ್ಯೆ ಅನ್ನಪೂರ್ಣ ನರೇಶ್, ಕೆಡಿಪಿ ಸದಸ್ಯರಾದ ಬಿ.ಪಿ.ಚಿಂತನ್, ನಾರ್ವೆ ಅಶೋಕ್, ಮಹಮ್ಮದ್ ಸಾದಿಕ್, ರಾಜಶಂಕರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ರಾಮಸ್ವಾಮಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಇನೇಶ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಎಂ.ಶ್ರೀಹರ್ಷ, ಸಿರಿಗನ್ನಡ ವೇದಿಕೆ ಅಧ್ಯಕ್ಷ ಚಾವಲ್ಮನೆ ಸುರೇಶ್ ನಾಯ್ಕ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.