ADVERTISEMENT

ರೇಡಿಯೊ ಕಾಲರ್ ಇಲ್ಲದ ಆನೆಗಳು: ಭದ್ರಾ ಕಾಡಿನ ಆನೆ ನಿಗಾ ಸುಸ್ತು

ಚಲನ ವಲನ ಗಮನಿಸುವುದು ಅರಣ್ಯ ಇಲಾಖೆಗೆ ತಲೆನೋವು

ವಿಜಯಕುಮಾರ್ ಎಸ್.ಕೆ.
Published 25 ಫೆಬ್ರುವರಿ 2026, 7:44 IST
Last Updated 25 ಫೆಬ್ರುವರಿ 2026, 7:44 IST
ಸಕಲೇಶಪುರ ತಾಲ್ಲೂಕಿನ ತೋಟಕ್ಕೆ ನುಗ್ಗುವ ಕಾಡಾನೆ ಕಾಫಿ ಹಾಗೂ ಕಾಳು ಮೆಣಸಿಗೆ ಹಾನಿ ಮಾಡುತ್ತಿವೆ.
ಸಕಲೇಶಪುರ ತಾಲ್ಲೂಕಿನ ತೋಟಕ್ಕೆ ನುಗ್ಗುವ ಕಾಡಾನೆ ಕಾಫಿ ಹಾಗೂ ಕಾಳು ಮೆಣಸಿಗೆ ಹಾನಿ ಮಾಡುತ್ತಿವೆ.   

ಚಿಕ್ಕಮಗಳೂರು: ನರಸಿಂಹರಾಜಪುರ, ಕೊಪ್ಪ, ಶೃಂಗೇರಿ ತಾಲ್ಲೂಕಿನಲ್ಲಿ ಆನೆಗಳ ಹಾವಳಿ ಮಿತಿ ಮೀರಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದಿಂದ ಬರುತ್ತಿರುವ ಯಾವುದೇ ಆನೆಯ ಗುಂಪಿಗೆ ರೇಡಿಯೊ ಕಾಲರ್ ಇಲ್ಲದಿರುವುದು ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿದೆ.

ಚಿಕ್ಕಮಗಳೂರು ವಿಭಾಗದ ಮೂಡಿಗೆರೆ, ಆಲ್ದೂರು, ಚಿಕ್ಕಮಗಳೂರು ಸುತ್ತಮುತ್ತ ಇದ್ದ ಕಾಡಾನೆ ಹಾವಳಿ ಈ ವರ್ಷ ಕೊಂಚ ಕಡಿಮೆಯಾಗಿದೆ. ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಮೂಡಿಗೆರೆ ಮಾರ್ಗವಾಗಿ ಆಲ್ದೂರು, ಸಾರಗೋಡು ಅರಣ್ಯದ ತನಕ ಬರುತ್ತಿದ್ದ ಈ ಆನೆಗಳು ಈಗ ಬೇಲೂರು ಕಡೆಗೆ ವಾಪಸ್‌ ಹೋಗಿವೆ. ಇಲ್ಲಿನ ಮೂರು ಗುಂಪಿನ ಆನೆಗಳ ಮೇಲೆ ಅರಣ್ಯ ಇಲಾಖೆ ನಿಗಾ ವಹಿಸಿದೆ. ಮೂರು ಗುಂಪಿನ ಆನೆಗಳಲ್ಲಿ ಪ್ರಮುಖ ಆನೆಗಳಲ್ಲಿ ರೇಡಿಯೊ ಕಾಲರ್ ಇರುವುದರಿಂದ ನಿಗಾ ವಹಿಸುವುದು ಅರಣ್ಯ ಇಲಾಖೆಗೆ ಸುಲಭವಾಗಿದೆ. ಆನೆಗಳನ್ನು ಚಲನ ವಲನ ಗಮನಿಸಿ ಎಚ್ಚರದಿಂದ ಇರಲು ಸ್ಥಳೀಯ ಜನರಿಗೆ ಮಾಹಿತಿ ನೀಡಲಾಗುತ್ತಿದೆ.

ಆದರೆ, ಈ ವರ್ಷ ಅರಣ್ಯ ಇಲಾಖೆಯ ಕೊಪ್ಪ ವಿಭಾಗದಲ್ಲಿ ಆನೆಗಳ ಹಾವಳಿ ಈ ವರ್ಷ ಹೆಚ್ಚಾಗಿದೆ. ಆರೇ ತಿಂಗಳಲ್ಲಿ 9 ಜನ ಬಲಿಯಾಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಬಾಳೆಹೊನ್ನೂರು ಸುತ್ತಮುತ್ತ ಹೆಚ್ಚಿನ ಪ್ರಮಾಣದಲ್ಲಿ ಪ್ರಾಣ ಹಾನಿ ಸಂಭವಿಸಿದೆ. ಇದು ಈ ಭಾಗದ ಜನರ ನೆಮ್ಮದಿಯನ್ನೇ ಹಾಳು ಮಾಡಿದೆ. ನರಸಿಂಹರಾಜಪುರ, ಕೊಪ್ಪ, ಶೃಂಗೇರಿ ಪಟ್ಟಣದ ಸಮೀಪಕ್ಕೆ ಬಂದು ಹೋಗಿರುವ ಆನೆಗಳು ಜನರಲ್ಲಿ ಆತಂಕ ಹುಟ್ಟಿಸಿವೆ.

ADVERTISEMENT

ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಭಾಗದಲ್ಲಂತೂ ಈಗ ಆನೆಗಳ ಉಪಟಳ ಜನರನ್ನು ಇನ್ನಿಲ್ಲದೆ ಕಾಡುತ್ತಿದೆ. ಈ ಕಾಡಿನಿಂದ ಭದ್ರಾ ಹಿನ್ನೀರಿನ ಮೂಲಕ ಬರುವ ಆನೆಗಳು ನಾಡಿನತ್ತ ನುಗ್ಗುತ್ತಿವೆ. ಹಲವು ಗುಂಪುಗಳಿದ್ದು, ಈ ಆನೆಗಳ ಚಲನ ವಲನಗಳ ಮೇಲೆ ನಿಗಾ ವಹಿಸುವುದು ಕಷ್ಟವಾಗಿದೆ. ಭದ್ರಾ ಕಾಡಿನಿಂದ ಹೊರ ಬಂದಿರುವ ಯಾವುದೇ ಆನೆಗಳಿಗೂ ರೇಡಿಯೊ ಕಾಲರ್ ಅಳವಡಿಕೆಯಾಗಿಲ್ಲ. ಇದರಿಂದಾಗಿ ಆನೆಗಳು ಯಾವ ಭಾಗದಲ್ಲಿವೆ ಎಂಬುದು ಗೊತ್ತಾಗುತ್ತಿಲ್ಲ. ಆನೆಗಳ ಜನ ವಸತಿ ಸಮೀಪದಲ್ಲಿವೆ ಎಚ್ಚರಿಂದ ಇರಬೇಕು ಎಂಬ ಮಾಹಿತಿ ನೀಡುವುದು ಅರಣ್ಯ ಇಲಾಖೆಗೆ ಕಷ್ಟವಾಗುತ್ತಿದೆ. ಇದು ಕೂಡ ಪ್ರಾಣ ಹಾನಿ ಹೆಚ್ಚಳಕ್ಕೆ ಕಾರಣ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.