ADVERTISEMENT

‘ವಿಜ್ಞಾನ ಉದ್ಯಾನ’ ನಿರ್ಮಾಣಕ್ಕೆ ಜಾಗ ಗುರುತು

ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 17:30 IST
Last Updated 11 ನವೆಂಬರ್ 2019, 17:30 IST
ಚಿಕ್ಕಮಗಳೂರಿನ ಕದ್ರಿಮಿದ್ರಿ ಭಾಗದಲ್ಲಿ ವೈದ್ಯಕೀಯ ವಿಜ್ಞಾನ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಗುರುತಿಸಿರುವ ಪ್ರದೇಶವನ್ನು ವೈದ್ಯಕೀಯ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಪರಿಶೀಲಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾಕೃಷ್ಣಪ್ಪ, ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್‌, ಸಚಿವ ಸಿ.ಟಿ.ರವಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ ಇದ್ದಾರೆ.
ಚಿಕ್ಕಮಗಳೂರಿನ ಕದ್ರಿಮಿದ್ರಿ ಭಾಗದಲ್ಲಿ ವೈದ್ಯಕೀಯ ವಿಜ್ಞಾನ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಗುರುತಿಸಿರುವ ಪ್ರದೇಶವನ್ನು ವೈದ್ಯಕೀಯ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಪರಿಶೀಲಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾಕೃಷ್ಣಪ್ಪ, ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್‌, ಸಚಿವ ಸಿ.ಟಿ.ರವಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ ಇದ್ದಾರೆ.   

ಚಿಕ್ಕಮಗಳೂರು: ಜಿಲ್ಲೆಗೆ ‘ವಿಜ್ಞಾನ ಉದ್ಯಾನ’ (ಸೈನ್ಸ್‌ ಪಾರ್ಕ್‌) ಮಂಜೂರಾಗಿದ್ದು, ಕದ್ರಿಮದ್ರಿಯಲ್ಲಿ ಜಾಗ ಗುರುತಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಇಲ್ಲಿ ಸೋಮವಾರ ತಿಳಿಸಿದರು.

‘ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಈ ಪಾರ್ಕ್‌ ಹೊಣೆ ನಿರ್ವಹಿಸಲಿದೆ. ಐದು ಎಕರೆ ಜಾಗದಲ್ಲಿ ವಿಜ್ಞಾನ ಪಾರ್ಕ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಪಾರ್ಕ್‌ಗೆ ನಾಲ್ಕು ಕೋಟಿ ಅನುದಾನ ಮಂಜೂರಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಪಾರ್ಕ್‌ನಲ್ಲಿ ಭೌತ, ರಸಾಯನ, ಜೀವವಿಜ್ಞಾನ ಪ್ರಯೋಗಾಲಯಗಳು, ಪ್ಲಾನೆಟೊರಿಯಂಗಳು ನಿರ್ಮಾಣವಾಗಲಿದೆ. ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಬೆಳೆಸಲು ನೆರವಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

ಜಿಲ್ಲೆಗೆ ವೈದ್ಯಕೀಯವಿಜ್ಞಾನ ಕಾಲೇಜು ಮಂಜೂರಾಗಿದೆ. ಈ ಕಾಲೇಜು ಶುರುವಾದರೆ ಪ್ರತ್ಯಕ್ಷವಾಗಿ ಸುಮಾರು ಎರಡು ಸಾವಿರ ಮಂದಿಗೆ, ಪರೋಕ್ಷವಾಗಿ ಐದಾರು ಸಾವಿರ ಮಂದಿಗೆ ಉದ್ಯೋಗವಕಾಶಗಳು ಲಭಿಸುತ್ತವೆ. ಅತ್ಯಾಧುನಿಕ ಆರೋಗ್ಯ ಸೇವೆಗಳು ಲಭಿಸುತ್ತವೆ. ಇದೇ ತಿಂಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುವ ಉದ್ದೇಶ ಇದೆ ಎಂದು ಹೇಳಿದರು.

2020–21ನೇ ಸಾಲಿಗೆ ಪ್ರವೇಶಾತಿ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಮಂಡಳಿಗೆ (ಎಂಸಿಐ) ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜುಲೈನಲ್ಲಿ ಮುಗಿದಿದೆ. ತಾತ್ಕಾಲಿಕವಾಗಿ ತರಗತಿ ಆರಂಭಿಸಲು ಮೂಲಸೌಕರ್ಯಗಳು ಇವೆ ಎಂದು ಎಂಸಿಐಗೆ ಮನದಟ್ಟು ಮಾಡಿ ಅನುಮತಿ ಪಡೆಯಲು ಪ್ರಯತ್ನಿಸಲಾಗುವುದು. ಆಗದಿದ್ದರೆ, 2021–22ನೇ ಸಾಲಿನಲ್ಲಿ ಶುರುವಾಗುತ್ತದೆ. ಎಂಜಿನಿಯರಿಂಗ್‌ ಕಾಲೇಜಿಗೆ ₹ 58 ಕೋಟಿ ಅನುದಾನ ಮಂಜೂರಾಗಿದೆ. ಕದ್ರಿಮಿದ್ರಿಯಲ್ಲಿ ಜಾಗ ಗುರುತಿಸಿದ್ದಾರೆ ಎಂದರು.

ನೆರೆ ಸಂತ್ರಸ್ತರ ಪುನರ್ವಸತಿ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಅತಿವೃಷ್ಟಿಯಿಂದ ಜಮೀನು ಕಳೆದುಕೊಂಡವರಿಗೆ ಬದಲಿ ಜಮೀನು ನಿಡುವ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ. ಸಂತ್ರಸ್ತರಿಗೆ ಪರಿಹಾರ ನೀಡಲು ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೂ ಆದ್ಯ ಗಮನ ಹರಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ, ಬಿಜೆಪಿ ಮುಖಂಡರಾದ ಸುಜಾತಾ ಕೃಷ್ಣಪ್ಪ, ಎಚ್‌.ಡಿ.ತಮ್ಮಯ್ಯ, ಸಿ.ಎಚ್‌.ಲೋಕೇಶ್‌, ವರಸಿದ್ಧಿ ವೇಣುಗೋಪಾಲ್‌, ಮಧುಕುಮಾರ್‌ ಅರಸ್‌, ದೀಪಕ್ ದೊಡ್ಡಯ್ಯ, ಕೋಟೆ ರಂಗನಾಥ್‌, ಈಶ್ವರಹಳ್ಳಿ ಮಹೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.