ADVERTISEMENT

ಭೂಕುಸಿತ, ಸ್ಥಿತಿಗತಿ ಸಮಗ್ರ ಅಧ್ಯಯನ: ಅಶೀಸರ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 14:50 IST
Last Updated 6 ಜೂನ್ 2020, 14:50 IST
ಅನಂತ ಹೆಗಡೆ ಅಶೀಸರ
ಅನಂತ ಹೆಗಡೆ ಅಶೀಸರ   

ಚಿಕ್ಕಮಗಳೂರು: ಅತಿವೃಷ್ಟಿಯಿಂದ ಪಶ್ಚಿಮಘಟ್ಟದಲ್ಲಿ ಭೂಕುಸಿತವಾಗಿರುವುದಕ್ಕೆ ಸಂಬಂಧಿಸಿದಂತೆ ಸಮಗ್ರ ಅಧ್ಯಯನ ನಡೆಸಿ, ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರೂ ಆಗಿರುವ ಉನ್ನತಮಟ್ಟದ ಅಧ್ಯಯನ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಇಲ್ಲಿ ಶನಿವಾರ ತಿಳಿಸಿದರು.

ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ಕಳೆದ ವರ್ಷ ಅತಿವೃಷ್ಟಿಯಿಂದ ಅತೀವ ಭೂಕುಸಿತ ಸಂಭವಿಸಿದ ಪ್ರದೇಶಗಳಲ್ಲಿ ಪರಿಶೀಲನೆ ಮಾಡಿದ್ದೇವೆ. ಆ ಪ್ರದೇಶಗಳ ಸ್ಥಿತಿಗತಿಯನ್ನು ವೀಕ್ಷಣೆ ಮಾಡಿದ್ದೇವೆ. ಮಾಹಿತಿ ಸಂಗ್ರಹಿಸಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ವಿವಿಧ ಸಂಶೋಧನಾ ಸಂಸ್ಥೆಗಳ ತಜ್ಞರು ನೀಡಿರುವ ವರದಿಗಳನ್ನು ಪರಿಶೀಲಿಸುತ್ತೇವೆ. ಎಲ್ಲವನ್ನು ಕ್ರೋಢೀಕರಿಸಿ, ಅಧ್ಯಯನ ಮಾಡಿ ಸಮಿತಿಯು ಸರ್ಕಾರಕ್ಕೆ ಶಿಫಾರಸುಗಳ ವರದಿ ಸಲ್ಲಿಸಲಿದೆ. ಮುಂಬರುವ ದಿನಗಳಲ್ಲಿ ಭೂಕುಸಿತ ತಡೆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸಿನಲ್ಲಿ ತಿಳಿಸಲಾಗುವುದು ಎಂದರು.

ADVERTISEMENT

ವರದಿ ಸಲ್ಲಿಕೆಗೆ ಮೂರು ತಿಂಗಳು ಕಾಲಾವಕಾಶ ಇದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗ ಆಧ್ಯಯನ ತಂಡ ಪ್ರವಾಸ ಮಾಡಿದೆ. ಮುಂದಿನ ವಾರ ಕೊಡಗು ಜಿಲ್ಲೆಗೆ ತೆರಳುತ್ತೇವೆ. ಆನಂತರ ಶಿವಮೊಗ್ಗ, ದಕ್ಷಿಣ ಕನ್ನಡ, ಇತರ ಜಿಲ್ಲೆಗಳಿಗೆ ತೆರಳುತ್ತೇವೆ ಎಂದು ಉತ್ತರಿಸಿದರು.

ಭೂಕುಸಿತವಾಗಿ ಅರಣ್ಯ ನಾಶ, ಮಾನವ ಹಸ್ತಕ್ಷೇಪ, ಮಹಾಮಳೆ ಮೊದಲಾದ ಕಾರಣಗಳನ್ನು ಕೆಲವರು ಉಲ್ಲೇಖಿಸಿದ್ದಾರೆ. ಕುದುರೆಮುಖ ಗುಡ್ಡ ಇತರೆಡೆಗಳಲ್ಲಿ ಶಬ್ಧ ಕೇಳಿಬಂದಿರುವ ಬಗ್ಗೆಯೂ ಚರ್ಚಿಸಲಾಗಿದೆ. ಒಟ್ಟಾರೆ ಎಲ್ಲ ಕ್ಷೇತ್ರಗಳ ತಜ್ಞರ ಅಭಿಪ್ರಾಯಗಳನ್ನ ಸಂಗ್ರಹಿಸಿ, ಅಧ್ಯಯನ ಮಾಡಿ ವರದಿ ಸಿದ್ಧಪಡಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.

ಭೂಕುಸಿತದ ಕುರಿತು ಅಧ್ಯಯನ ಮಾಡಿ ವರದಿ ಸಲ್ಲಿಸಲು ಸರ್ಕಾರ ಈ ಉನ್ನತಮಟ್ಟದ ಅಧ್ಯಯನ ಸಮಿತಿ ರಚಿಸಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ, ಅರಣ್ಯ ಇಲಾಖೆ ಪಿಸಿಸಿಎಫ್‌, ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿಗಳು, ರಾಜ್ಯ ಮಾಲಿನ್ಯ ನಿಯಂತಣ ಮಂಡಳಿ ಸದಸ್ಯ ಕಾರ್ಯದರ್ಶಿ ಇತರರು ಸಮಿತಿಯಲ್ಲಿದ್ದಾರೆ ಎಂದರು.

ಐಐಎಸ್‌ಸಿ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ, ಸಂರಕ್ಷಣಾ ಜೀವಶಾಸ್ತ್ರಜ್ಞ ಡಾ.ಕೇಶವ ಎಚ್‌.ಕೋರ್ಸೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಸಿ.ವಿ.ರಾಮನ್‌, ರಮೇಶ್‌, ಜಿಲ್ಲಾಧಿಕಾರಿ ಬಗಾದಿ ಗೌತಮ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ಪಾಂಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.