ADVERTISEMENT

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆ; ಇಬ್ಬರಿಂದ ನಾಮಪತ್ರ ಸಲ್ಲಿಕೆ

ಗರಿಗೆದರಿದ ವಿಧಾನ ಪರಿಷತ್ ಚುನಾವಣಾ ಅಖಾಡ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 4:33 IST
Last Updated 20 ನವೆಂಬರ್ 2021, 4:33 IST
ಚಿಕ್ಕಮಗಳೂರಿನಲ್ಲಿ ಚುನಾವಣಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಎ.ವಿ.ಗಾಯತ್ರಿಶಾಂತೇಗೌಡ ನಾಮಪತ್ರ ಸಲ್ಲಿಸಿದರು. ಪಕ್ಷದ ಜಿಲ್ಲಾಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಮುಖಂಡರಾದ ಸಗೀರ್‌ಅಹಮದ್, ಡಾ.ಡಿ.ಎಲ್.ವಿಜಯಕುಮಾರ್, ಮಹಡಿಮನೆ ಸತೀಶ್ ಇದ್ದರು.
ಚಿಕ್ಕಮಗಳೂರಿನಲ್ಲಿ ಚುನಾವಣಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಎ.ವಿ.ಗಾಯತ್ರಿಶಾಂತೇಗೌಡ ನಾಮಪತ್ರ ಸಲ್ಲಿಸಿದರು. ಪಕ್ಷದ ಜಿಲ್ಲಾಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಮುಖಂಡರಾದ ಸಗೀರ್‌ಅಹಮದ್, ಡಾ.ಡಿ.ಎಲ್.ವಿಜಯಕುಮಾರ್, ಮಹಡಿಮನೆ ಸತೀಶ್ ಇದ್ದರು.   

ಚಿಕ್ಕಮಗಳೂರು: ವಿಧಾನ ಪರಿಷತ್ (ಸ್ಥಳೀಯ ಸಂಸ್ಥೆ) ಚುನಾವಣೆಗೆ ಶುಕ್ರವಾರ ಇಬ್ಬರು ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ಅಭ್ಯರ್ಥಿಯಾಗಿ ಎ.ವಿ.ಗಾಯತ್ರಿ ಶಾಂತೇಗೌಡ ಹಾಗೂ ಕಡೂರಿನ ಕೆ.ಎನ್.ಬೊಮ್ಮಣ್ಣ ಅವರು ಬಿಜೆಪಿ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ಮಧ್ಯಾಹ್ನ 12.30ರ ಸುಮಾರಿಗೆ ಗಾಯತ್ರಿ ಶಾಂತೇಗೌಡ ಅವರು ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮುಖಂಡರು, ಬೆಂಬಲಿಗರೊಂದಿಗೆ ಬಂದರು. ಜಿಲ್ಲಾಧಿಕಾರಿ ಕಚೇರಿ ಮುಖ್ಯದ್ವಾರಕ್ಕೆ ಈಡುಗಾಯಿ ಒಡೆದು, ಒಳಗೆ ಪ್ರವೇಶಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು.

ADVERTISEMENT

‘ಶುಕ್ರವಾರ ಒಳ್ಳೆಯ ದಿನ ವಾಗಿರುವುದರಿಂದ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲಾಗುತ್ತಿದೆ. ಪಕ್ಷದ ಬಿ ಫಾರ್ಮ್ ಹಾಗೂ ಸೂಕ್ತ ದಾಖಲೆಗಳೊಂದಿಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಸುತ್ತೇನೆ’ ಗಾಯತ್ರಿ ಅವರು ಎಂದು ಜಿಲ್ಲಾಧಿಕಾರಿಗೆ ಹೇಳಿದರು.

ನಾಮಪತ್ರ ಸಲ್ಲಿಕೆ ಕೊನೆ ದಿನಾಂಕದೊಳಗೆ ಎಲ್ಲ ದಾಖಲೆಗಳನ್ನು ಸಲ್ಲಿಸಬೇಕು. ಯಾವುದೇ ಗೊಂದಲಗಳಿದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿ, ಮಾಹಿತಿ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.

ಎ.ವಿ.ಗಾಯತ್ರಿ ಶಾಂತೇಗೌಡ ಅವರು ಜಿಲ್ಲಾಧಿಕಾರಿ ಕಚೇರಿಯಿಂದ ಹೊರ ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲೆಯಿಂದ ಆಯ್ಕೆಯಾದ ವಿಧಾನ ಪರಿಷತ್ ಬಿಜೆಪಿ ಸದಸ್ಯರು ಗ್ರಾಮ ಪಂಚಾಯಿತಿಗಳಿಗೆ ಜನರೇಟರ್ ನೀಡಿದ್ದು ಬಿಟ್ಟರೆ, ಬೇರೆನೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಜನರೇಟರ್‌ನಿಂದ ಶಬ್ದ ಮಾಲಿನ್ಯ ಹೆಚ್ಚು. ಅದಕ್ಕೆ ಪೆಟ್ರೋಲ್, ಡೀಸೆಲ್‌ ತುಂಬಿಸಲು ಹಣ ವ್ಯಯಿಸಬೇಕು. ಅದರ ಬದಲು ಯುಪಿಎಸ್ ನೀಡಬಹುದಾಗಿತ್ತು’ ಎಂದು ಟೀಕಿಸಿದರು.

ತರೀಕೆರೆ ಮಾಜಿ ಶಾಸಕ ಶ್ರೀನಿವಾಸ್, ಪಕ್ಷದ ಮುಖಂಡರಾದ ಎಂ.ಎಲ್.ಮೂರ್ತಿ, ಸಿ.ಎನ್.ಅಕ್ಮಲ್, ರಸೂಲ್‌ಖಾನ್, ಎಚ್.ಪಿ.ಮಂಜೇಗೌಡ ಇದ್ದರು.

‘ಬಿಜೆಪಿಯಿಂದ ಈವರೆಗೆ ಅಭ್ಯರ್ಥಿ ಘೋಷಿಸಿಲ್ಲ’

‘ಬಿಜೆಪಿಯಿಂದ ಈವರೆಗೆ ಅಭ್ಯರ್ಥಿ ಘೋಷಿಸಿಲ್ಲ. ಕೆ.ಎನ್.ಬೊಮ್ಮಣ್ಣ ಬಿಜೆಪಿಯ ಮುಖಂಡರಾಗಿದ್ದಾರೆ. ಅವರು ಬಿಜೆಪಿ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಅವರಿಂದ ವಿವರಣೆ ಪಡೆಯುತ್ತೇನೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಮರುಡಪ್ಪ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.