ADVERTISEMENT

ಜಿಲ್ಲೆಯ ಐದು ಸ್ಥಳೀಯ ಸಂಸ್ಥೆ ಚುನಾವಣೆ: ಶೇ 72.26 ಮತದಾನ; ಶಾಂತಿಯುತ

​ಪ್ರಜಾವಾಣಿ ವಾರ್ತೆ
Published 29 ಮೇ 2019, 14:30 IST
Last Updated 29 ಮೇ 2019, 14:30 IST

ಚಿಕ್ಕಮಗಳೂರು: ಜಿಲ್ಲೆಯ ಒಂದು ಪುರಸಭೆ ಮತ್ತು ನಾಲ್ಕು ಪಟ್ಟಣ ಪಂಚಾಯಿತಿ ಸಹಿತ ಐದು ಸ್ಥಳೀಯ ಸಂಸ್ಥೆಗಳಿಗೆ ಬುಧವಾರ ಚುನಾವಣೆ ನಡೆದಿದ್ದು, ಶೇ 72.26 ಮತದಾನಾಗಿದೆ. ಶಾಂತಿಯುತವಾಗಿ ಮತದಾನ ನಡೆದಿದೆ.

ಕಡೂರು ಪುರಸಭೆ ಶೇ 71.29, ಪಟ್ಟಣ ಪಂಚಾಯಿತಿವಾರು ಶೃಂಗೇರಿ ಶೇ 81.60, ಎನ್‌.ಆರ್‌.ಪುರ ಶೇ 74.95, ಕೊಪ್ಪ ಶೇ 74.13 ಹಾಗೂ ಮೂಡಿಗೆರೆ ಶೇ 69.39 ಮತದಾನವಾಗಿದೆ.

ಒಟ್ಟಾರೆ 23,514 ಪುರುಷ ಮತದಾರರ ಪೈಕಿ17,113 ಮಂದಿ ಹಾಗೂ 23,950 ಮಹಿಳಾ ಮತದಾರರ ಪೈಕಿ 17,188 ಮಂದಿ ಮತ ಚಲಾಯಿಸಿದ್ದಾರೆ. ನಾಲ್ವರು ಇತರ ಮತದಾರರ ಪೈಕಿ ಒಬ್ಬರೂ ಹಕ್ಕು ಚಲಾಯಿಸಿಲ್ಲ. ಕಡೂರು ಪುರಸಭೆ 23, ನಾಲ್ಕು ಪಟ್ಟಣ ಪಂಚಾಯಿತಿಯ ತಲಾ11 ರಂತೆ 44 ವಾರ್ಡ್‌ಗಳು ಒಟ್ಟಾರೆ 67 ವಾರ್ಡ್‌ಗಳಿಗೆ ಮತದಾನ ನಡೆದಿದೆ.

ADVERTISEMENT

ಬೆಳಿಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಿತು. ಮೂಡಿಗೆರೆ, ಎನ್‌.ಆರ್.ಪುರದಲ್ಲಿ ಬೆಳಿಗ್ಗೆ ಕೊಂಚ ಮಳೆ ಇತ್ತು. ಕೆಲವೆಡೆ ಮೋಡ ಕವಿದ, ಬಿಸಿಲಿನ ವಾತಾವರಣ ಇತ್ತು. ಬಹುತೇಕ ಎಲ್ಲ ಕಡೆ ಬೆಳಿಗ್ಗೆ ಶುರುವಿನಲ್ಲಿ ಮತದಾನ ಮಂದಗತಿಯಲ್ಲಿ ಇತ್ತು.
ಕಡೂರಿನಲ್ಲಿ ಮಧ್ಯಾಹ್ನದ ನಂತರ ಮತದಾನ ಬಿರುಸುಗೊಂಡಿತು. ಕೊಪ್ಪದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮತದಾನ ಚುರುಕು ಇತ್ತು. ಮಧ್ಯಾಹ್ನದ ನಂತರ ಮಂದಗತಿಯಲ್ಲಿ ನಡೆಯಿತು.

ಶೃಂಗೇರಿಯಲ್ಲಿ ಬೆಳಿಗ್ಗೆ, ಮಧ್ಯಾಹ್ನ ಬಿರುಸಾಗಿತ್ತು. ಎನ್‌.ಆರ್‌.ಪುರದಲ್ಲಿ ಬೆಳಿಗ್ಗೆ ನಿಧಾನಗತಿ ಇತ್ತು. ಮಧ್ಯಾಹ್ನದ ನಂತರ ಬಿರುಸು ಪಡೆಯಿತು. ಮೂಡಿಗೆರೆಯಲ್ಲಿ ಬೆಳಿಗ್ಗೆ ತುಂತುರು ಮಳೆಯಲ್ಲೇ ಮತ ಚಲಾಯಿಸಿದರು. ಮಧ್ಯಾಹ್ನದ ನಂತರ ಚುರುಕಾಯಿತು. ಅಭ್ಯರ್ಥಿಗಳು, ಮುಖಂಡರು ಮತದಾನ ಕೇಂದ್ರಗಳಿಂದ 200 ಮೀಟರ್‌ ದೂರದಲ್ಲಿ ಅಂತಿಮ ಕಸರತ್ತು ನಡೆಸಿದರು.

ಕಡೂರು ಪುರಸಭೆ 89, ಪಟ್ಟಣ ಪಂಚಾಯಿತಿವಾರು ಮೂಡಿಗೆರೆ 37, ಕೊಪ್ಪ 33, ಎನ್‌.ಆರ್‌.ಪುರ 29 ಹಾಗೂ ಶೃಂಗೇರಿ 25 ಒಟ್ಟು 213 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಲ್ಲರ ಭವಿಷ್ಯ ಮತಯಂತ್ರಗಳಲ್ಲಿ ಅಡಗಿದೆ. ಇದೇ 31ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ಮತದಾನ ಅಂಕಿಅಂಶ

ತಾಲ್ಲೂಕು ಮತದಾರರು; ಮತಚಲಾಯಿಸಿದವರು; ಶೇ

ಕಡೂರು 27,517; 19,616; 71.29

ಕೊಪ್ಪ 3,854; 2,857; 74.13

ಶೃಂಗೇರಿ 2,858; 2,332; 81.60

ಮೂಡಿಗೆರೆ 7,678; 5,238; 69.39

ಎನ್‌.ಆರ್‌.ಪುರ 5,561; 4,168; 74.95

ಒಟ್ಟು 47,468; 34,301; 72.26

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.