ADVERTISEMENT

ಕೊಟ್ಟಿಗೆಹಾರ | ‘ದಮ್ಮಯ್ಯ, ಮನೆಗೆ ಹೋಗಲು ಅವಕಾಶ ಕೊಡಿ’ ಬಿಹಾರ ಕಾರ್ಮಿಕರ ಅಳಲು

ಅನಿಲ್ ಮೊಂತೆರೊ
Published 17 ಮೇ 2020, 20:00 IST
Last Updated 17 ಮೇ 2020, 20:00 IST
ಬಣಕಲ್‍ನ ಬಸ್ ನಿಲ್ದಾಣದಲ್ಲಿ ಬಿಹಾರದ ಕೂಲಿ ಕಾರ್ಮಿಕರು ಮನೆಯ ದಾರಿಗಾಗಿ ಕಾಯುತ್ತಿರುವುದು.
ಬಣಕಲ್‍ನ ಬಸ್ ನಿಲ್ದಾಣದಲ್ಲಿ ಬಿಹಾರದ ಕೂಲಿ ಕಾರ್ಮಿಕರು ಮನೆಯ ದಾರಿಗಾಗಿ ಕಾಯುತ್ತಿರುವುದು.   

ಕೊಟ್ಟಿಗೆಹಾರ:‌ ‘ನಾವು ಕೆಲಸವಿಲ್ಲದೆ ಒದ್ದಾಟ ನಡೆಸುತ್ತಿದ್ದೇವೆ. ದಮ್ಮಯ್ಯ ನಮಗೆ ಮನೆಗೆ ಹೋಗಲು ಒಂದು ಅವಕಾಶ ಮಾಡಿಕೊಡಿ’

ಇದು ಬಣಕಲ್‌ನಲ್ಲಿರುವ ಬಿಹಾರದ ವಲಸೆ ಕಾರ್ಮಿಕರ ಅಳಲು. ‘ನಾವು ಕೆಲಸದ ಸಲುವಾಗಿ ಕರ್ನಾಟಕ ರಾಜ್ಯಕ್ಕೆ ಬಂದು ಎರಡು ವರ್ಷವಾಯಿತು. ಇಲ್ಲಿ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದೇವು. ನಮ್ಮ ಊರಲ್ಲಿ ಕೆಲಸವಿಲ್ಲ ಎಂದು ಇಲ್ಲಿಗೆ ಬಂದಿದ್ದೇವೆ. ಈಗ ಕೊರೊನಾ ವೈರಸ್‍ ಸೋಂಕಿನಿಂದ ‌‌ಲಾಕ್‌ಡೌನ್ ಆಗಿ ನಾವು ಕೆಲಸವಿಲ್ಲದೇ ಬಸ್‌ನಿಲ್ದಾಣದಲ್ಲಿ ಊರಿಗೆ ಹೋಗಲು ಕಾಯುವ ಪರಿಸ್ಥಿತಿ ಒದಗಿದೆ’ ಎಂದು ಹೇಳಿದ್ದಾರೆ.

ಮೂಡಿಗೆರೆಯ ಬಣಕಲ್‍ನಲ್ಲಿ ಬಿಹಾರದ 5 ಮಂದಿ ಕೂಲಿ ಕೆಲಸಕ್ಕಾಗಿ ಬಂದಿದ್ದರು. ರಾಯಪುರದ ಜಯಕಾಂತ್ ಮಲಾಕಾರ್, ರವಿನ್ ಮಲಾಕರ್, ನಿತೇಶ್ ಕುಮಾರ್, ಸದಾನಂದ ಕುಮಾರ್, ಸನೋಜ್ ಮಲಾಕರ್ ಇವರಿಗೆ ಈಗ ಕೆಲಸವೂ ಇಲ್ಲದೆ, ಊರಿಗೂ ಹೋಗಲಾಗದೆ ಅಸಹಾಯಕ ಸ್ಥಿತಿಯಲ್ಲಿ ಇದ್ದಾರೆ.

ADVERTISEMENT

‘ಕೊರೊನಾ ವೈರಸ್‌ ಸೋಂಕಿನಿಂದಾಗಿ ಎಲ್ಲಿಯೂ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಊರಲ್ಲಿ ನಮ್ಮ ಕುಟುಂಬದವರು ಕಣ್ಣೀರು ಹಾಕುತ್ತಿದ್ದಾರೆ. ಅವರನ್ನು ಸೇರುವ ತವಕದಲ್ಲಿದ್ದೇವೆ. ಲಾಕ್‌ಡೌನ್ ಸಡಿಲಿಕೆ ಯಾವಾಗ ಎಂದೇ ತಿಳಿಯುತ್ತಿಲ್ಲ. ಬಿಹಾರ ಹೋಗಲು ರೈಲುಗಳೂ ಇಲ್ಲ. ಬಣಕಲ್‍ನಲ್ಲಿ ಬಾಡಿಗೆ ಮನೆಯ ಕೋಣೆಯಲ್ಲಿದ್ದೇವೆ. ಬಾಡಿಗೆ ಕಟ್ಟಲು ಊಟ ಮಾಡಲು ಬಹಳ ಸಮಸ್ಯೆಯಿದೆ. ಕುಟುಂಬ ಬಿಟ್ಟು ಇರಲು ಸಾಧ್ಯವಾಗುತ್ತಿಲ್ಲ. ನಮಗೆ ಮನೆಯ ಕಡೆ ಹೋಗಲು ಅವಕಾಶ ಮಾಡಿಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಸ್ವಾಮಿ’ ಎಂದು ಕಾರ್ಮಿಕ ಸದಾನಂದ ಕುಮಾರ್ ಅಳಲು ತೋಡಿಕೊಂಡರು.

*
ಬಿಹಾರ ಮೂಲದ ಕೂಲಿ ಕಾರ್ಮಿಕರ ಮಾಹಿತಿ ಕಲೆ ಹಾಕಿ ಪಟ್ಟಿ ಮಾಡುತ್ತಿದ್ದೇವೆ. ಪಟ್ಟಿ ಮಾಡಿದ ನಂತರ ಸರ್ಕಾರಕ್ಕೆ ಶೀಘ್ರವೇ ಕಳುಹಿಸಲಾಗುವುದು.
-ಶ್ರೀನಾಥ್ ರೆಡ್ಡಿ, ಪಿಎಸ್‍ಐ, ಬಣಕಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.