ನರಸಿಂಹರಾಜಪುರ: ಲೋಕ ಅದಾಲತ್ ಮೂಲಕ ಉಭಯ ಕಕ್ಷಿದಾರರು ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳುವುದರಿಂದ ಹಣ, ಸಮಯ, ಬಾಂಧವ್ಯ ಉಳಿಯುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಟಿ.ರಘುನಾಥ್ ಹೇಳಿದರು.
ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದಿಂದ ಆಯೋಜಿಸಿದ್ದ ಲೋಕ ಅದಾಲತ್‌ನಲ್ಲಿ ಅವರು ಮಾತನಾಡಿದರು.
ಲೋಕ ಅದಾಲತ್‌ನಿಂದ ಶೀಘ್ರ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಿವಿಲ್, ಕ್ರಿಮಿನಲ್ ಮತ್ತಿತರ ಪ್ರಕರಣ ಉಭಯ ಕಕ್ಷಿದಾರರ ಒಪ್ಪಿಗೆ ಮೇಲೆ ರಾಜೀಸಂದಾನದ ಮೂಲಕ ಬಗೆಹರಿಸಲಾಗುತ್ತದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ವರ್ಷದಲ್ಲಿ ಎರಡರಿಂದ ಮೂರು ಬಾರಿ ಲೋಕ ಅದಾಲತ್ ಆಯೋಜಿಸಲಾಗುತ್ತದೆ ಎಂದರು.
ಕಂದಾಯ ಬಾಕಿಗೆ ಸಂಬಂಧಿಸಿದಂತೆ ಸಿವಿಲ್ ಕಿರಿಯ ನ್ಯಾಯಾಲಯದಲ್ಲಿ 568 ಪ್ರಕರಣಗಳಲ್ಲಿ 242 ಪ್ರಕರಣ ಇತ್ಯರ್ಥಪಡಿಸಿ ಮುಕ್ತಾಯಗೊಳಿಸಲಾಗಿದ್ದು, ₹7.21,436 ಲಕ್ಷ ತೆರಿಗೆ ವಸೂಲಾತಿಯಾಗಿದ್ದು ಇದನ್ನು ತಾಲ್ಲೂಕು ಪಂಚಾಯಿತಿಗೆ ಸಂದಾಯ ಮಾಡಲಾಗಿದೆ. ಕಂದಾಯ ಪಾವತಿ ಬಾಕಿ ಇದ್ದವರಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಲೋಕ ಅದಾಲತ್‌ನ ನೋಟಿಸ್ ನೀಡಿದ್ದರಿಂದ ಬಾಕಿದಾರರು ಕಂದಾಯ ಪಾವತಿ ಮಾಡಿದ್ದಾರೆ. ಕಡಿಮೆ ಅವಧಿಯಲ್ಲಿ ಬಾಕಿ ತೆರಿಗೆ ಸಂಗ್ರಹವಾಗಿದೆ. 7ರಿಂದ 8ಚೆಕ್ ಬೌನ್ಸ್ ಪ್ರಕರಣ ಮುಕ್ತಾಯಗೊಳಿಸಲಾಗಿದೆ ಎಂದರು.
ಕಡಹಿನಬೈಲು ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಂಧ್ಯಾ ಮಾತನಾಡಿ, ‘ಪಂಚಾಯಿತಿಯಲ್ಲಿ ಕಂದಾಯ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದ ಜನರಿಗೆ ಲೋಕ ಅದಾಲತ್ ನೋಟಿಸ್ ನೀಡಿದ್ದರಿಂದ ಹೆಚ್ಚಿನ ಜನರು ಕಂದಾಯ ಪಾವತಿಸಿದ್ದು, ಗ್ರಾಮ ಪಂಚಾಯಿತಿಗೆ ಆದಾಯ ಬಂದಿದೆ. ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಮೊಬೈಲ್ ಟವರ್‌ನ ಮಾಲೀಕರು ಸಾಕಷ್ಟು ಕಂದಾಯ ಬಾಕಿ ಉಳಿಸಿಕೊಂಡಿದ್ದು, ಇವರನ್ನು ಸಹ ಲೋಕ ಅದಾಲತ್‌ಗೆ ಬರುವಂತೆ ಮಾಡಿದರೆ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಆದಾಯ ಬರುತ್ತದೆ’ ಎಂದರು.
ವಕೀಲರಾದ ಚಂದ್ರಶೇಖರ್, ಜಯಪ್ರಕಾಶ್, ಎನ್.ವಿ.ಸುಜಯ, ಎಚ್.ಆರ್.ವೆಂಕಟೇಶ್ ಮೂರ್ತಿ, ವಿಶ್ವನಾಥ್, ಶಿವಪ್ರಸಾದ್, ಬಸವರಾಜ್, ನ್ಯಾಯಾಲಯದ ಸಿಬ್ಬಂದಿ ಇದ್ದರು. ಬ್ಯಾಂಕ್‌ನ ಸಾಲಬಾಕಿ ಮತ್ತಿತರ ಒಟ್ಟು 27 ಪ್ರಕರಣಗಳಲ್ಲಿ 13 ಪ್ರಕರಣ ಮುಕ್ತಾಯಗೊಳಿಸಿ, ₹1,94,95,863 ಸೆಟಲ್ ಮೆಂಟ್ ಮಾಡಲಾಯಿತು.
ಇತ್ಯರ್ಥವಾದ ಪ್ರಕರಣಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ
‘ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿರುವ ಹಾಗೂ ನ್ಯಾಯಾಲಯಕ್ಕೆ ಬರುವ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಉಭಯ ಕಕ್ಷಿದಾರರು ರಾಜೀಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಂಡರೆ ಸಮಯ ಹಣ ಉಳಿಯುತ್ತದೆ. ಇಲ್ಲಿ ಇತ್ಯರ್ಥವಾದ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಇಲ್ಲಿ ಇಬ್ಬರು ಕಕ್ಷಿದಾರರ ಗೆಲುವಾಗುತ್ತದೆ. ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಗೆ ಬ್ಯಾಂಕ್‌ಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಹಕಾರ ನೀಡಿದ್ದಾರೆ’ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಎ.ಸಾಜು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.