ADVERTISEMENT

ಮೂಡಿಗೆರೆ | ವಿವಾಹಿತೆ ಮಹಿಳೆಯೊಂದಿಗೆ ಯುವಕ ಪರಾರಿ: ಹಿಂದೂಪರ ಸಂಘಟನೆಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:17 IST
Last Updated 15 ಆಗಸ್ಟ್ 2025, 5:17 IST
ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣಾ ಆವರಣದಲ್ಲಿ‌ ಜಮಾಯಿಸಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮಹಿಳೆಯನ್ನು ಕರೆದೊಯ್ದ ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು
ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣಾ ಆವರಣದಲ್ಲಿ‌ ಜಮಾಯಿಸಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮಹಿಳೆಯನ್ನು ಕರೆದೊಯ್ದ ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು   

ಮೂಡಿಗೆರೆ: ವಿವಾಹಿತ ಮಹಿಳೆಯೊಂದಿಗೆ ಪರಾರಿಯಾದ ಅನ್ಯಕೋಮಿನ ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ  ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಬಣಕಲ್‌ ಪೊಲೀಸ್ ಠಾಣೆ ಮುಂದೆ ಗುರುವಾರ ಜಮಾಯಿಸಿ ಆಕ್ರೋಶ ವ್ಯಕ್ತ ಪಡಿಸಿದರು.

ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ವಿವಾಹಿತ ಮಹಿಳೆಯು, ಮೂರು ತಿಂಗಳ ಹಿಂದೆ ಮೂಡಿಗೆರೆ ಹ್ಯಾಂಡ್ ಪೋಸ್ಟ್‌ನ ಕಾಫಿ ಲಿಂಕ್ಸ್ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಆ ಅಂಗಡಿಯಲ್ಲಿ ಕೇರಳ ಮೂಲದ ಅನ್ಯಕೋಮಿನ ಯುವಕನ ಪರಿಚಯವಾಗಿದ್ದು, ಕೆಲ ದಿನಗಳ ಹಿಂದೆ ಆ ಯುವಕನ ಜತೆ ವಿವಾಹಿತ ಮಹಿಳೆ  ಪರಾರಿಯಾಗಿದ್ದಾಳೆ. ಈ ಘಟನೆ ಸಂಬಂಧ ಆಕೆಯ ಪತಿಯು ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಬಳಿಕ ಪೊಲೀಸರು ಮಹಿಳೆಯನ್ನು ಗುರುವಾರ ಪತ್ತೆ ಹಚ್ಚಿ ಕರೆತಂದ  ವಿಷಯ ತಿಳಿಯುತ್ತಿದ್ದಂತೆ ಗುರುವಾರ ಬಣಕಲ್ ಪೊಲೀಸ್ ಠಾಣೆ ಬಳಿ ಜಮಾಯಿಸಿದ ಹಿಂದೂಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಅನ್ಯಕೋಮಿನ ಯುವಕನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ಠಾಣೆ ಬಳಿ ಜನರು ಸೇರುತ್ತಿದ್ದಂತೆ, ಠಾಣೆಯ ಗೇಟ್ ಹಾಕಿ ಪ್ರವೇಶಕ್ಕೆ ನಿರ್ಬಂಧ ಹಾಕಿದ್ದರಿಂದ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ‌ ಚಕಮಕಿ‌ ನಡೆದು ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು.ಇದರಿಂದ ಆಕ್ರೋಶಗೊಂಡು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕೆಲ ಕಾಲ ಠಾಣೆಯ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯ ಸಂಚಾರ ತಡೆದು ಪ್ರತಿಭಟಿಸಿದರು. ನಂತರ ಪೊಲೀಸ್ ಠಾಣಾ ಆವರಣದ ಒಳಗೆ ಬಿಡುವ ಭರವಸೆ ನೀಡಿದ ನಂತರ ರಸ್ತೆ ತಡೆ ಕೈಬಿಡಲಾಯಿತು.

ADVERTISEMENT

'ತಾಲ್ಲೂಕಿನಲ್ಲಿ ಲವ್ ಜಿಹಾದ್ ನಡೆಯುತ್ತಿದ್ದು, ವಿವಾಹಿತ ಮಹಿಳೆಯನ್ನು ಕರೆದೊಯ್ದಿರುವ ಯುವಕನ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಒತ್ತಾಯಿಸಿದರು.

ಗ್ರಾಮದಲ್ಲಿ ಬಿಗುವಿನ ಸ್ಥಿತಿ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.