ಕಡೂರು: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕೆಲ ತಿಂಗಳ ಹಿಂದೆ ನಡೆದಿದ್ದ ಮಹಾ ಕುಂಭಮೇಳದಲ್ಲಿ ನಾಪತ್ತೆಯಾಗಿದ್ದ ಇಲ್ಲಿನ ನರಸಿಂಹಮೂರ್ತಿ ಎಂಬ ವ್ಯಕ್ತಿ ಮುಂಬೈಯಲ್ಲಿ ಪತ್ತೆಯಾಗಿದ್ದಾರೆ.
ಹಾಸನ ಜಿಲ್ಲೆ ಮೊಸಳೆ ಗ್ರಾಮದವರಾದ ನರಸಿಂಹಮೂರ್ತಿ, ಕಡೂರು ತಾಲ್ಲೂಕಿನ ತಂಗಲಿ ಗ್ರಾಮದ ನರಸಿಂಹಸ್ವಾಮಿ ದೇವಾಲಯದ ಅರ್ಚಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಬಂಧಿಗಳ ಜೊತೆ ಮಹಾ ಕುಂಭಮೇಳಕ್ಕೆ ಹೋಗಿದ್ದ ಅವರು, ಜ. 28ರಂದು ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಿಂದ ನಾಪತ್ತೆಯಾಗಿದ್ದರು. ಮರುದಿನವೇ ಅಲ್ಲಿ ಕಾಲ್ತುಳಿತ ಸಂಭವಿಸಿ ಹಲವರು ಮೃತಪಟ್ಟ ಘಟನೆಯೂ ನಡೆದಿತ್ತು.
ಸಹ ಯಾತ್ರಿಕರು ಇವರನ್ನು ಹುಡುಕಿ ಪತ್ತೆಯಾಗದಿದ್ದಾಗ, ಅವರೆಲ್ಲ ಊರಿಗೆ ಮರಳಿದ್ದರು. ಇದರಿಂದ ಕುಟುಂಬಸ್ಥರು ಆತಂಕಗೊಂಡಿದ್ದರು. ಪುತ್ರ ಬದರೀನಾಥ್ ಪ್ರಯಾಗ್‌ರಾಜ್‌ಗೆ ತೆರಳಿ ಹುಡುಕಾಟ ನಡೆಸುವ ಜತೆಗೆ ಪೊಲೀಸ್ ಠಾಣೆಗೆ ದೂರನ್ನೂ ನೀಡಿದ್ದರು. ಆದರೆ ಏನೂ ಪ್ರಯೋಜನವಾಗಿರಲಿಲ್ಲ. ಇತ್ತೀಚೆಗೆ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಮೊಸಳೆ ಗ್ರಾಮದ ಕೆಲವರು ಇವರ ಗುರುತು ಹಿಡಿದಿದ್ದರು.
‘ತಂದೆಯವರಿಗೆ ಮರೆವಿನ ಸಮಸ್ಯೆ ಇತ್ತು. ಪ್ರಯಾಗ್‌ರಾಜ್‌ನ ಜನಜಂಗುಳಿಯಲ್ಲಿ ತಪ್ಪಿಸಿಕೊಂಡಿದ್ದ ಅವರು ಕೆಲವು ದಿನಗಳ ಬಳಿಕ ಮುಂಬೈನ ‘ಶ್ರದ್ಧಾ ರಿ ಹೆಬಿಲಿಟೇಷನ್ ಸೆಂಟರ್’ನವರಿಗೆ ಸಿಕ್ಕಿದ್ದರು. ನಮ್ಮ ಗ್ರಾಮದ ಕೆಲವರು ಇವರನ್ನು ಗುರುತು ಹಿಡಿದು ಸಂಸ್ಥೆಯವರಿಗೆ ಮಾಹಿತಿ ನೀಡಿದ್ದರಿಂದ ಸಂಸ್ಥೆಯವರೇ ನಿನ್ನೆ ನಮ್ಮ ಗ್ರಾಮಕ್ಕೆ ತಂದೆಯನ್ನು ಕರೆತಂದು ನಮಗೆ ಒಪ್ಪಿಸಿದ್ದಾರೆ. ತಂದೆ ಪತ್ತೆಯಾಗಿರುವ ಬಗ್ಗೆ ಪ್ರಯಾಗ್‌ರಾಜ್ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ’ ಎಂದು ನರಸಿಂಹಮೂರ್ತಿ ಅವರ ಪುತ್ರ ಬದರೀನಾಥ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.