
ಬೆಳ್ಳೂರು (ನರಸಿಂಹರಾಜಪುರ): ಮಲೆನಾಡ ರೈತರಿಗೆ ಸಂಕಷ್ಟಗಳು ಎದುರಾಗಿದ್ದು, ಈ ಸಂದರ್ಭದಲ್ಲಿ ಮಲೆನಾಡಿನ ನಾಗರಿಕರು ರೈತರಿಗೆ ಸಹಕಾರ ನೀಡಬೇಕು ಎಂದು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ನಾಗೇಶ್ ಮನವಿ ಮಾಡಿದರು.
ತಾಲ್ಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರು ಗ್ರಾಮಕ್ಕೆ ಶನಿವಾರ ಬಂದ ಶೃಂಗೇರಿ ಕ್ಷೇತ್ರ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಜನಜಾಗೃತಿ ಯಾತ್ರೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜ.15 ರಂದು ಶೃಂಗೇರಿಯಿಂದ ಪ್ರಾರಂಭವಾಗಿರುವ ಯಾತ್ರೆಯು ಶೃಂಗೇರಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ರೈತರ ಕಷ್ಟಗಳ ಬಗ್ಗೆ ಅರಿವು ಮೂಡಿಸುತ್ತಿದೆ. ರೈತರ ಕಷ್ಟಗಳ ಬಗ್ಗೆ ವಿಡಿಯೋ ಪ್ರದರ್ಶನ ಮಾಡುತ್ತಿದ್ದೇವೆ. ಯಾತ್ರೆಯು ಜ.25 ರವರೆಗೆ ನಡೆಯಲಿದ್ದು, ಜ.26 ರಂದು ಹರಿಹರಪುರದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಾರೋಪದಲ್ಲಿ ಎಲ್ಲಾ ರೈತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಮಲೆನಾಡು ನಾಗರಿಕ ರೈತ ಹಿತರರಕ್ಷಣಾ ಸಮಿತಿಯ ತಾಲ್ಲೂಕು ಘಟಕದ ಉಪಾಧ್ಯಕ್ಷ ದೇವಂತ್ ಗೌಡ ಮಾತನಾಡಿ, ರೈತರಿಗೆ ಸಮಸ್ಯೆ ಉಂಟಾದಾಗ ಎಲ್ಲಾ ರೈತರು ಸ್ಪಂದಿಸಿ ಸಹಾಯಕ್ಕೆ ಬರಬೇಕು. ಅರಣ್ಯ ಇಲಾಖೆಯ ಕಾನೂನುಗಳು ರೈತರಿಗೆ ಮಾರಕವಾಗಿದೆ. ಇನ್ನಷ್ಟು ಕಾನೂನುಗಳು ಸಹ ಬರಬಹುದು ಎಂಬ ಭೀತಿ ಎದುರಾಗಿದೆ. ರೈತರು ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದರು.
ಸಮಿತಿಯ ಸದಸ್ಯ ಕಟ್ಟಿನಮನೆ ನವೀನ್, ತಾಲ್ಲೂಕು ಸಮಿತಿ ಸದಸ್ಯ ಪುರುಷೋತ್ತಮ್ ಕುಸ್ಗಲ್, ಹಾತೂರು ಪ್ರಸನ್ನ, ಹಾತೂರು ರಾಮಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಎನ್.ಪಿ.ರಮೇಶ್, ಎಚ್.ಇ.ದಿವಾಕರ, ಎಸ್ ಉಪೇಂದ್ರ, ಸೀತೂರು ಹರಿಧ್ವರ್ಣ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಎನ್.ಪಿ.ರವಿ ಮತ್ತಿತರರು ಇದ್ದರು.
ನಂತರ ಜನಜಾಗೃತಿ ಯಾತ್ರೆಯು ಮುತ್ತಿನಕೊಪ್ಪ, ಶೆಟ್ಟಿಕೊಪ್ಪ, ನರಸಿಂಹರಾಜಪುರ ಪಟ್ಟಣ, ಬಿ.ಎಚ್.ಕೈಮರ ಮೂಲಕ ಹೊನ್ನೇಕೊಡಿಗೆ ತಲುಪಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.