ADVERTISEMENT

ಶೇ 51ಕ್ಕಿಂತ ಹೆಚ್ಚು ತೋಟಗಾರಿಕೆ ಬೆಳೆಗೆ ಹಾನಿ: ಅಂಜನ್ ಕುಮಾರ್ 

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 5:04 IST
Last Updated 17 ಸೆಪ್ಟೆಂಬರ್ 2025, 5:04 IST
ಶೃಂಗೇರಿ ತಾಲ್ಲೂಕಿನ ಕೆರೆಮನೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ತೋಟವನ್ನು ವಿಜ್ಞಾನಿಗಳ ತಂಡ ಪರಿಶೀಲನೆ ನಡೆಸಿತು
ಶೃಂಗೇರಿ ತಾಲ್ಲೂಕಿನ ಕೆರೆಮನೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ತೋಟವನ್ನು ವಿಜ್ಞಾನಿಗಳ ತಂಡ ಪರಿಶೀಲನೆ ನಡೆಸಿತು   

ಶೃಂಗೇರಿ: ‘ಮಲೆನಾಡು ಭಾಗದಲ್ಲಿ ಬಿಟ್ಟು ಬಿಡದೆ ಸುರಿದ ಮಳೆಯಿಂದ ಶೇ.51 ಕ್ಕಿಂತ ಹೆಚ್ಚು ತೋಟಗಾರಿಕೆ ಬೆಳೆ ಹಾನಿ ಸಂಭವಿಸಿದೆ’ ಎಂದು ತೀರ್ಥಹಳ್ಳಿ ಅಡಿಕೆ ಸಂಶೋಧನಾ ಕೇಂದ್ರದ ಕೀಟಶಾಸ್ತ್ರಜ್ಞ ಅಂಜನ್ ಕುಮಾರ್ ಹೇಳಿದರು.

ಶೃಂಗೇರಿಯ ಮೆಣಸೆ ಗ್ರಾಮ ಪಂಚಾಯಿತಿಯ ಮಸಿಗೆ ಗ್ರಾಮದ ಕೆರೆಮನೆ ಭಾಸ್ಕರರಾವ್ ಹಾಗೂ ಗ್ರಾಮದ ಇತರೆ ತೋಟಕ್ಕೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.

‘ಬೇಸಿಗೆಯಲ್ಲೂ ನಿರಂತರ ಮಳೆ, ನಂತರ ಮೇ ತಿಂಗಳಿನಿಂದ ಸುರಿದ ಮಳೆಯಿಂದ ಅಡಿಕೆ, ಕಾಳು ಮೆಣಸು, ಪರ್ಯಾಯ ಬೆಳೆಯಾದ ಕಾಫಿ ಸೇರಿದಂತೆ ಎಲ್ಲಾ ಬೆಳೆಯಲ್ಲೂ ಕೊಳೆ ರೋಗ ವ್ಯಾಪಕವಾಗಿದೆ. ಅಡಿಕೆಗೆ ಬೋರ್ಡೋ ಸಿಂಪಡಣೆ ಮಾಡಿದ್ದರೂ, ರೋಗ ನಿಯಂತ್ರಣಕ್ಕೆ ಬಂದಿಲ್ಲ. ಬಹುತೇಕ ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಬೆಳೆ ಹಾನಿ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ತಂಡದಿಂದ ಪರಿಶೀಲನೆ ನಡೆಸಲಾಗುತ್ತಿದ್ದು, ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಿದ್ದೇವೆ' ಎಂದರು.

ADVERTISEMENT

ಆನೆಗುಂದ ಅಡಿಕೆ ಸಂಶೋಧನಾ ಕೇಂದ್ರದ ಸಸ್ಯರೋಗ ಶಾಸ್ತ್ರಜ್ಞ ಸಂಜೀವ್ ಜಕಾತಿಮಠ್ ಮಾತನಾಡಿ, `ಕೊಳೆ ರೋಗ ನಿಯಂತ್ರಣಕ್ಕೆ ಶೇ 1ರ ಬೋರ್ಡೋ ದ್ರಾವಣವನ್ನು ಕನಿಷ್ಠ ಮೂರು ಬಾರಿ ಸಿಂಪಡಣೆ ಮಾಡಬೇಕು. ಬೋರ್ಡೋ ದ್ರಾವಣದ ರಸಸಾರ 7-8ರಷ್ಟಿದ್ದರೆ ಮಾತ್ರ ದ್ರಾವಣ ಪರಿಣಾಮಕಾರಿಯಾಗುತ್ತದೆ ಎಂದರು.

ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಕೃಷ್ಣ ಮಾತನಾಡಿ, ‘ತಾಲ್ಲೂಕಿನಲ್ಲಿ ಉಂಟಾಗಿರುವ ಅತಿವೃಷ್ಟಿ ಬೆಳೆ ಹಾನಿ ಸಮೀಕ್ಷೆ ನಡೆಸುವಂತೆ ಶಿವಮೊಗ್ಗ ಸಂಶೋಧನಾ ಕೇಂದ್ರಕ್ಕೆ ಬರೆಯಲಾಗಿದ್ದು, ಅದರಂತೆ ವಿಜ್ಞಾನಿಗಳ ತಂಡ ತಾಲ್ಲೂಕಿನ ಆಯ್ದ ತೋಟಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಲಿದೆ. ಪರ್ಯಾಯ ಬೆಳೆಯಾದ ಕಾಫಿಗೂ ಸಾಕಷ್ಟು ಹಾನಿಯಾಗಿದೆ. ತಂಡವು ಕೂತಗೋಡು, ಬೇಗಾರ್, ನೆಮ್ಮಾರ್ ಗ್ರಾಮ ಪಂಚಾಯಿತಿಯ ರೈತರ ತೋಟಕ್ಕೆ ಭೇಟಿ ನೀಡಿದೆ. ಮೂಡಿಗೆರೆ ಕೆ.ವಿ.ಕೆಯಿಂದ ಇನ್ನೊಂದು ತಂಡವು ತಾಲ್ಲೂಕಿನಲ್ಲಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಿದೆ’ ಎಂದರು.

ಮಸಿಗೆ ಗ್ರಾಮದ ಮರಟೆ ವಸಂತ, ಕೆರೆಮನೆ ದಿನೇಶ್ ತೋಟಕ್ಕೆ ಬೆಳೆಹಾನಿ ವೀಕ್ಷಣಾ ತಂಡ ಭೇಟಿ ನೀಡಿತು. ತಂಡದಲ್ಲಿ ತೀರ್ಥಹಳ್ಳಿ ಅಡಿಕೆ ಸಂಶೋಧನಾ ಕೇಂದ್ರದ ಮಣ್ಣು ಶಾಸ್ತ್ರ ವಿಭಾಗದ ಸರಸ್ವತಿ, ರೈತ ಸಂಘದ ಅಧ್ಯಕ್ಷ ಕಾನುವಳ್ಳಿ ಚಂದ್ರಶೇಖರ್, ಪೂರ್ಣೇಶ್, ಶ್ರೀಧರರಾವ್, ಅನಂತಯ್ಯ, ಚನ್ನಕೇಶವ್, ಚಂದ್ರಪ್ಪ, ಯೋಗಪ್ಪ ಇತರರು ಹಾಜರಿದ್ದರು.

‘ಈವರೆಗೆ 4150 ಮಿ.ಮೀ ಮಳೆ’

ಶೃಂಗೇರಿಯಲ್ಲಿ ಸರಾಸರಿ 3500 ಮಿ.ಮೀ ವಾಡಿಕೆ ಮಳೆಯಾಗುತ್ತಿತ್ತು. ಆದರೆ ಈ ಬಾರಿ ಜನವರಿಯಿಂದ ಇಲ್ಲಿಯವರೆಗೆ ಶೃಂಗೇರಿಯಲ್ಲಿ 4150 ಮಿ.ಮೀ ಮಳೆಯಾಗಿದೆ. 3 ಬಾರಿ ಬೋರ್ಡೋ ಸಿಂಪಡಿಸಿ ನಂತರ ಮತ್ತೆ ಮಳೆ ಹೆಚ್ಚಾಗುವ ಭೀತಿಯಲ್ಲಿದ್ದು ಮತ್ತೆ ಬೋರ್ಡ್ ಸಿಂಪಡಿಸಬೇಕೆನ್ನುವ ಆತಂಕದಲ್ಲಿದ್ದಾರೆ. ‌ ಮಳೆಗಾಲ ಮುಗಿಯುತ್ತ ಬರುವಾಗ ಮಲೆನಾಡಿನಲ್ಲಿ ಮತ್ತೆ ವಿಪರೀತ ಮಳೆ ಬಂದ ಕಾರಣ ಶೇ 80ರಷ್ಟು ತೋಟಗಳಿಗೆ ಕೊಳೆರೋಗ ಬಂದಿದೆ. ಪರ್ಯಾಯ ಬೆಳೆಯಾಗಿ ಬೆಳೆಸಿದ ಕಾಫಿ ಗಿಡಗಳ ಕಾಯಿಗಳು ಆಗಲೇ ಉದುರಿದ್ದು ಈಗ ಮತ್ತೆ ಉದುರಲು ಪ್ರಾರಂಭಗೊಂಡಿವೆ. ತಾಲ್ಲೂಕಿನಲ್ಲಿ ಶೇ.75ರಷ್ಟು ರೈತರ ತೊಟಗಳಲ್ಲಿ ಅಡಿಕೆ ಕಾಫಿ ಕಾಳುಮೆಣಸಿನ ಕಾಯಿಗಳು ನೆಲಕ್ಕೆ ಉರುಳಿವೆ' ಎಂದು ರೈತ ಸಂಘದ ಅಧ್ಯಕ್ಷ ಕಾನುವಳ್ಳಿ ಚಂದ್ರಶೇಖರ್ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.