ADVERTISEMENT

16ರೊಳಗೆ ಅಹವಾಲು ಸಲ್ಲಿಸಲು ಸೂಚನೆ

ಮಸಗಲಿ ಒತ್ತುವರಿ ತೆರವು; ಜನಪ್ರತಿನಿಧಿಗಳು,ಅಧಿಕಾರಿಗಳು, ರೈತರ ಸಭೆ

​ಪ್ರಜಾವಾಣಿ ವಾರ್ತೆ
Published 13 ಮೇ 2022, 2:23 IST
Last Updated 13 ಮೇ 2022, 2:23 IST
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ಶಾಸಕ ಸಿ.ಟಿ.ರವಿ ಮಾತನಾಡಿದರು. ಶಾಸಕ ಎಂ.ಪಿ.ಕುಮಾರಸ್ವಾಮಿ, ಜಿಲ್ಲಾಧಿಕಾರಿ ರಮೇಶ್‌, ಡಿಎಫ್‌ಒ ಕ್ರಾಂತಿ ಇದ್ದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ಶಾಸಕ ಸಿ.ಟಿ.ರವಿ ಮಾತನಾಡಿದರು. ಶಾಸಕ ಎಂ.ಪಿ.ಕುಮಾರಸ್ವಾಮಿ, ಜಿಲ್ಲಾಧಿಕಾರಿ ರಮೇಶ್‌, ಡಿಎಫ್‌ಒ ಕ್ರಾಂತಿ ಇದ್ದರು.   

ಚಿಕ್ಕಮಗಳೂರು: ಮಸಗಲಿ ಅರಣ್ಯ ಒತ್ತುವರಿದಾರರ ಪರಿಹಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ನಿರ್ಧರಿಸಲಾಗಿದೆ. ಅಹವಾಲುಗಳು ಇದ್ದರೆ ಮೇ 16ರೊಳಗೆ ಸಲ್ಲಿಸಲು ಸೂಚಿಸಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜನಪ್ರತಿನಿಧಿಗಳು, ಅಧಿಕಾರಿಗಳು ರೈತರ ಸಭೆಯಲ್ಲಿ ನಿರ್ಣಯಿಸಲಾಗಿದೆ. ಪರಿಹಾರ, ಇತರ ಅಹವಾಲು, ಬೇಡಿಕೆಗಳನ್ನು ಮೇ 16ರೊಳಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಸಲ್ಲಿಸುವಂತೆ ತಿಳಿಸಲಾಯಿತು.

ಮಸಗಲಿ ಸಂತ್ರಸ್ತ ರೈತರು ತಮ್ಮನ್ನು ಇರುವಲ್ಲಿಯೇ ಉಳಿಸುವಂತೆ ಬೇಡಿಕೊಂಡರು. ಶಾಸಕ ಸಿ.ಟಿ.ರವಿ ಮಾತನಾಡಿ, ‘1980 ರಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಯಾಗಿದೆ. ಅದಾದ ನಂತರವೂ ಮಸಗಲಿಯ ಹಲವರಿಗೆ ಭೂಮಿ ಮಂಜೂರು ಮಾಡಲಾಗಿದೆ. ಅಂದಿನವರು ಮಾಡಿದ ತಪ್ಪಿಗೆ ರೈತರಿಗೆ ಈ ಸ್ಥಿತಿ ಬಂದಿದೆ. ಅವರನ್ನು ಇದ್ದಲ್ಲಿಯೇ ಉಳಿಸಿ ಬದಲಿ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ’ ಎಂದು ಸಲಹೆ ನೀಡಿದರು.

ADVERTISEMENT

ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ‘ರೈತರಿಗೆ ನೀಡುವ ಪರಿಹಾರದ ಪ್ಯಾಕೇಜ್ ಪುನರ್ ಪರಿಶೀಲಿಸಬೇಕು ಎಂದು ರೈತರು ಅರ್ಜಿ ನೀಡಿದಲ್ಲಿ ಸರ್ಕಾರಕ್ಕೆ ಒತ್ತಡ ಹೇರುತ್ತೇವೆ’ ಎಂದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಮಸಗಲಿ ವ್ಯಾಪ್ತಿಯಲ್ಲಿ 211 ಕುಟುಂಬಗಳು ಇವೆ. ಮಾನವೀಯ ದೃಷ್ಟಿಯಿಂದ ಅವರನ್ನು ಅಲ್ಲೇ ಉಳಿಸಲು ಸಾಧ್ಯವೇ ಎಂಬ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕು. ಈ ಬಗ್ಗೆ ಸರ್ಕಾರ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಬೇಕು’ಎಂದು ಸಲಹೆ ನೀಡಿದರು.

ಡಿಎಫ್‍ಒ ಎನ್.ಇ.ಕ್ರಾಂತಿ ಮಾತನಾಡಿ, ‘ತತ್ಕೊಳ ಪ್ರಕರಣದಲ್ಲಿ 1975 ರ ಹಿಂದಿನ ಒತ್ತುವರಿ ಎಂದು ಪರಿಗಣಿಸಿ ಪರಿಹಾರ ನೀಡಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿ ಎರಡು ವರ್ಷವಾಗಿದೆ. ಆದೇಶ ಜಾರಿ ವಿಳಂಬ ಮಾಡಿದರೆ ನ್ಯಾಯಾಂಗ ನಿಂದನೆಗೆ ಹಾದಿಯಾಗಲಿದೆ. ಸಂತ್ರಸ್ತರ ಅಹವಾಲುಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದರು.

‘ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗುವುದು. ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ತಿಳಿಸಿದರು.

ಮಾಜಿ ಸಚಿವೆ ಮೋಟಮ್ಮ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.