ADVERTISEMENT

ರೈತರಿಗೆ ಮಳೆರಾಯನ ಕೃಪೆಯಾಗಲಿ: ಶಾಸಕ ತಮ್ಮಯ್ಯ

ಅಯ್ಯನಕೆರೆಯ ದಂಡೆಯ ಶ್ರೀ ಬಲ್ಲಾಳೇಶ್ವರಸ್ವಾಮಿಗೆ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 4:41 IST
Last Updated 20 ಜುಲೈ 2025, 4:41 IST
ಕಡೂರು ತಾಲ್ಲೂಕು ಸಖರಾಯಪಟ್ಟಣದ ಇತಿಹಾಸ ಪ್ರಸಿದ್ಧ ಅಯ್ಯನಕೆರೆಯ ದಂಡೆಯಲ್ಲಿರುವ ಶ್ರೀ ಬಲ್ಲಾಳೇಶ್ವರಸ್ವಾಮಿಗೆ ಮಳೆಗಾಗಿ ಪ್ರಾರ್ಥಿಸಿ ನಡೆದ ಪೂಜಾ ಕೈಂಕರ್ಯದಲ್ಲಿ ಶಾಸಕಎಚ್‌.ಡಿ.ತಮ್ಮಯ್ಯ, ವಿಧಾನ ಪರಿಷತ್‌ ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್. ಭೋಜೇಗೌಡ ಭಾಗವಹಿಸಿದ್ದರು
ಕಡೂರು ತಾಲ್ಲೂಕು ಸಖರಾಯಪಟ್ಟಣದ ಇತಿಹಾಸ ಪ್ರಸಿದ್ಧ ಅಯ್ಯನಕೆರೆಯ ದಂಡೆಯಲ್ಲಿರುವ ಶ್ರೀ ಬಲ್ಲಾಳೇಶ್ವರಸ್ವಾಮಿಗೆ ಮಳೆಗಾಗಿ ಪ್ರಾರ್ಥಿಸಿ ನಡೆದ ಪೂಜಾ ಕೈಂಕರ್ಯದಲ್ಲಿ ಶಾಸಕಎಚ್‌.ಡಿ.ತಮ್ಮಯ್ಯ, ವಿಧಾನ ಪರಿಷತ್‌ ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್. ಭೋಜೇಗೌಡ ಭಾಗವಹಿಸಿದ್ದರು   

ಕಡೂರು: ‘ಮಳೆ ಸಮೃದ್ಧಿಯಾಗಿ ಸುರಿದು ಕೆರೆ–ಕಟ್ಟೆಗಳು ತುಂಬಿದರೆ ರೈತರಿಗೆ ಸಂತಸವಾಗುತ್ತದೆ. ಹಾಗಾಗಿ ವರುಣನ ಕೃಪೆ ರೈತರ ಮೇಲೆ ಇರಲಿ’ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಆಶಿಸಿದರು.

ತಾಲ್ಲೂಕಿನ ಸಖರಾಯಪಟ್ಟಣದಲ್ಲಿ ಶುಕ್ರವಾರ ಇತಿಹಾಸ ಪ್ರಸಿದ್ಧ ಅಯ್ಯನಕೆರೆಯ ದಂಡೆಯಲ್ಲಿರುವ ಶ್ರೀ ಬಲ್ಲಾಳೇಶ್ವರಸ್ವಾಮಿಗೆ ಮಳೆಗಾಗಿ ಪ್ರಾರ್ಥಿಸಿ ನಡೆಯುತ್ತಿರುವ ವಿಶೇಷ ಪೂಜಾ ಕೈಂಕರ್ಯದಲ್ಲಿ ಅವರು ಮಾತನಾಡಿದರು.

ಅಯ್ಯನಕೆರೆ ಈ ಭಾಗದ ರೈತರ ಜೀವನಾಡಿಯಾಗಿದ್ದು, ಇದರಿಂದ ಸಾವಿರಾರು ಎಕರೆ ಕೃಷಿ ಭೂಮಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಅಚ್ಚುಕಟ್ಟುದಾರರು ಮತ್ತು ಸಾರ್ವಜನಿಕರು ಅಯ್ಯನಕೆರೆ ತುಂಬಲು ಧಾರ್ಮಿಕ ಕಾರ್ಯಕ್ರಮವನ್ನು ಹಲವು ವರ್ಷಗಳಿಂದ ನಡೆಸುತ್ತಾ ಬಂದಿದ್ದಾರೆ. ಇದರ ಪ್ರಯುಕ್ತ ಬಲ್ಲಾಳೇಶ್ವರಸ್ವಾಮಿ ದೇವಾಲಯದ ಮುಂಭಾಗದಲ್ಲಿ ಅನ್ನಸಂತರ್ಪಣೆ ನಡೆಯುತ್ತಿದ್ದು, ಭೋಜನಾಲಯಕ್ಕೆ ಅನುಕೂಲವಾಗುವಂತೆ ಚಾವಣಿ ನಿರ್ಮಿಸಲು ₹5 ಲಕ್ಷ ಅನುದಾನ ನೀಡುವುದಾಗಿ ತಿಳಿಸಿ, ಇದೇ ಶ್ರಾವಣ ಮಾಸದಲ್ಲಿ ಭೂಮಿ‍ಪೂಜೆ ನೆರವೇರಿಸಲಾಗುವುದು ಎಂದರು.

ADVERTISEMENT

ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಮಾತನಾಡಿ, ‘ನೀರು ಅತ್ಯಮೂಲ್ಯ ವಸ್ತುವಾಗಿದ್ದು, ಕೆರೆ–ಕಟ್ಟೆಗಳು ನಮ್ಮೆಲ್ಲರ ಜೀವನಾಡಿ. ಅವುಗಳನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ’ ಎಂದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಮಾತನಾಡಿ, ‘ಅಯ್ಯನಕೆರೆಗೆ ಪೂಜೆ ಸಲ್ಲಿಸಿ ಕೃತಜ್ಞತೆ ಅರ್ಪಿಸುವುದು ನಮ್ಮ ಕರ್ತವ್ಯ. ಅದು ನಿರಂತರವಾಗಿ ನಡೆದುಕೊಂಡು ಬಂದಿದೆ. ಇದರ ಜೊತೆಗೆ ಕೆರೆಯ ಅಭಿವೃದ್ಧಿಗೆ ಕಾಮಗಾರಿಗಳು ನಡೆಯಬೇಕಿದ್ದು, ಇದಕ್ಕೆ ನಮ್ಮ ಸಹಕಾರವೂ ಇದೆ. ರೈತರಲ್ಲಿ ನೀರು ಬಳಕೆಯಷ್ಟೇ ಅಲ್ಲದೆ ಕೆರೆಯ ಬಗ್ಗೆ ಕಾಳಜಿಯೂ ಇರಬೇಕು’ ಎಂದರು.

ಸೇವಾ ಸಮಿತಿಯ ಅಧ್ಯಕ್ಷ ಎಸ್.ಪಿ.ಲೋಕೇಶ್ ಹಾಗೂ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್, ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್‌.ಸಿ.ಕಲ್ಮರುಡಪ್ಪ, ಎಪಿಎಂಸಿ ಮಾಜಿ ಸದಸ್ಯ ಲೋಕೇಶ್, ಅಚ್ಚುಕಟ್ಟುದಾರರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.