ADVERTISEMENT

ಮೇಕೆದಾಟು ಪಾದಯಾತ್ರೆ– ರಾಜಕಾರಣ ಬಿಟ್ಟರೆ ಬೇರೇನಿಲ್ಲ: ಸಿ.ಟಿ ರವಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 15:42 IST
Last Updated 28 ಫೆಬ್ರುವರಿ 2022, 15:42 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿಕ್ಕಮಗಳೂರು: ‘ಮೇಕೆದಾಟು ಪಾದಯಾತ್ರೆಯಲ್ಲಿ ರಾಜಕಾರಣ ಬಿಟ್ಟರೆ ಬೇರೆ ಏನೂ ಇಲ್ಲ. ಆರು ವರ್ಷ ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆ ಏಕೆ ಮಾಡಲಿಲ್ಲ ಎಂಬುದಕ್ಕೆ ಕಾಂಗ್ರೆಸ್‌ನವರು ಉತ್ತರಿಸಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪಾದಯಾತ್ರೆ ನಾಟಕ ಮಾಡುವುದರ ಬದಲಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರು ತಮಿಳುನಾಡಿಗೆ ನಿಯೋಗ ಒಯ್ದು ಅಲ್ಲಿನ ಕಾಂಗ್ರೆಸ್‌ ಮುಖಂಡ ಚಿದಂಬರಂ, ಡಿಎಂಕೆಯ ಸ್ಟಾಲಿನ್‌ ಅವರನ್ನು ಒಪ್ಪಿಸಿದರೆ ಕೆಲಸ ಸುಲಭವಾಗುತ್ತದೆ. ಮೇಕೆದಾಟು ಯೋಜನೆಗೆ ಆಕ್ಷೇಪಣೆ ಇಲ್ಲ ಎಂದು ಅವರು ಹೇಳಿದರೆ ಎಲ್ಲ ಅಡೆತಡೆ ನಿವಾರಣೆಯಾಗುತ್ತವೆ’ ಎಂದರು.

‘ಯೋಜನೆಗೆ ತಮಿಳುನಾಡಿನ ಆಕ್ಷೇಪಣೆ ಇರುವುದಿಂದ ಕೋರ್ಟ್‌ ತೀರ್ಪಿನವರೆಗೆ ಕಾಯಬೇಕು. ಇಲ್ಲವೇ, ತಮಿಳನಾಡಿನವರನ್ನು ಯೋಜನೆಗೆ ಒಪ್ಪಿಸಬೇಕು. ಅವರನ್ನು ಒಪ್ಪಿಸುವ ಶಕ್ತಿ ಸಿದ್ದರಾಮಯ್ಯ ಅವರಿಗಿದೆ. ಸಿದ್ದರಾಮಯ್ಯ ಗುಟುರು ಹಾಕಿದರೆ ಸೋನಿಯಾಗಾಂಧಿ ಅಲರ್ಟ್‌ ಆಗ್ತಾರೆ. ಸೋನಿಯಾ ಹೇಳಿದ್ದನ್ನು ಚಿದಂಬರಂ ತಳ್ಳಿಹಾಕಲ್ಲ. ಚಿದಂಬರಂ ಮಾತನ್ನು ಸ್ಟಾಲಿನ್ ತಳ್ಳಿಹಾಕಲ್ಲ. ಇದು ಸುಲಭದಲ್ಲಿ ಆಗುವ ಕೆಲಸ’ ಎಂದು ಪರಿಹಾರ ಸೂಚಿಸಿದರು.

ADVERTISEMENT

ಜಾತ್ಯತೀತ ಪದ

‘ಜಾತ್ಯತೀತರು ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ನವರು ಮತೀಯ ರೂಪ ಪ್ರಕಟಗೊಳಿಸಿದ್ದಾರೆ. ಹಿಂದೂಗಳಿಗೆ ಮೋಸ ಮಾಡಲು ಜಾತ್ಯತೀತ ಪದ ಬಳಸಿಕೊಂಡಿದ್ದಾರೆ’ ಎಂದು ಸಿ.ಟಿ. ರವಿ ಕುಟುಕಿದರು.

‘ಮುಸ್ಲಿಂ ಎಂದಿಗೂ ಜಾತ್ಯತೀತರಾಗಲ್ಲ. ಆದರೆ, ಹಿಂದೂಗಳು ಜಾತ್ಯತೀತರಾಗಿರಬೇಕು ಎಂದು ಬಯಸುತ್ತಾರೆ. ‘ಬಾದಾಮಿಯಲ್ಲಿ ಕಾರ್ಯಕರ್ತರು ಸಿದ್ದರಾಮಯ್ಯ ಅವರಿಗೆ ಕೇಸರಿ ಪೇಟ ತೊಡಿಸಲು ಹೋದಾಗ ಹಾಕಿಸಿಕೊಂಡಿರಲಿಲ್ಲ. ಉಳ್ಳಾಲದಲ್ಲಿ ಈಚೆಗೆ ಮುಸ್ಲಿಂ ಟೋಪಿ ಹಾಕಿಕೊಂಡಿದ್ದರು. ಸಿದ್ದರಾಮಯ್ಯ ಅವರು ಜಾತ್ಯತೀತ ಎಂದರೆ ನಂಬಲಾಗದು. ಅವರೊಬ್ಬ ಮತೀಯವಾದಿ’ ಎಂದು ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.