ಬೀರೂರು (ಕಡೂರು): ಮೆಸ್ಕಾಂನ ಪ್ರತಿ ಜನಸಂಪರ್ಕ ಸಭೆಯಲ್ಲಿ ಗ್ರಾಹಕರ ಮತ್ತು ರೈತರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿ ಪರಿಹರಿಸುವಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂಬ ಆಕ್ರೋಶ ಶನಿವಾರ ಪಟ್ಟಣದ ಮೆಸ್ಕಾಂ ಕಚೇರಿ ಆವರಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ವ್ಯಕ್ತವಾಯಿತು.
ಹೊಗರೇಹಳ್ಳಿ ಗ್ರಾಮದ ರೈತ ಮನು, ಗ್ರಾಮದಲ್ಲಿ ವಾರದಿಂದಲೂ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಕೊಟ್ಟರೆ ಗ್ರಾಮದ ಬಡಾವಣೆಗಳಿಗೂ ಹಾಗೂ ತೋಟದ ಲೈನ್‌ಗಳಿಗೂ ಒಂದೇ ಬಾರಿ ತ್ರೀಫೇಸ್ ವಿದ್ಯುತ್ ನೀಡುತ್ತಿದ್ದೀರಾ, ಏನಾದರೂ ಅವಘಡಗಳು ಸಂಭವಿಸಿದರೆ ಯಾರು ಹೊಣೆ? ಗೌರಿ-ಗಣಪತಿ ಹಬ್ಬದ ಸಡಗರವನ್ನು ವಿದ್ಯುತ್ ಇಲ್ಲದೇ ಆಚರಿಸುವಂತಾಯಿತು. ಸರ್ಕಾರ ರೈತರಿಗೆ ನಿಗದಿ ಮಾಡಿರುವ 7 ಗಂಟೆ ತ್ರೀಫೇಸ್ ವಿದ್ಯುತ್‌ನ್ನು ನಿರಂತರವಾಗಿ ನೀಡದೆ ಕಂತಿನಲ್ಲಿ ಕೊಡುತ್ತೀರಾ, ಮಲ್ಲೇಗೌಡ ಫಾರಂ ಬಳಿ ತುಂಡರಿಸಿದ ವಿದ್ಯುತ್ ಲೈನ್ ಅನ್ನು ಅಂದಾಜು 40 ಕಡೆ ಜೋಡಣೆ ಮಾಡಲಾಗಿದ್ದು, ಆ ಲೈನ್ ಯಾವಾಗ ಎಲ್ಲಿ ತುಂಡಾಗಿ ಬೀಳುತ್ತದೆ ಎಂಬುದು ಗೊತ್ತಿಲ್ಲ. ಏನಾದರೂ ಅವಘಡ ಸಂಭವಿಸುವ ಮೊದಲು ಲೈನ್ ಬದಲಿಸಿಕೊಡಬೇಕು ಎಂದು ಒತ್ತಾಯಿಸಿದರು.
ಬೀರೂರಿನ ಮಾರ್ಗದಕ್ಯಾಂಪ್ ನಿವಾಸಿ ಮಲ್ಲಿಕಾರ್ಜುನ್ ಮಾತನಾಡಿ, ಪೌಲ್ಟ್ರಿ ಫಾರಂನ ವಿದ್ಯುತ್ ಮೀಟರ್‌ದಲ್ಲಿ ದೋಷವಿದ್ದ ಬಗ್ಗೆ ಅರ್ಜಿ ನೀಡಿದ್ದು, ಅದನ್ನು ನಿಮ್ಮ ಇಲಾಖೆಯ ಎನರ್ಜಿ ಆಡಿಟರ್ (ಸ್ಥಾವರ ಮಾಪಕ ಪರಿಶೋಧಕರು) ಪರಿಶೀಲಿಸಿ ದೋಷವಿರುವುದನ್ನು ದೃಢಪಡಿಸಿ ವರದಿ ನೀಡಿದ್ದರೂ ಮೆಸ್ಕಾಂ ವತಿಯಿಂದ ಪರಿಹಾರ ನೀಡದೆ ವಿದ್ಯುತ್ ಬಿಲ್ ಏರಿಕೆ ಆಗಿದೆ. ಅದನ್ನು ಸರಿಪಡಿಸಿ ಎಂದು ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ. ನಿಮ್ಮ ಇಲಾಖೆಯ ಆಡಿಟರ್ ವರದಿಗೆ ಬೆಲೆ ಇಲ್ಲವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಗ್ರಾಹಕ ಕೆ.ಎಸ್.ಸೋಮಶೇಖರ್, ಮೆಸ್ಕಾಂ ಏರ್ಪಡಿಸುವ ಜನ ಸಂಪರ್ಕ ಸಭೆ ಬಗ್ಗೆ ಸೂಕ್ತವಾಗಿ ಪ್ರಚಾರ ಮಾಡದೆ ಸಭೆಗೆ ರೈತರು ಹಾಗೂ ಗ್ರಾಹಕರು ಭಾಗವಹಿಸಲು ಹೇಗೆ ಸಾಧ್ಯ. ಮೊದಲು ಸಭೆಯ ಬಗ್ಗೆ ಜನತೆಗೆ ಕನಿಷ್ಠ ನಾಲ್ಕು ದಿನಗಳ ಮೊದಲು ಉಪವಿಭಾಗ ವ್ಯಾಪ್ತಿಯ ನಾಗರಿಕರಿಗೆ ಮಾಹಿತಿ ನೀಡಿ ಎಂದು ತಿಳಿಸಿದರು.
ನಾಗರಿಕ ಬಾವಿಮನೆ ಮಧು, ಪಟ್ಟಣದಾದ್ಯಂತ ಕೆಲವು ಕಡೆ ವಿದ್ಯುತ್ ಕಂಬಗಳು ದುಸ್ಥಿತಿಯನ್ನು ತಲುಪಿದ್ದು, ಅವುಗಳನ್ನು ತೆರವು ಮಾಡಿ. ಖಾಲಿ ನಿವೇಶನಗಳ ಮಧ್ಯ ಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್ ಅನ್ನು ತೆರವು ಮಾಡಿ ಎಂದು ಆಗ್ರಹಿಸಿದರು.
ದೂರುಗಳಿಗೆ ಪ್ರತಿಕ್ರಿಯಿಸಿದ ಚಿಕ್ಕಮಗಳೂರು ಅಧೀಕ್ಷಕ ಎಂಜಿನಿಯರ್ ಮಂಜುನಾಥ್, ಪೌಲ್ಟ್ರಿ ಫಾರಂನ ಹೆಚ್ಚುವರಿ ವಿದ್ಯುತ್ ಶುಲ್ಕ ಬರುತ್ತಿರುವ ಬಗ್ಗೆ ಕೂಡಲೇ ಪರಿಶೀಲನೆಗೆ ಕಳುಹಿಸಿ ಸರಿಪಡಿಸಲಾಗುವುದು. ಅನಧಿಕೃತ ಬಳಕೆದಾರರಿಂದ ಸಮಸ್ಯೆಗಳು ಹೆಚ್ಚಿ ಸರಿಯಾದ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತಿಲ್ಲ. ರೈತರು ನೋಂದಣಿ ಮಾಡಿಸಿಕೊಂಡು ಅಧಿಕೃತ ವಿದ್ಯುತ್ ಬಳಕೆದಾರರಾಗಿ ಸೌಲಭ್ಯ ಪಡೆಯಬೇಕು. ಪ್ರತಿ ಬಾರಿಯೂ ಗ್ರಾಹಕರ ಸಮಸ್ಯೆಗಳನ್ನು ಕೇಳಿ, ಅರ್ಜಿ ಸ್ವೀಕರಿಸಿ ರೆಕಾರ್ಡ್ ಮಾಡಲಾಗುತ್ತದೆ. ಅನುದಾನದ ಲಭ್ಯತೆ ಆಧಾರದಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಪರಿಹರಿಸಲು ಆದ್ಯತೆ ನೀಡಲಾಗುತ್ತದೆ. ರೈತರು ನೀಡುವ ದೂರುಗಳ ಅರ್ಜಿಯನ್ನು ಮಂಗಳೂರಿಗೆ ಕಳುಹಿಸಿ ನಂತರ ಅನುಮತಿ ಮೇರೆಗೆ ಅಂದಾಜು ಪಟ್ಟಿ ತಯಾರಿಸಿ ಕೆಲಸದ ಆದೇಶವನ್ನು ಪಡೆಯುವ ಪ್ರಕ್ರಿಯೆಗೆ ಕಾಲಾವಕಾಶ ಬೇಕಿದ್ದು ಗ್ರಾಹಕರು ತಾಳ್ಮೆಯಿಂದ ಇರಬೇಕು ಎಂದರು.
ಸಭೆಯಲ್ಲಿ ಎಇಇ ವೀಣಾ.ಕೆ.ಎಸ್, ಎಇಗಳಾದ ವಿಜಯಕುಮಾರ್, ಯತೀಶ್, ಹಿರೇನಲ್ಲೂರು ಜೆಇ ಕಿಶೋರ್ ರಾಜ್, ಲೆಕ್ಕ ಸಹಾಯಕ ಸುರೇಶ್, ಗ್ರಾಹಕರು ಹಾಗೂ ರೈತರು ಇದ್ದರು.
‘ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ಮಂಜುನಾಥ್ ಅವರ ನಡೆ ಉದ್ದೇಶಿಸಿ ಮಾತನಾಡಿದ ಗ್ರಾಹಕ ಮನು ‘ರೈತರ ಗ್ರಾಹಕರ ಸಮಸ್ಯೆ ಬಗ್ಗೆ ಮಾಹಿತಿ ನೀಡಲು ಕರೆ ಮಾಡಿದರೆ ಬ್ಲ್ಯಾಕ್ ಮಾಡುತ್ತೀರಿ. ಸರ್ಕಾರ ತಮಗೆ ನೀಡಿರುವ ಫೋನ್ ಗ್ರಾಹಕರ ಸಮಸ್ಯೆಗಳನ್ನು ಆಲಿಸಲು ಕೊಟ್ಟಿದ್ದಿಯೊ ಅಥವಾ ರೈತರಿಗೆ ಉತ್ತರಿಸಬಾರದು ಎಂಬ ನಿಮ್ಮ ಪೂರ್ವಾಗ್ರಹವೊ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.