ADVERTISEMENT

ಸೇವಾಲಾಲ್ ಆದರ್ಶ ಎಲ್ಲರಿಗೂ ಮಾರ್ಗದರ್ಶಿ: ಶಾಸಕ ಎಚ್.ಡಿ. ತಮ್ಮಯ್ಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 4:04 IST
Last Updated 16 ಫೆಬ್ರುವರಿ 2026, 4:04 IST
ಸಂತ ಸೇವಾಲಾಲ್ ಜಯಂತಿಯನ್ನು ಶಾಸಕ ಎಚ್.ಡಿ. ತಮ್ಮಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಉದ್ಘಾಟಿಸಿದರು
ಸಂತ ಸೇವಾಲಾಲ್ ಜಯಂತಿಯನ್ನು ಶಾಸಕ ಎಚ್.ಡಿ. ತಮ್ಮಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಉದ್ಘಾಟಿಸಿದರು   

ಚಿಕ್ಕಮಗಳೂರು: ಹಿಂಸೆ, ಅಸಮಾನತೆ ಇರುವ ಪ್ರಸ್ತುತ ಸಮಾಜಕ್ಕೆ ಸಂತ ಸೇವಾಲಾಲ್‌ ಅವರ ತತ್ವಾದರ್ಶಗಳು ಮಾರ್ಗದರ್ಶನ ನೀಡುತ್ತವೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಜಿಲ್ಲಾಡಳಿತ, ಬಂಜಾರ ಸಂಘದಿಂದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಂತ ಸೇವಾಲಾಲ್ ಅವರ 287ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅಸಮಾನತೆ, ಶೋಷಣೆ ವಿರುದ್ಧ ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಸಮಸಮಾಜ ನಿರ್ಮಿಸಬೇಕು ಎಂಬ ಕಾರಣಕ್ಕೆ 12ನೇ ಶತಮಾನದಲ್ಲಿ ಬಸವಣ್ಣ, 17ನೇ ಶತಮಾನದಲ್ಲಿ ಸಂತ ಸೇವಾಲಾಲ್, 21ನೇ ಶತಮಾನದಲ್ಲಿ ಅಂಬೇಡ್ಕರ್, ಕುವೆಂಪು ಮತ್ತಿತರ ಮಹನೀಯರು ಸಮಾಜ ಸುಧಾರಣೆಗೆ ಹೋರಾಟ ಮಾಡಿದ್ದಾರೆ. ಸತ್ಯ, ಅಹಿಂಸೆ ಪಾಲನೆ ಸೇವಾಲಾಲರ ಧ್ಯೇಯವಾಗಿತ್ತು’ ಎಂದು ಹೇಳಿದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ‘ಸಂತ ಸೇವಾಲಾಲರು ಬದುಕಿದ್ದಾಗ ಮಾಡಿದ್ದ ಸಮಾಜಮುಖಿ ಕಾರ್ಯಗಳಿಂದ ಸಮಾಜಕ್ಕೊಂದು ಆತ್ಮಶಕ್ತಿಯ ಜಾಗೃತಿ ಮೂಡಿದೆ. ಶ್ರೀಮಂತಿಕೆಯಿಂದಿದ್ದ ಬಂಜಾರ ಸಮಾಜವು ಕಾಲದ ಪರಿಸ್ಥಿತಿಗೆ ಸಿಲುಕಿ ನಿಕೃಷ್ಟ ಸ್ಥಿತಿಯಲ್ಲಿದೆ. ಲಮಾಣಿ ಭಾಷೆ ಮತ್ತು ಸಂಸ್ಕೃತಿ ಉಳಿಸಲು ನಾನು ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದಾಗ ಬಂಜಾರ ಅಕಾಡೆಮಿ ಸ್ಥಾಪನೆ ಮಾಡಿದ್ದೆ’ ಎಂದು ತಿಳಿಸಿದರು.

ಉಪನ್ಯಾಸಕಿ ಮೀನಾಕ್ಷಿ ಬಾಯಿ ಉಪನ್ಯಾಸ ನೀಡಿ, ‘1749ರಲ್ಲಿ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕು ಸೂರಗೊಂಡನ ಕೊಪ್ಪದಲ್ಲಿ ಸಂತ ಸೇವಾಲಾಲರು ಜನಿಸುವ ಮೂಲಕ ಮಾನವೀಯ ಮೌಲ್ಯಗಳ ಪುನರ್ ಜನ್ಮ ಆದಂತಾಯಿತು. ಬಂಜಾರ ಸಮುದಾಯದ ಆತ್ಮಗೌರವ ಉದಯವಾದಂತೆ ಆಯಿತು. ಶಿಕ್ಷಣದಿಂದ ವಂಚಿತರಾಗಿ ಶೋಷಣೆಗೆ ಒಳಗಾಗಿದ್ದ ಬಂಜಾರ ಸಮಾಜಕ್ಕೆ ದಿಕ್ಸೂಚಿಯಾದವರು ಸಂತ ಸೇವಲಾಲರು’ ಎಂದು ಹೇಳಿದರು.

‘ಬ್ರಿಟಿಷರು ನಮ್ಮ ವಿರುದ್ಧ ಗಿರಿಜನ ಅಪರಾಧ ದಂಡ ಸಂಹಿತೆ ತಂದು ಶೋಷಿಸಿದರು. ನಂತರ ಮೈಸೂರು ಮಹಾರಾಜರ ಕಾಲದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಹಕರಿಸಿದರು’ ಎಂದು ತಿಳಿಸಿದರು.

ಬಂಜಾರ ಸಮಾಜದ ಮುಖಂಡ ರಾಮನಾಯ್ಕ ಮಾತನಾಡಿದರು. ಸಿಡಿಎ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ನಗರಸಭೆ ಉಪಾಧ್ಯಕ್ಷೆ ಲಲಿತಾಬಾಯಿ ರವಿನಾಯಕ, ಉಪತಹಸೀಲ್ದಾರ್ ಪ್ರಸನ್ನ, ಬಂಜಾರ ಸಂಘದ ಮುಖಂಡ ಲಾಲ್‌ಸಿಂಗ್, ಆನಂದ ನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿ.ರಮೇಶ್ ಇದ್ದರು.

ಸರ್ಕಾರದ ವಿರುದ್ಧ ಘೋಷಣೆ

ಶಾಸಕ ಎಚ್.ಡಿ. ತಮ್ಮಯ್ಯ ತಮ್ಮ ಅಧ್ಯಕ್ಷೀಯ ಭಾಷಣ ಶುರು ಮಾಡಿದಾಗ ಬಂಜಾರ ಸಮುದಾಯದ ಮುಖಂಡ ಪ್ರದೀಪ್‌ ನಾಯಕ ಮತ್ತು ಮಂಜುನಾಥ ನಾಯ್ಕ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ಒಳಮೀಸಲಾತಿ ವರ್ಗೀಕರಣದಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ಈ ಬಗ್ಗೆ ಮಾತನಾಡಲು ವೇದಿಕೆಯಲ್ಲಿ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು. ವೇದಿಕೆಯತ್ತ ಬರಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ತಡೆದು ಹೊರಗೆ ಕಳುಹಿಸಿದರು.  ಈ ವೇಳೆ ಮಾತನಾಡಿ ಶಾಸಕ ಎಚ್.ಡಿ. ತಮ್ಮಯ್ಯ ‘ಪ್ರತಿಭಟನಾಕಾರರು ಅವರಾಗಿಯೇ ಇಲ್ಲಿಗೆ ಬಂದಿಲ್ಲ. ಅವರಿಗೆ ಯಾರೋ ಹೇಳಿ ಕರೆಸಿದ್ದಾರೆ’ ಎಂದರು. ಸಮಾರಂಭ ಮುಗಿದ ಬಳಿಕ ಗೇಟಿನಲ್ಲಿ ಶಾಸಕರನ್ನು ತಡೆದು ‘ಒಳ ಮೀಸಲಾತಿಯಿಂದ ನಮ್ಮ ಸಮುದಾಯಕ್ಕೆ ಅನ್ಯಾಯವಾಗಲಿದೆ’ ಎಂದು ತಿಳಿಸಿದರು. ಇದೇ ವೇಳೆ ಸಿ.ಟಿ. ರವಿ ಅವರಿಗೂ ಮುಖಂಡರು ಸಮಸ್ಯೆ ಮನವರಿಕೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.