ADVERTISEMENT

ಕಡೂರು | ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ: ಶಾಸಕ ಆನಂದ್‌

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 7:12 IST
Last Updated 27 ಡಿಸೆಂಬರ್ 2025, 7:12 IST
ಕಡೂರು ತಾಲ್ಲೂಕು ದೊಡ್ಡಪಟ್ಟಣಗೆರೆಯಲ್ಲಿ ಶುಕ್ರವಾರ ನಡೆದ ಶಾಸಕರ ನಡೆ ಗ್ರಾಮ ಪಂಚಾಯಿತಿ ಕಡೆ ಕಾರ್ಯಕ್ರಮವನ್ನು ಶಾಸಕ ಕೆ.ಎಸ್‌.ಆನಂದ್‌ ಉದ್ಘಾಟಿಸಿದರು
ಕಡೂರು ತಾಲ್ಲೂಕು ದೊಡ್ಡಪಟ್ಟಣಗೆರೆಯಲ್ಲಿ ಶುಕ್ರವಾರ ನಡೆದ ಶಾಸಕರ ನಡೆ ಗ್ರಾಮ ಪಂಚಾಯಿತಿ ಕಡೆ ಕಾರ್ಯಕ್ರಮವನ್ನು ಶಾಸಕ ಕೆ.ಎಸ್‌.ಆನಂದ್‌ ಉದ್ಘಾಟಿಸಿದರು   

ಕಡೂರು: ಸರ್ಕಾರದ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್‌ಗೆ ಶಾಸಕ ಕೆ.ಎಸ್‌.ಆನಂದ್‌ ತಾಕೀತು ಮಾಡಿದರು.

ತಾಲ್ಲೂಕಿನ ದೊಡ್ಡಪಟ್ಟಣಗೆರೆ ಗ್ರಾಮದಲ್ಲಿ ಶುಕ್ರವಾರ ನಡೆದ ಶಾಸಕರ ನಡೆ-ಗ್ರಾಮ ಪಂಚಾಯಿತಿ ಕಡೆʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮದ ವ್ಯಾಪ್ತಿಯಲ್ಲಿ ಜಲಜೀವನ್‌ ಮಿಷನ್‌ ಕಾಮಗಾರಿಯನ್ನು ಅನುಷ್ಠಾನಗೊಳಿಸಿ ಹಸ್ತಾಂತರಿಸಿಯೂ ಆಗಿದೆ. ಆದರೆ ಒಂದು ಕಡೆಯೂ ಸರಿಯಾಗಿ ಕಾಮಗಾರಿ ನಿರ್ವಹಿಸಿಲ್ಲ, ಎಲ್ಲೆಡೆ ನೀರು ಸೋರುತ್ತಿದ್ದು, ರಸ್ತೆಗಳನ್ನೂ ಹಾಳು ಮಾಡಲಾಗಿದೆ ಎಂದು ಗ್ರಾಮಸ್ಥರು ದೂರಿದರು. ಈ ಕುರಿತು ಎಂಜಿನಿಯರ್‌ ಪ್ರಕಾಶ್‌ ಅವರಿಂದ ಸ್ಪಷ್ಟೀಕರಣ ಕೇಳಿದ ಶಾಸಕರು, ಗುತ್ತಿಗೆದಾರರಿಗೆ ಬಿಲ್‌ ಪಾವತಿ ಆಗಿದೆಯೇ, ಕಳಪೆ ಕಾಮಗಾರಿ ಆಗಿದ್ದರೂ ಹಸ್ತಾಂತರ ಹೇಗೆ ಆಯಿತು? ಎಂದು ಪ್ರಶ್ನಿಸಿದರು.

ADVERTISEMENT

ಇದಕ್ಕೆ ಉತ್ತರಿಸಿದ ಎಂಜಿನಿಯರ್‌ ಪ್ರಕಾಶ್‌, ಗುತ್ತಿಗೆದಾರರಿಗೆ ಶೇ 75ರಷ್ಟು ಹಣ ಸಂದಾಯವಾಗಿದ್ದು ಒಂದು ವರ್ಷದ ನಿರ್ವಹಣಾ ಅವಧಿ ಇದೆ. ಅವರಿಗೆ ದುರಸ್ತಿ ಮಾಡುವಂತೆ ಸೂಚಿಸಲಾಗಿದೆ ಎಂದರು. ಕಾಮಗಾರಿ ನಡೆಯುವ ಸಮಯದಲ್ಲಿ ಎಂಜಿನಿಯರ್‌ಗಳು ಸ್ಥಳ ಪರಿಶೀಲನೆ ಮಾಡಬೇಕು. ಅವರಿಗೆ ಬಾಕಿ ಹಣ ಪಾವತಿಸಕೂಡದು. ಎಲ್ಲೆಡೆ ಜೆಜೆಎಂ ಕಾಮಗಾರಿ ಕುರಿತು ಇಂತಹವೇ ದೂರುಗಳಿವೆ. ಸಮರ್ಪಕ ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದು ಶಾಸಕರು ಸೂಚಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 350 ವಸತಿ ರಹಿತರಿದ್ದು 180 ಜನ ನಿವೇಶನ ರಹಿತರಿದ್ದಾರೆ. ಅವರಿಗೆ ವಸತಿ ಅಥವಾ ನಿವೇಶನ ಒದಗಿಸಲು ಪಿಡಿಒ, ಆರ್‌ಐ ಮತ್ತು ಗ್ರಾಮ ಆಡಳಿತಾಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ. ಸರ್ಕಾರಿ ಜಾಗವಿದ್ದರೆ ಗುರುತಿಸಿ ಪಂಚಾಯಿತಿ ವತಿಯಿಂದ ಪ್ರಸ್ತಾವ ಸಲ್ಲಿಸಿ. ಜಿಲ್ಲಾಧಿಕಾರಿ ಬಳಿ ಮಂಜೂರಾತಿಗೆ ಪ್ರಯತ್ನಿಸುವೆ ಎಂದು ವಸತಿ ರಹಿತರ ಪರಿಹಾರ ಕೋರಿಕೆಯ ಅರ್ಜಿಗೆ ಆನಂದ್‌ ಉತ್ತರಿಸಿದರು.

ದೊಡ್ಡಪಟ್ಟಣಗೆರೆ ಕೆರೆ ವ್ಯಾಪ್ತಿಯಲ್ಲಿ ಜನರು ಆಳವಾಗಿ ಮಣ್ಣು ಬಗೆದು ಕೆರೆಯ ಸ್ವರೂಪ ಹಾಳು ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ಪಿಡಿಒ ಅವರು ಸ್ಥಳ ಪರಿಶೀಲನೆ ನಡೆಸಿ ತಿಳಿ ಹೇಳಬೇಕು. ಕೇಳದಿದ್ದರೆ ಪೊಲೀಸರಲ್ಲಿ ದೂರು ಸಲ್ಲಿಸಿ ಎಂದು ಸೂಚಿಸಿದರು. ಜಮೀನಿಗೆ ತೆರಳಲು ವೇದಾ ಹಳ್ಳ ಅಡ್ಡವಾಗಿದೆ. ಇಲ್ಲಿ ಸೇತುವೆ ಅಥವಾ ಚೆಕ್‌ಡ್ಯಾಂ ನಿರ್ಮಿಸಲು ಮುಂದಾಗಬೇಕು ಎಂದು ಉಮಾದೇವಿ ಮತ್ತಿತರರು ಕೋರಿದರು. ಅದನ್ನೂ ಪರಿಶೀಲಿಸುವಂತೆ ಶಾಸಕ ಸೂಚಿಸಿದರು.

ಮರಡಿಹಳ್ಳಿ ಭಾಗದ ಜನರು ಪಡಿತರ ಪಡೆಯಲು ಪಟ್ಟಣಗೆರೆಗೆ ಬರಬೇಕು. ಸರ್ವರ್‌ ಸಮಸ್ಯೆ, ವಯಸ್ಸಾದವರಿಗೆ ಓಡಾಟ ಹಾಗೂ ಆಹಾರ ಧಾನ್ಯಗಳನ್ನು ಹೊತ್ತು ಸಾಗಲು ಸಮಸ್ಯೆ ಆಗುತ್ತಿದೆ ಎನ್ನುವ ಅರ್ಜಿಗೆ ಉತ್ತರಿಸಿದ ಆಹಾರ ನಿರೀಕ್ಷಕ, 5 ಕಿ.ಮೀ ದೂರವಿದ್ದರೆ ಉಪಕೇಂದ್ರ ತೆರೆಯಲು ಅವಕಾಶವಿದೆ. ಇಲ್ಲಿ ಸುಮಾರು ಎರಡು ಕಿ.ಮೀ ದೂರವಿರಬಹುದು. ನ್ಯಾಯಬೆಲೆ ಅಂಗಡಿಯವರು ಅಲ್ಲಿಗೇ ತೆರಳಿ ಬಯೋಮೆಟ್ರಿಕ್‌ ಪಡೆಯಲು ಸೂಚಿಸುವೆ ಎಂದರು.  

ಎನ್‌.ಜಿ.ಕೊಪ್ಪಲು ಭಾಗದಲ್ಲಿ ಸಾಕಷ್ಟು ಪರಿಶಿಷ್ಟ ಪಡಿತರ ಕಾರ್ಡ್‌ದಾರರಿದ್ದು, ಅಲ್ಲಿ ಪ್ರತ್ಯೇಕ ಅಂಗಡಿ ಸ್ಥಾಪಿಸುವಂತೆ ಹಲವರು ಕೋರಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ 63 ಎಕರೆ ಕಂದಾಯ ಭೂಮಿ ಈ ಹಿಂದೆ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಂದಾಯ ಇಲಾಖೆಗೆ ಮತ್ತೆ ಭೂಮಿ ವಾಪಸ್‌ ಪಡೆದು ಜನರಿಗೆ ಸಾಗುವಳಿ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಗ್ರಾಮಸ್ಥರು ಕೋರಿದರು.

ಕಟ್ಟೆಹೊಳೆಯಮ್ಮ ದೇವಾಲಯಕ್ಕೆ ಸೇರಿದ ಇನಾಂ ಭೂಮಿಯನ್ನು ದೇವಾಲಯಕ್ಕೆ ಮೀಸಲಿರಿಸಬೇಕು. ಅಲ್ಲಿ ಸಮುದಾಯ ಭವನಕ್ಕೆ ಶೌಚಾಲಯ ನಿರ್ಮಿಸಲು ಅನುವು ಮಾಡಿಕೊಡಬೇಕು. ವಿದ್ಯುತ್‌ ಲೈನ್‌ಗೆ ಕೇಬಲ್‌ ಅಳವಡಿಸಿಕೊಡಿ ಎಂದು ಕಟ್ಟೆಹೊಳೆಯಮ್ಮ ಜಾತ್ರಾ ಸಮಿತಿ ಅಧ್ಯಕ್ಷ ಹನುಮಂತಪ್ಪ ಕೋರಿದರು. 

ಮರಡಿಹಳ್ಳಿ ಕೆರೆಯನ್ನು ಶಾಶ್ವತ ನೀರಾವರಿಗೆ ಒಳಪಡಿಸಿ, ಇ-ಸ್ವತ್ತು ವಿತರಿಸಿ, ಶಾಲೆ, ಕಾಲೇಜಿಗೆ ಕಾಂಪೌಂಡ್‌ ನಿರ್ಮಿಸಿಕೊಡಿ, ಶಾಲೆಗೆ ಕೊಠಡಿ ಮಂಜೂರು ಮಾಡಿಸಿ, ಮೆಸ್ಕಾಂ ಸರಿಯಾಗಿ ವಿದ್ಯುತ್‌ ಪೂರೈಸುತ್ತಿಲ್ಲ. ಲೈನ್‌ ಜೋತು ಬಿದ್ದಿದ್ದರೂ, ಮನವಿ ಸಲ್ಲಿಸಿದರೂ ವರ್ಷಗಳಿಂದ ಸರಿಪಡಿಸಿಲ್ಲ. ನಿವೇಶನ ಹಕ್ಕುಪತ್ರ ಕೊಡಿ, ಎನ್‌ಆರ್‌ಇಜಿ ಮೊದಲಾದ ಕೋರಿಕೆಯ ಅರ್ಜಿಗಳು ಸಲ್ಲಿಕೆಯಾಗಿದ್ದವು.

ತಹಶೀಲ್ದಾರ್‌ ಸಿ.ಎಸ್‌.ಪೂರ್ಣಿಮಾ ಮಾತನಾಡಿದರು, ತಾಲ್ಲೂಕು ಪಂಚಾಯಿತಿ ಇಒ ಸಿ.ಆರ್‌.ಪ್ರವೀಣ್‌, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಲಿನಿ, ಉಪಾಧ್ಯಕ್ಷೆ ನಾಗರತ್ನ, ಸದಸ್ಯರಾದ ಬಸವರಾಜು, ಲೋಕೇಶ್‌, ರಮೇಶ್‌, ಶೋಭಾ, ಲಕ್ಷ್ಮಿ, ಉಮಾಬಾಯಿ, ಹನುಮಂತಪ್ಪ, ಗಿರೀಶನಾಯ್ಕ, ಮುಖಂಡ ಕುರುಬಗೆರೆ ಲೋಕೇಶ್‌, ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.