
ಕಡೂರು: ‘ದೇಶಕ್ಕಾಗಿ ಮಡಿದ ಯೋಧರು ಮತ್ತು ಯುದ್ಧದ ಸ್ಮರಣೆಗೆ ಹುತಾತ್ಮರ ನೆನಪಿನಲ್ಲೊಂದು ಸ್ಥಳವನ್ನು ನಿಗದಿಪಡಿಸಲು ಸೈನಿಕರು ಮನವಿ ಮಾಡಿದ್ದು, ಪಟ್ಟಣದಲ್ಲಿ ಎಲ್ಲಿಯಾದರೂ ಸ್ಥಳ ಒದಗಿಸಿಕೊಡುವುದಾಗಿ’ ಶಾಸಕ ಕೆ.ಎಸ್. ಆನಂದ್ ಭರವಸೆ ನೀಡಿದರು.
ಕಡೂರು ತಾಲ್ಲೂಕು ಮಾಜಿ ಸೈನಿಕರ ಸಂಘವು ಭಾನುವಾರ ಗಣಪತಿ ಪೆಂಡಾಲ್‌ನ ಆವರಣದಲ್ಲಿ ಏರ್ಪಡಿಸಿದ್ದ ‘ಮಾಜಿ ಸೈನಿಕರ ಭವನ’ ಉದ್ಘಾಟನೆ ಹಾಗೂ ‘ಸೈನಿಕರ ಕುಟುಂಬ ಸಮ್ಮಿಲನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಹಾಗೂ ಪ್ರತಿಯೋರ್ವ ನಾಗರಿಕನೂ ಸೈನಿಕರ ಆತ್ಮಸ್ಥೈರ್ಯ ಮೆಚ್ಚಬೇಕು. ತಮ್ಮ ಜೀವನದ ಯೌವನದ ದಿನಗಳನ್ನು ನಾಡಿನ ರಕ್ಷಣೆಗಾಗಿ ಹಗಲಿರುಳು ಶ್ರಮಿಸಿ, ಅನೇಕ ಯುದ್ಧಗಳಲ್ಲಿ ಭಾರತಕ್ಕೆ ಜಯವನ್ನು ತಂದುಕೊಟ್ಟಿರುವ ನಿಮ್ಮ ಸೇವೆಯನ್ನು ಪ್ರತಿಯೊಬ್ಬ ಭಾರತೀಯರು ಸ್ಮರಿಸಬೇಕು. ನಿವೃತ್ತಿಯ ನಂತರ ಮಾಜಿ ಸೈನಿಕರ ಕುಟುಂಬದ ಸಮ್ಮಿಲನ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ. ಸದ್ಯ ಪಟ್ಟಣದ ವೇದಾಪಾರ್ಕ್‌ನಲ್ಲಿರುವ 100 ಅಡಿ ರಾಷ್ಟ್ರಧ್ವಜದ ಸಮೀಪ ನಿಮ್ಮ (ವಾರ್ ಮೆಮೋರಿಯಲ್) ಕಾರ್ಯಕ್ರಮ ನಡೆಸಿಕೊಳ್ಳಿ. ನಂತರ ಪಟ್ಟಣದಲ್ಲಿ ಒಂದು ಸ್ಥಳ ನೀಡುವುದಾಗಿ ತಿಳಿಸಿದರು.
ದೇಶರಕ್ಷಣೆಯಂತಹ ಪುಣ್ಯದ ಸೇವೆ ಮಾಡಿ, ನಿವೃತ್ತಿ ಜೀವನ ನಡೆಸುತ್ತಿರುವ ಕಡೂರು ತಾಲ್ಲೂಕಿನ 79 ಕುಟುಂಬಗಳ ಸದಸ್ಯರು, ಸಂತೋಷದಿಂದ ಒಂದೆಡೆ ಕೂಡಿಕೊಂಡಿರುವುದು ಸಾರ್ಥಕ ಜೀವನಕ್ಕೆ ದಾರಿ ದೀಪವಾಗಿದೆ ಎಂದು ಅವರು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎಚ್.ಎಂ. ಶೇಖರಪ್ಪ, ‘ಶಾಸಕರ ನಿಧಿಯಿಂದ ಹಣ ನೀಡಿದ್ದರ ಫಲವಾಗಿ ಭವನ ನಿರ್ಮಣವಾಗಿದೆ. ಇದಕ್ಕೆ ಶೌಚಾಲಯ ನಿರ್ಮಿಸಲು ನಿವೇಶನದ ಅವಶ್ಯಕತೆ ಇದ್ದು ಒದಗಿಸಿ ಕೊಡಬೇಕು. ನಿವೃತ್ತ ಸೈನಿಕರ ಕುಟುಂಬದ ಸಮ್ಮಿಲನ ಕಾರ್ಯಕ್ರಮದಿಂದ ಸೈನಿಕರಲ್ಲಿ ಸಂಘಟನೆ ಬಲಗೊಳ್ಳಲು ಸಾಧ್ಯವಾಗಿದೆ. ತಾಲ್ಲೂಕಿನ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಹಾಗೂ ಸಾರ್ವಜನಿಕರು ಸೈನಿಕರಿಗೆ ಗೌರವ ನೀಡುತ್ತಿದ್ದಾರೆ’ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಸೈನಿಕ ಎಸ್.ಟಿ. ಚಂದ್ರಪ್ಪ, ಸಂಘದ ಅನೇಕ ಬೇಡಿಕೆಗಳನ್ನು ಶಾಸಕರು ಈಡೇರಿಸಿದ್ದಾರೆಂದು ಹರ್ಷಿಸಿ, ಸಂಘವು ಸಾರ್ವಜನಿಕ ಸೇವೆ ಮಾಡಿರುವ ಅಂಕಿ ಅಂಶಗಳನ್ನು ಸಭೆಗೆ ತಿಳಿಸಿದರು.
ಪಿಎಸ್‌ಐ ಸಜಿತ್‌ಕುಮಾರ್, ಸಂಘದ ನಿರ್ದೇಶಕರು, ಕೆ.ಟಿ. ಮಂಜುನಾಥ್, ಕಾರ್ಯದರ್ಶಿ ಗೋವಿಂದಪ್ಪ, ಕೆ.ಎಂ. ಲೋಕೇಶ್, ಡಿ.ಎಂ. ಸೋಮಶೇಖರಪ್ಪ, ಕೆ.ಎಚ್. ಲೋಕೇಶ್, ರೇವಣ್ಣ, ವೀರೇಶ್ ಸೇರಿದಂತೆ 70ಕ್ಕೂ ಹೆಚ್ಚಿನ ನಿವೃತ್ತ ಸೈನಿಕರು ಹಾಗೂ ಕುಟುಂಬದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಗಡಿ ರಕ್ಷಣೆಯಲ್ಲಿ ಸೈನಿಕರ ಪಾತ್ರ ಮುಖ್ಯ
‘ದೇಶದ ಆಹಾರ ಭದ್ರತೆಗೆ ರೈತ ಎಷ್ಟು ಮುಖ್ಯವೋ ಗಡಿ ರಕ್ಷಣೆಗೆ ಸೈನಿಕರ ಪಾತ್ರವೂ ಅಷ್ಟೇ ಮುಖ್ಯವಾಗಿರುತ್ತದೆ. ಅಂತಹ ವೃತ್ತಿಯಿಂದ ನಿವೃತ್ತಿಯಾಗಿ ತಾಲ್ಲೂಕಿನಲ್ಲಿ ನಿವೃತ್ತ ಸೈನಿಕರ ಸಂಘ ಸ್ಥಾಪಿಸಿ ಅದಕ್ಕೆ ನಿವೇಶನ ಕೋರಿ ಪುರಸಭೆಗೆ ಬಂದಿದ್ದೀರಿ. ಪುರಸಭೆ ಆಡಳಿತವು 3 ಕಡೆ ನಿವೇಶನ ಗುರುತಿಸಿ ನೀಡಲು ಮುಂದಾಗಿತ್ತು. ಅದರೆ ಕಾನೂನು ತೊಡಕಿನಿಂದ ನಿವೇಶನ ನೀಡಲು ಸಾಧ್ಯವಾಗದಿದ್ದಾಗ ನಿವೃತ್ತ ನೌಕರರ ಭವನದ ಮೇಲೆ ಕಟ್ಟಡ ಕಟ್ಟಿಕೊಳ್ಳಲು ಶಾಸಕರು ತಾವು ಸಹಕಾರ ನೀಡಿದ್ದರ ಫಲವಾಗಿ ಇಂದು ನಿವೃತ್ತ ಸೈನಿಕರ ಭವನ ಉದ್ಘಾಟನೆಯಾಗಿದೆ’ ಎಂದು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.