
ನರಸಿಂಹರಾಜಪುರ: ಪಟ್ಟಣದ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಮಂಗಗಳ ಹಾವಳಿ ಹೆಚ್ಚಾಗಿದ್ದು, ಜನರಲ್ಲಿ ಆತಂಕವನ್ನುಂಟು ಮಾಡಿದೆ.
ಪ್ರಮುಖವಾಗಿ ಪಟ್ಟಣದ ವ್ಯಾಪ್ತಿಯ ಬಸ್ ನಿಲ್ದಾಣದ ಸಮೀಪ, ಹಳೇಮಂಡಗದ್ದೆ ಸರ್ಕಲ್, ಹೊಸಬೀದಿ, ಡೀಟೊ ರಸ್ತೆ ಅಗ್ರಹಾರ, ಸುಂಕದಕಟ್ಟೆ, ಪುಷ್ಪ ಆಸ್ಪತ್ರೆಯ ಸಮೀಪ ಮತ್ತಿತರ ಬಡಾಣೆಗಳಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಪಟ್ಟಣಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಸಮೀಪದ ಅರಣ್ಯ ಪ್ರದೇಶದಿಂದ ಬಂದಿರುವ ಮಂಗಗಳ ಹಿಂಡು ಪಟ್ಟಣದ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿವೆ.
ಮನೆಯ ಹಿತ್ತಲಲ್ಲಿ ಬೆಳೆದಿರುವ ತರಕಾರಿ, ಪಪ್ಪಾಯಿ ಗಿಡ, ಬಾಳೆ, ಪೆರಲೆ, ಹಲಸು, ಸೀತಾಫಲ, ಸಪೋಟ ಮತ್ತಿತರ ಗಿಡಗಳ ಚಿಗುರು ಹಾಗೂ ಹಣ್ಣುಗಳನ್ನು ತಿಂದು ಹಾಕುತ್ತಿವೆ. ಕೆಲವು ಭಾಗಗಳಲ್ಲಿ ಮನೆಯ ಹೆಂಚನ್ನು ತೆಗೆದು ಮನೆಯೊಳಗೆ ನುಗ್ಗಿ ಆಹಾರ ಪದಾರ್ಥಗಳನ್ನು ತಿಂದು ದಾಂಧಲೆ ಮಾಡುತ್ತಿವೆ. ಏಕಕಾಲದಲ್ಲಿ ಹದಿನೈದರಿಂದ 20 ಮಂಗಗಳು ಹಿಂಡು ಹಿಂಡಾಗಿ ಬಂದು ಮನೆಗಳ ಮೇಲೆ, ಮರಗಳ ಮೇಲೆ ಹತ್ತಿ ದಾಂಧಲೆ ಮಾಡುತ್ತಿವೆ. ಓಡಿಸಲು ಪ್ರಯತ್ನಿಸಿದರೆ ಮೈ ಮೇಲೆ ಎಗರುತ್ತವೆ ಎಂದು ಬಡಾವಣೆ ನಿವಾಸಿಗಳು ತಿಳಿಸುತ್ತಾರೆ.
ಹೊಸಬೀದಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ 50ಕ್ಕೂ ಹೆಚ್ಚು ಮಂಗಗಳು ಬೀಡು ಬಿಟ್ಟಿದ್ದು, ಮನೆಯ ಹಿತ್ತಲಿಲ್ಲರುವ ಹಣ್ಣಿನ ಗಿಡಗಳ ಚಿಗುರು ತಿಂದು ಹಾಕುತ್ತಿವೆ. ತೆಂಗಿನಮರದಿಂದ ಎಳನೀರು ಕಿತ್ತು ಹಾಕುತ್ತಿವೆ. ಮಂಗಗಳ ಹಾವಳಿ ತಡೆಗಟ್ಟುವಂತೆ ಬಡಾವಣೆ ನಿವಾಸಿಗಳು ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೊಸಬೀದಿ ನಿವಾಸಿ ಶ್ರೀಕಾಂತ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಮಂಗಗಳ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ. ಮಂಜುನಾಥ್ ತಿಳಿಸಿದರು.
ಅರಣ್ಯ ಇಲಾಖೆಯಿಂದ ಮಂಗಗಳ ಹಾವಳಿ ತಡೆಗಟ್ಟಲು ಯಾವುದೇ ಯೋಜನೆಯಿಲ್ಲ. ಪಟ್ಟಣ ಪಂಚಾಯಿತಿಯವರು ಮಂಗಗಳನ್ನು ಹಿಡಿಯಲು ಕ್ರಮಕೈಗೊಂಡರೆ ಸಿಬ್ಬಂದಿಯ ನೆರವು ನೀಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮಲೆನಾಡಿನ ಭಾಗದ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಮಂಗನ ಕಾಯಿಲೆಯ ಪ್ರಕರಣಗಳು ಕಂಡುಬರುತ್ತಿದ್ದು, ಮಂಗಗಳ ಹಾವಳಿ ಹೆಚ್ಚಾಗಿರುವುದು ಪಟ್ಟಣದ ನಾಗರಿಕರಲ್ಲಿ ಆತಂಕವನ್ನುಂಟು ಮಾಡಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಮಂಗಗಳನ್ನು ಹಿಡಿದು ಬೇರೆಡೆಗೆ ಬಿಡುವ ಕಾರ್ಯಮಾಡಬೇಕೆಂಬಹುದು ಸಾರ್ವಜನಿಕರ ಒತ್ತಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.