
ಮೂಡಿಗೆರೆ: ಪ್ರತಿಯೊಬ್ಬರಿಗೂ ದೇವರು, ಧರ್ಮದ ಮೇಲೆ ನಂಬಿಕೆ ಇರಬೇಕು ಎಂದು ಬಾಳೆಹೊನ್ನೂರಿನ ರಂಭಾಪುರಿ ವೀರಸೋಮೇಶ್ವರ ಜಗದ್ಗುರು ಹೇಳಿದರು.
ತಾಲ್ಲೂಕಿನ ಬಿ. ಹೊಸಳ್ಳಿ ಗ್ರಾಮದಲ್ಲಿ ನಿರ್ಮಿಸಿದ ಭದ್ರಕಾಳಿ ಸಮೇತ ವೀರಭದ್ರೇಶ್ವರ ನೂತನ ದೇವಾಲಯವನ್ನು ಭಾನುವಾರ ಉದ್ಘಾಟಿಸಿ, ದೇವತಾ ವಿಗ್ರಹ ಪ್ರತಿಷ್ಠಾಪಿಸಿ, ಕಳಸಾರೋಹಣ ನೆರವೇರಿಸಿ ಜನಜಾಗೃತಿ ಧಾರ್ಮಿಕ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
'ಮಾನವ ಜೀವನ ಅಮೂಲ್ಯವಾಗಿದೆ. ಇದು ದೇವರು ಕೊಟ್ಟ ಕೊಡುಗೆಯಾಗಿದೆ. ಜೀವನ ತತ್ವ ನೀಡಿ ನೀರು, ಅನ್ನ, ಗಾಳಿ, ಬೆಳಕು ಒದಗಿಸಿದ ದೇವರಲ್ಲಿ ನಮ್ಮ ನಂಬಿಕೆ ಅಚಲವಾಗಿರಬೇಕು. ಹಗಲು ಸೂರ್ಯ, ರಾತ್ರಿ ಚಂದ್ರ ಬೆಳಕು ಕೊಡಬಲ್ಲ. ಆದರೆ ಸರ್ವಕಾಲದಲ್ಲಿ ಸರ್ವರಿಗೂ ಬೆಳಕು ಕೊಡುವುದು ಧರ್ಮವೊಂದೇ. ಧರ್ಮದಲ್ಲಿರುವ ದೂರದೃಷ್ಟಿ ವಿಶಾಲ ಮನೋಭಾವ ಜಾತಿಯಲ್ಲಿ ಕಾಣಲಾಗದು. ಜಾತಿಗಿಂತ ಧರ್ಮ ದೊಡ್ಡದು. ಪವಿತ್ರ ಧರ್ಮವನ್ನು ಪರಿಪಾಲಿಸುವುದರಿಂದ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಪ್ರಾಪ್ತವಾಗಲು ಸಾಧ್ಯವಾಗುತ್ತದೆ ಎಂದರು.
ದೇವನೊಬ್ಬ ನಾಮ ಹಲವು ಎನ್ನುವಂತೆ ಜಗತ್ತಿನ ಸೃಷ್ಟಿಗೆ ಭಗವಂತನೇ ಮೂಲ ಕಾರಣ. ಆತನಿಗೆ ಹೆಸರುಗಳು ಮಾತ್ರ ಅನಂತ. ಯಾವ ಹೆಸರಿನಿಂದ ಕರೆದರೂ ಓಗೊಡುವ ಪರಮಾತ್ಮ ಒಬ್ಬನೇ ಎಂಬ ಭಾವನೆ ಎಲ್ಲರಲ್ಲಿ ಬೆಳೆದು ಬಂದಾಗ ಸಮಾಜದಲ್ಲಿ ಸಾಮರಸ್ಯ ಸೌಹಾರ್ದ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ದಾನಿಗಳಾದ ನಟರಾಜ ಶರ್ಮ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿದರು. ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿ, ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷ ಎಚ್.ಎಂ. ಮಂಜುನಾಥ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಂಗ್ರೆಸ್ ಮುಖಂಡ ಎಂ.ಪಿ. ಕುಮಾರಸ್ವಾಮಿ, ವೀರಶೈವ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಓಂಕಾರ, ವೀರಶೈವ ರಾಜ್ಯ ಸಮಿತಿ ಸದಸ್ಯ ಪೂರ್ಣೇಶ್ ಆಲ್ದೂರು, ಗಣಪತಿ ದೇವಸ್ಥಾನದ ಅಧ್ಯಕ್ಷ ಸುರೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.