ADVERTISEMENT

ಜೇನಿನ ಸಂತತಿ ನಶಿಸಿದರೆ ಜೀವಸಂಕುಲಕ್ಕೆ ಅಪಾಯ: ಬಿ.ಆರ್. ಬಾಲಕೃಷ್ಣ

ಕೃಷಿ ವಿಜ್ಞಾನ ಕೇಂದ್ರದಲ್ಲಿ ಜೇನು ಕೃಷಿ ತರಬೇತಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 6:23 IST
Last Updated 24 ಆಗಸ್ಟ್ 2025, 6:23 IST
ಮೂಡಿಗೆರೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಜೇನುಕೃಷಿ ತರಬೇತಿಯನ್ನು ಬೆಳೆಗಾರರ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಉದ್ಘಾಟಿಸಿದರು
ಮೂಡಿಗೆರೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಜೇನುಕೃಷಿ ತರಬೇತಿಯನ್ನು ಬೆಳೆಗಾರರ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಉದ್ಘಾಟಿಸಿದರು   

ಮೂಡಿಗೆರೆ: ಜೇನಿನ ಸಂತತಿ ನಶಿಸಿದರೆ ಇಡೀ ಜೀವಸಂಕುಲಕ್ಕೆ ಅಪಾಯವಾಗುತ್ತದೆ ಎಂದು ಬೆಳೆಗಾರರ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಹೇಳಿದರು.

ತಾಲ್ಲೂಕಿನ ಹ್ಯಾಂಡ್ ಪೋಸ್ಟಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ತೋಟಗಾರಿಕಾ ಇಲಾಖೆಯಿಂದ ಏರ್ಪಡಿಸಿದ್ದ ವೈಜ್ಞಾನಿಕ ಜೇನು ಕೃಷಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

'ಸರ್ಕಾರವು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಅಡಿಯಲ್ಲಿ ಹಲವಾರು ಸವಲತ್ತುಗಳನ್ನು ನೀಡುತ್ತಿದೆ. ಇವುಗಳನ್ನು ರೈತರಿಗೆ ಸಮರ್ಪಕವಾಗಿ ತಲುಪಿಸುವ ಕೆಲಸವಾಗಬೇಕು. ಜೇನು ಕೃಷಿಯ ಬಗ್ಗೆ ಗ್ರಾಮೀಣ ಪ್ರದೇಶದ ರೈತರಲ್ಲಿ ಅರಿವು ಮೂಡಿಸಲು ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಜೇನು ಸಾಕಾಣಿಕೆ ಮಾಡಲು ಆಸಕ್ತ ರೈತರಿಗೆ ಸರ್ಕಾರವು ಸಹಾಯಧನದಲ್ಲಿ ಜೇನುಪೆಟ್ಟಿಗೆಯನ್ನು ಒದಗಿಸುತ್ತಿದೆ. ಇದನ್ನು ರೈತರು ಬಳಸಿಕೊಳ್ಳಬೇಕು' ಎಂದು ಸಲಹೆ ನೀಡಿದರು.

ADVERTISEMENT

ವೈಜ್ಞಾನಿಕ ಜೇನು ಕೃಷಿ ಬಗ್ಗೆ ರೈತರಿಗೆ ತರಬೇತಿ ನೀಡಿದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಸುಚಿತ್ರ ಕುಮಾರಿ, 'ಜೇನು ಕೃಷಿ ಒಂದು ಲಾಭದಾಯಕ ಉದ್ಯಮವಾಗಿದೆ. ಜೇನಿಗೆ ಬಹಳಷ್ಟು ಬೇಡಿಕೆ ಇದೆ. ಜೇನು ಕೃಷಿಯ ಬಗ್ಗೆ ಅರಿವು ಪಡೆದು ವೈಜ್ಞಾನಿಕವಾಗಿ ಸಾಕಾಣಿಕೆ ಮಾಡಿದರೆ ಅದರಿಂದ ಹೆಚ್ಚಿನ ಇಳುವರಿ ಹಾಗೂ ಲಾಭ ಪಡೆಯಬಹುದು. ಜೇನು ಒಂದು ಸೂಕ್ಷ್ಮವಾದ ಕೀಟವಾಗಿದ್ದು ಇದರ ನಿರ್ವಹಣೆ ಮಾಡುವಾಗ ಅತಿ ಜಾಗರೂಕತೆ ಅಗತ್ಯವಾಗಿದೆ. ಇದರ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ತೋಟಗಾರಿಕೆ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳು ಮಾಡುತ್ತಿವೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು' ಎಂದರು.

ಮೂಡಿಗೆರೆ ತೋಟಗಾರಿಕೆ ಇಲಾಖೆ ಅಧಿಕಾರಿ ಶ್ವೇತಾ ಮಾತನಾಡಿ, 'ಪರಾಗಸ್ಪರ್ಶ ಕ್ರಿಯೆಯಲ್ಲಿ ಜೇನು ಹುಳುಗಳ ಪಾತ್ರ ಬಹುಮುಖ್ಯವಾಗಿದೆ. ಕಾಫಿ ಬೆಳೆಯುವ ಪ್ರದೇಶದಲ್ಲಿ ಕಾಫಿ ಹೆಚ್ಚಿನ ಇಳುವರಿ ಪಡೆಯಲು ಜೇನು ಹುಳುಗಳು ಸಹಾಯಕವಾಗಿವೆ. ತೋಟಗಾರಿಕಾ ಇಲಾಖೆಯಿಂದ ಜೇನು ಕೃಷಿಗೆ ಪ್ರೋತ್ಸಾಹ, ತರಬೇತಿ ನೀಡಲಾಗುತ್ತಿದೆ. ರೈತರು ಜೇನು ಕೃಷಿಯ ಬಗ್ಗೆ ಆಸಕ್ತಿ ವಹಿಸಬೇಕು' ಎಂದರು.

ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಯತೀಶ್ ಬೆಟ್ಟಗೆರೆ, ನಿರ್ದೇಶಕರಾದ ಪಿ.ಕೆ.ನಾಗೇಶ್, ಸತೀಶ್ ಕಡುವಳ್ಳಿ, ಪೂರ್ಣೇಶ್ ಜಿ.ಹೊಸಳ್ಳಿ, ಜಗನ್ನಾಥ ಗೌಡ ಯು.ಹೊಸಳ್ಳಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಕೃಷ್ಣಮೂರ್ತಿ, ಕಾಫಿ ಮಂಡಳಿ ಮಾಜಿ ಸದಸ್ಯ ಬಾಲರಾಜು, ತೋಟಗಾರಿಕೆ ಇಲಾಖೆ ಅಧಿಕಾರಿ ರಾಮಯ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.