ADVERTISEMENT

ಮೊರಾರ್ಜಿ ಶಾಲೆ ಬಾಲಕಿ ಸಾವು ಪ್ರಕರಣ: ಪ್ರಗತಿಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಮೊರಾರ್ಜಿ ಶಾಲೆ ಬಾಲಕಿ ಸಾವು ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 4:20 IST
Last Updated 8 ಜುಲೈ 2025, 4:20 IST
ಕೊಪ್ಪದಲ್ಲಿ ಸೋಮವಾರ ಪ್ರಗತಿಪರ ಸಂಘಟನೆಗಳು ನಡೆಸಿದ ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಮನವಿ ಸಲ್ಲಿಸಲಾಯಿತು
ಕೊಪ್ಪದಲ್ಲಿ ಸೋಮವಾರ ಪ್ರಗತಿಪರ ಸಂಘಟನೆಗಳು ನಡೆಸಿದ ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಮನವಿ ಸಲ್ಲಿಸಲಾಯಿತು   

ಕೊಪ್ಪ: ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ಮೃತಪಟ್ಟ ಬಾಲಕಿ ಸಾವಿನ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.

ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಸಾವಿನ ಬಗ್ಗೆ ಸತ್ಯಾಂಶ ತಿಳಿಯಬೇಕು. ವಸತಿ ಶಾಲೆಯ ಪ್ರಾಂಶುಪಾಲರು, ವಾರ್ಡನ್‌ನನ್ನು ಅಮಾನತಿನಲ್ಲಿಟ್ಟು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಆಡಳಿತ ವ್ಯವಸ್ಥೆ, ಸ್ಥಳೀಯ ಶಾಸಕರು, ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ವೀರಭದ್ರ ಸ್ವಾಮಿ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಬಸ್ ನಿಲ್ದಾಣದ ಆವರಣದಲ್ಲಿ ಸಮಾವೇಶಗೊಂಡಿತು.

ಪ್ರತಿಭಟನಾ ಸಭೆಯಲ್ಲಿ ಜನಶಕ್ತಿ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್ ಮಾತನಾಡಿ, ‘ಮಲೆನಾಡಿನಲ್ಲಿ ಶಿಕ್ಷಣ ಪಡೆಯುವುದು ಕಷ್ಟವಾಗಿದೆ. ಇಂತಹ ವೇಳೆಯಲ್ಲಿ ವಿದ್ಯಾರ್ಥಿನಿಯರು ಇಂದು ಶಾಲೆ, ವಸತಿ ಶಾಲೆಗಳಿಗೆ ಬಂದು ಶಿಕ್ಷಣ ಪಡೆಯುತ್ತಿದ್ದಾರೆ. ವಸತಿ ಶಾಲೆಯಲ್ಲಿ ಪದೇ ಪದೇ ಸಾವುಗಳು ಹಲವು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಶಾಸಕರು ಅಲ್ಲಿನ ಪ್ರಾಂಶುಪಾಲರನ್ನು ವಜಾ ಮಾಡಿ ತನಿಖೆ ನಡೆಸುವಂತೆ ನೋಡಿಕೊಳ್ಳಬೇಕು' ಎಂದು ಆಗ್ರಹಿಸಿದರು.

ADVERTISEMENT

ಡಿಎಸ್‌ಎಸ್ ಮುಖಂಡ ರಾಜಶಂಕರ್ ಮಾತನಾಡಿ, 'ವಸತಿ ಶಾಲೆ ಅವ್ಯವಸ್ಥೆಯ ಆಗರವಾಗಿದೆ. ಶುಚಿತ್ವ ಇಲ್ಲ. ವಿದ್ಯಾರ್ಥಿಗಳ ಪಾಲಕರನ್ನು ವಸತಿ ಗೃಹದ ಒಳಗಡೆ ಇಲ್ಲಿನ ಶಿಕ್ಷಕರು ಬಿಡುವುದಿಲ್ಲ. ಹಾಸ್ಟೆಲ್‌ನಲ್ಲಿ ಭಯದ ವಾತಾವರಣವಿದೆ. ಪ್ರಾಂಶುಪಾಲರ ಈ ಘಟನೆಯ ಹೊಣೆ ಹೊರಬೇಕು' ಎಂದರು.

ಮೃತ ಬಾಲಕಿ ದೊಡ್ಡಮ್ಮ ರಾಜೀವಿ ಮಾತನಾಡಿ, 'ವಿದ್ಯಾರ್ಥಿನಿ ಸಾವಿನ ಬಗ್ಗೆ ಮೂಲ ಕಾರಣವನ್ನು ತನಿಖೆಯ ಮೂಲಕ ಬಹಿರಂಗ ಪಡಿಸಿಬೇಕು. ವಿದ್ಯಾರ್ಥಿನಿ ಕಿರುಕುಳಕ್ಕೆ ಒಳಗಾಗಿ ಸಾವನ್ನಪ್ಪಿರುವುದೇ ಅಥವಾ ವೈಯುಕ್ತಿಕ ಕಾರಣದಿಂದ ಆಗಿರುವುದೇ ಎಂದು ತಿಳಿಸಬೇಕು. ವಿದ್ಯಾರ್ಥಿನಿ ಮೃತ ಹೊಂದಿದ ದಿನ ಆಕೆಯ ತಾಯಿ 40 ಬಾರಿ ವಾರ್ಡನ್‌ಗೆ ಕರೆ ಮಾಡಿದ್ದಾರೆ, ಕರೆ ಸ್ವೀಕರಿಸಿಲ್ಲ ಯಾಕೆ? ಪ್ರಾಂಶುಪಾಲರು ಬೇಜಾವಾಬ್ದಾರಿ ಈ ಸಾವಿಗೆ ಕಾರಣವಾಗಿದೆ. ಅವರನ್ನು ಕೆಲಸದಿಂದ ವಜಾ ಮಾಡಬೇಕು. ಪ್ರಾಂಶುಪಾಲರು, ವಾರ್ಡನ್ ಅವರನ್ನು ಕೆಲಸದಿಂದ ತೆಗೆಯಬೇಕು. ಡೆತ್‌ನೋಟ್ ಇದೆ ಅಂತಾ ಹೇಳುತ್ತಿದ್ದಾರೆ. ಆ ಡೆತ್‌ನೋಟ್ ನಮಗೆ ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದರು.

ತಾಲ್ಲೂಕು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಕೆ.ಎಸ್.ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, 'ಪ್ರತಿಭಟನಾ ಸಭೆಯಲ್ಲಿ ಶಾಸಕರು ಕೂತು ನಮ್ಮ ಸಮಸ್ಯೆ, ದೂರನ್ನು ಆಲಿಸಬೇಕಿತ್ತು. ಅಧಿಕಾರಿಗಳನ್ನು ಕರೆದು ಕ್ರಮ ತೆಗೆದುಕೊಳ್ಳಬೇಕಿತ್ತು. ಯಾವ ಪಕ್ಷ ಬೇಕಾದರು ಅಧಿಕಾರಕ್ಕೆ ಬರಬಹುದು. ಹೆಣದ ಮೇಲೆ ರಾಜಕಾರಣ ಬೇಡ' ಎಂದರು.

ಬಿಎಸ್‌ಪಿ ಮುಖಂಡ ಆನಂದ್, ಕರವೇ ನಾಯಕಿ ಪ್ರೇಮಾ ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ಸುದೀರ್ ಕುಮಾರ್ ಮುರೊಳ್ಳಿ, ಡಿಎಸ್ಎಸ್ ಮುಖಂಡ ರವೀಂದ್ರ ಹೊಸತೋಟ, ಕುಂಚೂರು ವಾಸಪ್ಪ, ಬಜರಂಗದಳ ಮಾಜಿ ಸಂಚಾಲಕ ರಾಕೇಶ್ ಹಿರೇಕೊಡಿಗೆ ಮಾತನಾಡಿದರು.

ಉನ್ನತ ಮಟ್ಟದ ತನಿಖೆ ನಡೆಸಿ: ಎಲ್ಲಾ ಸಿಬ್ಬಂದಿ, ಪ್ರಿನ್ಸಿಪಾಲರ ಅಮಾನತು ಮಾಡಬೇಕು. ಹಾಸ್ಟೆಲ್‌ನಲ್ಲಿ ಸಿಸಿಟಿವಿ ಅಳವಡಿಸಬೇಕು. ಶೌಚಾಲಯ ದುರಸ್ತಿಪಡಿಸಬೇಕು ಎಂದು ಪ್ರಗತಿಪರ ಸಂಘಟನೆಗಳು, ಬಂಟರ ಯಾನೆ ನಾಡವರ ಸಂಘ, ವಿದ್ಯಾರ್ಥಿ ಸಂಘದಿಂದ ಪ್ರತ್ಯೇಕವಾಗಿ ಮನವಿ ಪತ್ರವನ್ನು ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ನೀಡಲಾಯಿತು.

ತಪ್ಪಿತಸ್ಥರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಆರೋಪ ಸಾಬೀತಾದರೆ ನಿರ್ದಾ ಕ್ಷಿಣ್ಯ ಕ್ರಮ ಜರುಗಿಸಿ ಜೈಲಿಗೆ ಕಳುಹಿಸಲಾಗುವುದು
ಟಿ.ಡಿ.ರಾಜೇಗೌಡ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.