ADVERTISEMENT

ಕೊಟ್ಟಿಗೆಹಾರ | ಬಿಸಿಲಿನ ಝಳ: ತಂಪು ಪಾನೀಯಗಳಿಗೆ ಬೇಡಿಕೆ

ನದಿ, ಕೆರೆಯಲ್ಲಿ ನೀರಿನ ಹರಿವು ಇಳಿಮುಖ

ಅನಿಲ್ ಮೊಂತೆರೊ
Published 12 ಮಾರ್ಚ್ 2024, 7:04 IST
Last Updated 12 ಮಾರ್ಚ್ 2024, 7:04 IST
ಬಣಕಲ್‌ನ ಎಳನೀರು ಅಂಗಡಿಯಲ್ಲಿ ಗ್ರಾಹಕರೊಬ್ಬರು ಬಿಸಿಲಿನ ಧಗೆಗೆ ಎಳನೀರು ಸೇವಿಸುತ್ತಿರುವುದು
ಬಣಕಲ್‌ನ ಎಳನೀರು ಅಂಗಡಿಯಲ್ಲಿ ಗ್ರಾಹಕರೊಬ್ಬರು ಬಿಸಿಲಿನ ಧಗೆಗೆ ಎಳನೀರು ಸೇವಿಸುತ್ತಿರುವುದು   

ಕೊಟ್ಟಿಗೆಹಾರ: ಬಿಸಿಲ ತಾಪದಿಂದ ನೆತ್ತಿ ಸುಡುತ್ತಿದ್ದು, ಹಸಿರನಾಡು ಬಿಸಿಲ ನಾಡಾಗುತ್ತಿದೆ. ಸೆಕೆಯ ಧಗೆಗೆ ಜನರು ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ.

ಫೆಬ್ರುವರಿಗೆ ಹೋಲಿಸಿದರೆ ಮಾರ್ಚ್‌ನಲ್ಲಿ ತಾಪಮಾನ ಹೆಚ್ಚಿದೆ. ಕಾಫಿ ತೋಟಗಳಲ್ಲಿ ಮರದ ನೆರಳಿನಲ್ಲಿ ಕುಳಿತರೂ ಧಗೆ ಕಡಿಮೆಯಾದಂತೆ ಅನ್ನಿಸುವುದಿಲ್ಲ. ತಾಪಮಾನ ಗರಿಷ್ಠ 32 ಡಿಗ್ರಿ ದಾಟುತ್ತಿದೆ. ಮಲೆನಾಡಿನಲ್ಲಿ ಹೇಮಾವತಿ ನದಿಯ ಹರಿವು ಇಳಿಮುಖವಾಗಿದೆ. ಕೆರೆಗಳಲ್ಲೂ ನೀರಿನ ಮಟ್ಟ ಇಳಿಕೆಯಾಗಿದೆ. ಮಲೆನಾಡಿನ ವಾತಾವರಣವು ಬಯಲುಸೀಮೆಯ ಅನುಭವ ನೀಡುತ್ತಿದೆ. ಸೆಕೆಯಿಂದಾಗಿ ಜನರು ಕಂಗಾಲಾಗಿದ್ದಾರೆ.

ಮಜ್ಜಿಗೆ, ಜ್ಯೂಸ್, ಕಲ್ಲಂಗಡಿ ಹಣ್ಣು, ಐಸ್ ಕ್ರೀಂ, ದ್ರಾಕ್ಷಿ ರಸ, ಕಬ್ಬಿನ ಹಾಲು, ಪುನರ್ಪುಳಿ ಪಾನೀಯ, ಎಳನೀರು, ಕಂಚಿಹುಳಿ, ನಿಂಬೆಹಣ್ಣು ಜ್ಯೂಸ್‌ಗೆ ಬೇಡಿಕೆ ಹೆಚ್ಚುತ್ತಿದೆ. ತಾಪ ತಡೆಯಲಾರದೆ ಜನರು ತಂಪು ಪಾನೀಯಗಳ ಅಂಗಡಿಗೆ ಹೋಗುತ್ತಾರೆ. ಬಣಕಲ್, ಕೊಟ್ಟಿಗೆಹಾರ ಸುತ್ತಮುತ್ತ ಕೆಲವು ಅಂಗಡಿಗಳಲ್ಲಿ ತಂಪು ಪಾನೀಯದ ವ್ಯಾಪಾರ ಜೋರಾಗಿ ನಡೆಯುತ್ತಿದೆ. ದೂರದ ಊರಿನಿಂದ ಬರುವವರು ಬಾಟಲಿ ನೀರು ಹೆಚ್ಚು ಖರೀದಿ ಮಾಡುತ್ತಾರೆ.

ADVERTISEMENT

ಈ ಬಾರಿ ಶಾಲೆಯ ಮಕ್ಕಳು ಕೂಡ ಸೆಕೆಯಿಂದ ಹೈರಾಣಾಗುತ್ತಿದ್ದಾರೆ. ಬೇಸಿಗೆ ರಜೆ ಬೇಗ ಸಿಕ್ಕರೆ ಸಾಕು ಎಂಬಂತಾಗಿದೆ ಮಕ್ಕಳ ಸ್ಥಿತಿ. ಬೇಸಿಗೆ ಈ ಬಾರಿ ಮಲೆನಾಡಿಗೆ ಸುಡುವ ಬೆಂಕಿಯಂತಾಗಿದೆ ಎನ್ನುತ್ತಾರೆ ರಿವರ್ ವ್ಯೂವ್ ಶಾಲೆಯ ಅಧ್ಯಕ್ಷ ಮಹಮ್ಮದ್ ಇಮ್ರಾನ್.

ಎಳನೀರು ಹಣ್ಣಿನ ಜ್ಯೂಸ್‌ಗಳಿಗೆ ಬೇಡಿಕೆಯಿದೆ. ಬಿಸಿಲಿನ ತಾಪಕ್ಕೆ ಜನರು ತಂಪು ಪಾನೀಯವನ್ನೇ ಹೆಚ್ಚು ಕೇಳುತ್ತಾರೆ.
-ಹಮೀದ್, ವರ್ತಕ ಬಣಕಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.