ADVERTISEMENT

ಎಲ್ಲಾ ವರ್ಗಗಳಿಗೂ ಪ್ಯಾಕೇಜ್ ಘೋಷಿಸಿ: ಮಾಜಿ ಸಚಿವೆ ಮೋಟಮ್ಮ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಮೇ 2020, 10:12 IST
Last Updated 8 ಮೇ 2020, 10:12 IST
ಮೋಟಮ್ಮ
ಮೋಟಮ್ಮ   

ಮೂಡಿಗೆರೆ: ಮುಖ್ಯಮಂತ್ರಿ ಘೋಷಿಸಿರುವ ಶ್ರಮಿಕರ ಪ್ಯಾಕೇಜ್‌ನಲ್ಲಿ ಹಲವು ವರ್ಗಗಳನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದು ಮಾಜಿ ಸಚಿವೆ ಮೋಟಮ್ಮ ಆಕ್ಷೇಪಿಸಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲಾಕ್‌ಡೌನ್ ಜಾರಿಯಾದಗಿನಿಂದ ಅರ್ಚಕರು, ಚಮ್ಮಾರರು, ಅಕ್ಕಸಾಲಿಗರು, ಬಡಗಿಗಳು, ಶಿಲ್ಪಿಗಳು, ಕಮ್ಮಾರರು, ಟೈಲರ್‌ಗಳು ಸೇರಿದಂತೆ ವಿವಿಧ ವರ್ಗದವರು ಮನೆಯಿಂದ ಹೊರಗೆ ಬಂದಿಲ್ಲ. ಆದರೆ, ಮುಖ್ಯಮಂತ್ರಿಯು ಘೋಷಿಸಿರುವ ಶ್ರಮಿಕರ ಪ್ಯಾಕೇಜಿನಲ್ಲಿ ಈ ಎಲ್ಲಾ ವರ್ಗಗಳನ್ನು ಕೈಬಿಟ್ಟಿರುವುದು ಸರಿಯಲ್ಲ. ಈ ಪ್ಯಾಕೇಜ್ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬ ನೀತಿಯನ್ನು ಅನುಸರಿಸಿದಂತಿದೆ’ ಎಂದು ಟೀಕಿಸಿದರು.

‘ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಲಾಕ್‍ಡೌನ್ ಪ್ರಾರಂಭದಲ್ಲೇ ₹ 20 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದ್ದರು. ಕೇರಳದಲ್ಲಿ 17 ವಿಧದ ದಿನಸಿ ವಸ್ತುಗಳನ್ನು 2 ಬಾರಿ ಪ್ರತಿ ಮನೆಮನೆಗೆ ಉಚಿತವಾಗಿ ನೀಡಿದ್ದಾರೆ. ಶ್ರಮಿಕ ವರ್ಗಕ್ಕೆ ದೊಡ್ಡ ಮಟ್ಟದ ಮೊತ್ತವನ್ನೇ ನೀಡಿದ್ದಾರೆ. ಹಾಗೆಯೇ ನಮ್ಮ ರಾಜ್ಯದಲ್ಲೂ ನೆರವು ನೀಡಬೇಕಿತ್ತು. ಕೊಟ್ಟಿರುವ ಅತ್ಯಲ್ಪ ಮೊತ್ತದಲ್ಲಿಯೇ ಕೆಲವು ವರ್ಗಗಳನ್ನು ಕೈ ಬಿಟ್ಟಿರುವುದರಿಂದ ಆ ವರ್ಗಗಳಿಗೆ ಸರ್ಕಾರವೇ ಅನ್ಯಾಯವೆಸಗಿದಂತಾಗುತ್ತದೆ. ಕೂಡಲೇ ಸರ್ಕಾರವು ತಾನು ಘೋಷಿಸಿರುವ ಪ್ಯಾಕೇಜಿನಲ್ಲಿ ಅರ್ಚಕರು, ಚಮ್ಮಾರರು, ಅಕ್ಕಸಾಲಿಗರು, ಬಡಗಿಗಳು, ಶಿಲ್ಪಿಗಳು, ಕಮ್ಮಾರರು, ಟೈಲರ್ ಗಳು ಸೇರಿದಂತೆ ದುಡಿಯುವ ಎಲ್ಲಾ ವರ್ಗಗಳಿಗೂ ಆರ್ಥಿಕ ನೆರವು ಘೋಷಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕಳೆದ ಬಾರಿಯ ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶದಲ್ಲಿ ಮತ್ತೊಮ್ಮೆ ಮಳೆಗಾಲ ಪ್ರಾರಂಭಗೊಳ್ಳುತ್ತಿದ್ದರೂ ಹಾನಿಯಾದ ಕಾಮಗಾರಿಗಳನ್ನು ಆರಂಭಿಸಿಲ್ಲ. ಮಳೆಹಾನಿ ಪ್ರದೇಶಕ್ಕೆ ಸರ್ಕಾರವು ಸಾಕಷ್ಟು ಅನುದಾನ ನೀಡಿಲ್ಲ. ಕೆಲ ಕಾಮಗಾರಿಗಳ ಅನುದಾನವನ್ನು ವಾಪಸ್‌ ಪಡೆಯಲಾಗಿದೆ ಎಂಬ ಮಾಹಿತಿಯಿದೆ. ಹೀಗಾದರೆ ನೆರೆ ಸಂತ್ರಸ್ತರ ಅಭಿವೃದ್ಧಿಯನ್ನು ಸರ್ಕಾರ ಯಾವ ರೀತಿ ನಿಭಾಯಿಸಲು ಸಾಧ್ಯವಿದೆ? ವಾಪಸ್‌ ಪಡೆದ ಅನುದಾನವನ್ನು ಮರಳಿ ಬಿಡುಗಡೆ ಮಾಡಬೇಕು. ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.