
ಮೂಡಿಗೆರೆ ತಾಲ್ಲೂಕಿನ ಬಾಳೂರು ಸಮೀಪದ ಸಂಪ್ಯ ಎಂಬಲ್ಲಿ ಹೊರನಾಡು ರಸ್ತೆಯ ಹೆದ್ದಾರಿಯಲ್ಲಿ ಬಾರಿ ಗಾತ್ರದ ಗುಂಡಿಯಾಗಿರುವುದು
ಮೂಡಿಗೆರೆ: ತಾಲ್ಲೂಕಿನ ಬಾಳೂರಿನಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಗುಂಡಿಯಾಗಿ ವಾಹನ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ ಎಂದು ಕೆಳಗೂರಿನ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಪದಾಧಿಕಾರಿಗಳು ದೂರಿದ್ದಾರೆ.
ಸಂಸ್ಥೆಯ ಶಿವರಾಜ್ ಹೇಳಿಕೆ ನೀಡಿ, 'ಬಾಳೂರಿನಿಂದ ಹೊರನಾಡು ಗ್ರಾಮದವರೆಗೆ 50 ಕಿ.ಮೀ ರಸ್ತೆ ಸಂಪೂರ್ಣ ಗುಂಡಿಯಾಗಿದೆ. ವಾಹನಗಳು ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಸಂಪ್ಯ ಗ್ರಾಮದಲ್ಲಿ ಈ ರಸ್ತೆಯ ಮಧ್ಯಭಾಗದಲ್ಲಿ ಬೃಹತ್ ಗಾತ್ರದ ಹೊಂಡವಾಗಿ ಹಲವಾರು ವಾಹನಗಳು ಗುಂಡಿಯೊಳಗೆ ಬಿದ್ದು ವಾಹನಗಳು ಜಖಂಗೊಂಡಿವೆ. ಬೈಕ್ ಸವಾರರು ಗುಂಡಿಗೆ ಸಿಲುಕಿ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ರಸ್ತೆ ವಿಪರೀತ ಗುಂಡಿಯಾಗಿರುವ ಕಾರಣ ಕೆಎಸ್ಆರ್ ಟಿಸಿ ಹಾಗೂ ಖಾಸಗಿ ಬಸ್ ಗಳು ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿಲ್ಲ. ಇದರಿಂದ ರೋಗಿಗಳು, ವಿದ್ಯಾರ್ಥಿಗಳು ಪರದಾಡಬೇಕಾಗಿದೆ. ಕಳಸ ಹಾಗೂ ಮೂಡಿಗೆರೆ ತಾಲ್ಲೂಕು ಕೇಂದ್ರಕ್ಕೆ ಈ ಭಾಗದ ಸಾರ್ವಜನಿಕರು ಇದೇ ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸಬೇಕಾಗಿದೆ. ಖಾಸಗಿ ವಾಹನಗಳು ಜಖಂಗೊಳ್ಳುವ ಭಯದಲ್ಲಿ ಬಾಡಿಗೆ ವಾಹನಗಳ ಮಾಲೀಕರು ಸಂಚರಿಸಲು ಹಿಂದೇಟು ಹಾಕುತ್ತಿದ್ದು, ಸ್ಥಳೀಯರು ಸಮಸ್ಯೆ ಎದುರಿಸುವಂತಾಗಿದೆ' ಎಂದು ದೂರಿದ್ದಾರೆ.
‘ಕಳಸ, ಹೊರನಾಡು, ಕುದುರೆಮುಖ, ಉಡುಪಿ ಸೇರಿದಂತೆ ಬಹುತೇಕ ಕಡೆ ತೆರಳುವ ಪ್ರವಾಸಿಗರು ಇದೆ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯದ ಪ್ರವಾಸಿ ವಾಹನಗಳಿಗೆ ರಸ್ತೆ ಹದಗೆಟ್ಟಿರುವ ಬಗ್ಗೆ ಮಾಹಿತಿಯಿಲ್ಲದೆ ಏಕಾಏಕಿ ಮುನ್ನುಗ್ಗಿ ವಾಹನಗಳು ಗುಂಡಿಗೆ ಬಿದ್ದು ಜಖಂಗೊಳ್ಳುತ್ತಿದೆ. ಅಲ್ಲದೇ ಈ ರಸ್ತೆಯಲ್ಲಿ ನಿತ್ಯವೂ ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ಈ ರಸ್ತೆಯನ್ನು ಅಭಿವೃದ್ಧಿಗೊಳಿಸುವಂತೆ ಶಾಸಕಿ ನಯನಾ ಮೋಟಮ್ಮ ಅವರಿಗೆ ಮನವಿ ಸಲ್ಲಿಸಲಾಗಿದೆ. ಶಾಸಕರು ಮುತುವರ್ಜಿ ವಹಿಸಿ ಕೂಡಲೇ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.