ADVERTISEMENT

ಮೂಡಿಗೆರೆ: ಕಾಡಿನಂತಾದ ಸರ್ಕಾರಿ ಪಿಯು ಕಾಲೇಜು ಆವರಣ!

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 0:07 IST
Last Updated 20 ಜೂನ್ 2025, 0:07 IST
ಮೂಡಿಗೆರೆ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿನ ಕಾಂಪೌಂಡ್‌ಗೆ ಹಬ್ಬಿರುವ ಗಿಡಗಂಟಿ
ಮೂಡಿಗೆರೆ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿನ ಕಾಂಪೌಂಡ್‌ಗೆ ಹಬ್ಬಿರುವ ಗಿಡಗಂಟಿ   

ಮೂಡಿಗೆರೆ: ಪಟ್ಟಣದ ವಿದ್ಯಾನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗಿಡಗಂಟಿಗಳು ಬೆಳೆದಿದ್ದು, ವಿದ್ಯಾರ್ಥಿಗಳು ಕೊಠಡಿಯಿಂದ ಆವರಣಕ್ಕೆ ಬರಲು ಹೆದರುವಂತಹ ಸ್ಥಿತಿ ನಿರ್ಮಾಣವಾಗಿದೆ.

ಕಾಲೇಜಿನ ಆವಣದ ಸುತ್ತಲೂ ದಟ್ಟವಾದ ಪೊದೆ ಬೆಳೆದಿದ್ದು, ಕಟ್ಟಡದ ಹಿಂಭಾಗದ ಕಾಂಪೌಂಡಿನ ಮೇಲ್ಭಾಗದವರೆಗೂ ಕಾಡುಬಳ್ಳಿಗಳು ಮತ್ತು ಗಿಡಗಂಟಿಗಳು ಬೆಳೆದು ಕಾಂಪೌಂಡ್ ಮೇಲ್ಬಾಗವನ್ನು ಸುತ್ತುವರಿದಿದೆ. ಇದರಿಂದ ಕಾಂಪೌಂಡ್ ಅಲ್ಲಲ್ಲಿ ಕುಸಿದಿದ್ದು, ನಾಲ್ಕೈದು ವರ್ಷದಿಂದ ಇದೆ ರೀತಿ ಕಾಡು ಬೆಳೆದಿದ್ದರೂ ಕೂಡ ಅದನ್ನು ತೆರೆವುಗೊಳಿಸಲು ಕಾಲೇಜು ಆಡಳಿತ ಮಂಡಳಿ ಮುಂದಾಗಿಲ್ಲʼ ಎಂಬುದು ವಿದ್ಯಾರ್ಥಿಗಳ ಆರೋಪವಾಗಿದೆ.

ಕಾಲೇಜಿನ ಹಿಂಭಾಗದಲ್ಲಿ ಬಾಪುನಗರ ಜನವಸತಿ ಪ್ರದೇಶವಿದ್ದು, ಆ ಗ್ರಾಮಕ್ಕೆ ತೆರಳುವ ರಸ್ತೆಗೆ ಹೊಂದಿಕೊಂಡಂತೆ ಕಾಲೇಜಿನ ಕಾಂಪೌಂಡ್ ನಿರ್ಮಿಸಲಾಗಿದೆ. ಕಾಂಪೌಂಡ್‌ನ ಒಳಗೆ ಹಾಗೂ ಹೊರ ಭಾಗದಲ್ಲಿ ಕಾಡು ಬೆಳೆದಿರುವುದರಿಂದ ಸಾರ್ವಜನಿಕರು ರಸ್ತೆಯಲ್ಲಿ ತಿರುಗಾಡಲು ಭಯ ಪಡುವಂತಾಗಿದೆ. ಕಾಂಪೌಂಡಿನ ಹೊರ ಭಾಗದಲ್ಲಿ ಅಂಗನವಾಡಿ ಕಟ್ಟಡವಿದೆ. ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಪೋಷಕರು ಭಯಪಡುತ್ತಿದ್ದು, ಕಳೆದ 6 ತಿಂಗಳ ಹಿಂದೆ ಕಾಡಾನೆಯೊಂದು ಕಾಲೇಜಿನ ಮುಂಭಾಗದ ಗೇಟು ಮುರಿದು ಆವರಣಕ್ಕೆ ಪ್ರವೇಶಿಸಿತ್ತು. ಕಾಲೇಜು ಕಟ್ಟಡದ ಹಿಂಭಾಗದಲ್ಲಿ ಬೆಳೆದಿರುವ ಗಿಡ ಗಂಟಿಗಳ ಮಧ್ಯೆ ನುಸುಳಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ, ಅಲ್ಲಿಂದ ಆನೆಯನ್ನು ಕಾಡಿನತ್ತ ಓಡಿಸಿದ್ದರು. ಕಾಡಾನೆಗಳು ಪ್ರವೇಶಿಸುವಂತ ರೀತಿಯಲ್ಲಿ ಕಾಡು ಬೆಳೆದಿದ್ದರೂ ಅದನ್ನು ಕತ್ತರಿಸಿ ತೆರವುಗೊಳಿಸಲು ಕಾಲೇಜಿನವರು ಮುಂದಾಗುತ್ತಿಲ್ಲ. ಕಾಲೇಜು ಆವರಣದ ಕಾಡಿನಿಂದಾಗಿ ಹಾವು ಸೇರಿದಂತೆ ವಿಷಜಂತುಗಳು ಗ್ರಾಮಕ್ಕೆ ಬರುತ್ತಿವೆʼ ಎಂದು ಗ್ರಾಮಸ್ಥರು ದೂರಿದ್ದಾರೆ.

ADVERTISEMENT

ʼಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡದ ಹಿಂಭಾಗದಲ್ಲಿ ಸುತ್ತಲೂ ಕಾಂಪೌಂಡ್ ಕಾಣದಷ್ಟು ದೊಡ್ಡ ಪ್ರಮಾಣದಲ್ಲಿ ಕಾಡು ಬೆಳೆದಿದೆ. ಕಾಡಿನಿಂದಾಗಿ ಹಾವು, ಹೆಗ್ಗಣಗಳು ಹಗಲಿನಲ್ಲಿಯೇ ತಿರುಗಾಡುತ್ತಿವೆ. ಕಾಲೇಜಿನ ಹಿಂಭಾಗದಲ್ಲಿ ಅಂಗನವಾಡಿ ಕಟ್ಟಡವಿದ್ದು, ಕಾಲೇಜು ಆವರಣದ ಅಶುಚಿತ್ವದಿಂದ ಅಂಗನವಾಡಿಯ ಮಕ್ಕಳು ಕೂಡ ಭಯ ಪಡುವಂತಾಗಿದೆ. ಕಾಲೇಜಿನ ಆಡಳಿತ ಮಂಡಳಿಯವರು ಕೂಡಲೇ ಗಿಡಗಂಟಿಗಳನ್ನು ತೆರವುಗೊಳಿಸಿ, ಕಾಲೇಜು ಆವರಣವನ್ನು ಶುಚಿಗೊಳಿಸಿಕೊಳ್ಳಬೇಕುʼ ಎಂದು ವಿದ್ಯಾನಗರದ ಆದಂ ಒತ್ತಾಯಿಸಿದ್ದಾರೆ.

ಮೂಡಿಗೆರೆ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿನ ಕಾಂಪೌಂಡ್‌ಗೆ ಹಬ್ಬಿರುವ ಗಿಡಗಂಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.