ADVERTISEMENT

ಮೂಡಿಗೆರೆ: ಮದ್ಯವ್ಯಸನ ಮುಕ್ತಿಗೆ ದೇವರ ಮೊರೆ!

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 5:11 IST
Last Updated 19 ಸೆಪ್ಟೆಂಬರ್ 2025, 5:11 IST
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹೊಸ್ಕೆರೆ ಗ್ರಾಮದ ಯುವಕರು ಮದ್ಯಪಾನ ಮುಕ್ತಿಗಾಗಿ ವಿಶೇಷ ಪ್ರಾರ್ಥನೆ ನಡೆಸಿದರು
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹೊಸ್ಕೆರೆ ಗ್ರಾಮದ ಯುವಕರು ಮದ್ಯಪಾನ ಮುಕ್ತಿಗಾಗಿ ವಿಶೇಷ ಪ್ರಾರ್ಥನೆ ನಡೆಸಿದರು   

ಮೂಡಿಗೆರೆ (ಚಿಕ್ಕಮಗಳೂರು): ತಾಲ್ಲೂಕಿನ ಹೊಸ್ಕೆರೆ ಗ್ರಾಮದಲ್ಲಿ ಮದ್ಯಪಾನದಿಂದ ಜನರನ್ನು ಮುಕ್ತಗೊಳಿಸಲು ಮತ್ತು ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಯುವಕರು ದೇವರ ಮೊರೆ ಹೋಗಿದ್ದಾರೆ.

ಮದ್ಯಪಾನದಿಂದ ಗ್ರಾಮದ ಹಲವರ ಆರೋಗ್ಯ ಹಾಳಾಗುವ ಜತೆಗೆ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದರು. ಇದರಿಂದ ಬೇಸತ್ತ ಗ್ರಾಮದ ಯುವಕರು ಗ್ರಾಮದ ಚೌಡೇಶ್ವರಿ ದೇವಸ್ಥಾನದಲ್ಲಿ ಸೇರಿ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಯುವಕ ಜಯಂತ್, ‘ಮದ್ಯಪಾನದಿಂದ ಗ್ರಾಮದಲ್ಲಿ ಬಹಳಷ್ಟು ಸಮಸ್ಯೆ ಎದುರಾಗುತ್ತಿದೆ. ವ್ಯಸನಕ್ಕೆ ಬಲಿಯಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಬಡವರು, ಅನಕ್ಷರಸ್ಥರು, ಕೂಲಿ ಕಾರ್ಮಿಕರು ಚಟಕ್ಕೆ ದುಡಿಮೆಯ ಬಹುಭಾಗವನ್ನು ವಿನಿಯೋಗಿಸುತ್ತಿದ್ದಾರೆ’ ಎಂದರು.

ADVERTISEMENT

ಪುರುಷರು ಮಾತ್ರವಲ್ಲ ಕೆಲ ಮಹಿಳೆಯರು ಮದ್ಯ ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ಇದರಿಂದ ನಿತ್ಯ ಮನೆಗಳಲ್ಲಿ ಜಗಳ ನಡೆಯುತ್ತವೆ. ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹಲವು ಬಾರಿ ಮನವಿ ಮಾಡಿದ್ದೇವೆ. ಇದರಿಂದ  ಪ್ರಯೋಜನವಾಗುತ್ತಿಲ್ಲ ಎಂದು ಹೇಳಿದರು.

‘ಅಂತಿಮ ಪ್ರಯತ್ನವಾಗಿ ದೇವರ ಮುಂದೆ ಪ್ರಾರ್ಥನೆ ಮಾಡಿದ್ದೇವೆ. ಇನ್ನು ಮುಂದೆ ಯಾರೂ ಯಾವುದೇ ಕಾರಣಕ್ಕೂ ಹೊಸಕೆರೆ ಗ್ರಾಮದವರಿಗೆ ಮದ್ಯ ಮಾರಾಟ ಮಾಡದಂತೆ ಬುದ್ಧಿ ಕರುಣಿಸಲು ಕೇಳಿಕೊಂಡಿದ್ದೇವೆ’ ಎಂದರು.

ಪೂಜೆಯಲ್ಲಿ ಗ್ರಾಮದ ಯುವಕರಾದ ಅಶ್ವಥ್, ಶೋಧನ, ಜಯಕುಮಾರ್, ಧರ್ಮೇಶ್, ಕಾರ್ತಿಕ್, ಪ್ರಸನ್ನ, ಪ್ರೀತಮ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.