ADVERTISEMENT

ಮೂಡಿಗೆರೆ | ಆದಾಯ ಅಧಿಕಗೊಳಿಸಲು ಶ್ರಮಿಸಿ: ನಯನಾ ಮೋಟಮ್ಮ

ಕೃಷಿ ಮತ್ತು ತೋಟಗಾರಿಕಾ ಮೇಳ ಉದ್ಘಾಟಿಸಿದ ಶಾಸಕಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 5:17 IST
Last Updated 20 ಡಿಸೆಂಬರ್ 2025, 5:17 IST
ಮೂಡಿಗೆರೆ ಕೆವಿಕೆ ಆವರಣದಲ್ಲಿ ಏರ್ಪಡಿಸಿದ್ದ ಕೃಷಿ ಮತ್ತು ತೋಟಗಾರಿಕಾ ಮೇಳವನ್ನು ಶಾಸಕಿ ನಯನಾ ಮೋಟಮ್ಮ ಉದ್ಘಾಟಿಸಿದರು
ಮೂಡಿಗೆರೆ ಕೆವಿಕೆ ಆವರಣದಲ್ಲಿ ಏರ್ಪಡಿಸಿದ್ದ ಕೃಷಿ ಮತ್ತು ತೋಟಗಾರಿಕಾ ಮೇಳವನ್ನು ಶಾಸಕಿ ನಯನಾ ಮೋಟಮ್ಮ ಉದ್ಘಾಟಿಸಿದರು   

ಮೂಡಿಗೆರೆ: ರೈತರು ಹೆಚ್ಚು ಇಳುವರಿ ಪಡೆಯುವ ಹಾಗೂ ಆದಾಯ ಗಳಿಸುವ ಬಗ್ಗೆ ಕೃಷಿಗೆ ಸಂಬಂಧಿಸಿದ ಎಲ್ಲ ವಿಶ್ವವಿದ್ಯಾಲಯಗಳು, ಇಲಾಖೆ ಅಧಿಕಾರಿಗಳು ಗಮನಹರಿಸಿದರೆ ಕೃಷಿಯಿಂದ ಯಾರೂ ಹಿಂದೆ ಸರಿಯಲು ಸಾಧ್ಯವಿಲ್ಲ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ವಿವಿಧ ಸಂಘ–ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕೃಷಿ ಮತ್ತು ತೋಟಗಾರಿಕಾ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

‘ಆದಾಯ ಕಡಿಮೆಯಾದಾಗ ಸಾಮಾನ್ಯವಾಗಿ ರೈತರು ಕೃಷಿಯಿಂದ ಹೊರ ಹೋಗುತ್ತಾರೆ. ಇದು ಮುಂದುವರಿದರೆ ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಗುತ್ತದೆ. ಹಾಗಾಗಿ ಆಯಾ ಪ್ರದೇಶದಲ್ಲಿ ಬೆಳೆಯುವ ಎಲ್ಲ ಬೆಳೆಗಳ ಉತ್ಪತ್ತಿಗೆ ಒತ್ತು ನೀಡಬೇಕು. ಜತೆಗೆ ಕಾರ್ಮಿಕರ ಬದುಕಿಗೆ ಸಹಾಯವಾಗುವ ಕೆಲಸವನ್ನೂ ಮಾಡಬೇಕು. ಸದನದಲ್ಲಿ ಕೃಷಿಕರ ಬಗ್ಗೆ ಮಾತನಾಡಿ ಗಮನ ಸೆಳೆಯುತ್ತಿದ್ದೇನೆ’ ಎಂದು ಹೇಳಿದರು.

ADVERTISEMENT

ಕಾಂಗ್ರೆಸ್ ಮುಖಂಡ ಬಿ.ಬಿ. ನಿಂಗಯ್ಯ ಮಾತನಾಡಿ, ಕೃಷಿ ಮೇಳ ಎಂಬುದು ರೈತರ ಹಬ್ಬ. ಮೇಳದಲ್ಲಿ ಕೃಷಿ ಬಗ್ಗೆ ಹೊಸ ಸಂಶೋಧನೆ, ಆವಿಷ್ಕಾರಗಳ ಬಗ್ಗೆ ರೈತರು ತಿಳಿದುಕೊಳ್ಳಲು ಇದೊಂದು ಸುವರ್ಣಾವಕಾಶ. ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಂದ, ರೈತರು ಮಾಹಿತಿ ಪಡೆಯುವ ಅವಕಾಶ ಸಿಗುತ್ತದೆ. ವಿಜ್ಞಾನಿಗಳು ರೈತರಿಗೆ ಅನುಕೂಲವಾಗುವ ಸಂಶೋಧನೆ ನಡೆಸಿ, ಯಶಸ್ಸು ಕಾಣುವ ಮೂಲಕ ರೈತರಿಗೆ ವರದಾನವಾಗಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಆರ್.ಸಿ. ಜಗದೀಶ್, ‘ರೈತರು ಪ್ರತಿವರ್ಷ ಮಣ್ಣು ಹಾಗೂ ನೀರಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಸಾಲೆ ಉತ್ಪನ್ನಕ್ಕೆ ಹೆಚ್ಚು ಬೇಡಿಕೆಯಿದೆ. ಜತೆಗೆ ಬೇಡಿಕೆಯಿರುವ ಬೆಳೆಗಳನ್ನು ಬ್ರ್ಯಾಂಡ್ ಮಾಡಿ ಮಾರಾಟ ಮಾಡಲು ಮುಂದಾಗಬೇಕು. ಜಾಗತಿಕ ಮಟ್ಟದಲ್ಲಿ ಕಾಫಿ ಬೆಳೆ ಇದೀಗ 3.5 ಲಕ್ಷ ಟನ್ ಉತ್ಪಾದನೆಯಾಗುತ್ತದೆ. 2067ಕ್ಕೆ 7 ಲಕ್ಷ ಟನ್‌ಗೆ ಸಾಗುವ ನಿರೀಕ್ಷೆ ಇದೆ. ಹೊಸ ಹೊಸ ಉತ್ಪನ್ನ ತಯಾರಿಸಲು ಉತ್ತಮ ಅವಕಾಶವಿದ್ದು, ಯುವಜನತೆಯನ್ನು ಕೃಷಿಯತ್ತ ಕರೆತರುವ ಪ್ರಯತ್ನ ನಡೆಯಬೇಕಿದೆ’ ಎಂದು ಹೇಳಿದರು.

ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಸಹ್ಯಾದ್ರಿ ಜಲಮುಕ್ತಿ ಎಂಬ ಹೊಸ ಭತ್ತದ ತಳಿಯನ್ನು ಲೋಕಾರ್ಪಣೆ ಮಾಡಲಾಯಿತು. ಕಿರು ಆಹಾರ ಸಂಸ್ಕರಣೆ ಘಟಕ ಸ್ಥಾಪನೆ ಬಗ್ಗೆ, ಕಾಳು ಮೆಣಸು, ಏಲಕ್ಕಿ ಉತ್ಪಾದನೆ, ಸಸ್ಯ ಸಂರಕ್ಷಣೆ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.

ಮೇಳದಲ್ಲಿ ಹಣ್ಣು, ಹೂವು ಸೇರಿದಂತೆ ವಿವಿಧ ಬಗೆಯ ಬೆಳೆಗಳ ನರ್ಸರಿ, ಹಳ್ಳಿಕಾರ್ ಹೋರಿ, ಗಿರಿತಳಿ, ತೆರಿಚರ‍್ರಿ ಕುರಿ, ಕೆಂಗ ಕುರಿ, ವಿವಿಧ ಜಾತಿಯ ಕೋಳಿ, ಕೃಷಿ ಯಂತ್ರೋಪಕರಣ ಸೇರಿದಂತೆ ಕೃಷಿ ಪರಿಕರಗಳ ಬಗ್ಗೆ ಪ್ರದರ್ಶನ ಹಾಗೂ ಮಾರಾಟ ಮಳಿಗೆ ತೆರೆಯಲಾಗಿತ್ತು.

ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ, ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಲ್.ಅಶೋಕ್‌ಕುಮಾರ್, ಬೆಳೆಗಾರ ಸಂಘದ ಅಧ್ಯಕ್ಷ ಬಾಲಕೃಷ್ಣ, ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಎಚ್.ಕೆ. ಪೂರ್ಣೇಶ್, ಟಿಎಪಿಸಿಎಂಸ್ ಅಧ್ಯಕ್ಷ ಕಲ್ಲೇಶ್, ಕಪೆಕ್ ವ್ಯವಸ್ಥಾಪಕ ಸಿ.ಎನ್. ಶಿವಪ್ರಸಾದ್, ಕೃಷಿ ಉದ್ದಿಮೆದಾರ ಬಿ.ಕೆ. ಕುಮಾರಸ್ವಾಮಿ, ತೋಟಗಾರಿಕೆ ಮಹಾವಿದ್ಯಾಲಯ ಡೀನ್ ಶ್ರೀನಿವಾಸ್, ಕೆವಿಕೆ ಮುಖ್ಯಸ್ಥ ಎ.ಟಿ. ಕೃಷ್ಣಮೂರ್ತಿ, ಆಡಳಿತ ಮಂಡಳಿ ಸದಸ್ಯರಾದ ದೇವಿಕುಮಾರ್, ಕಾವೇರಿಯಪ್ಪ, ಶಶಾಂಕ್, ಶಿಕ್ಷಣ ನಿರ್ದೇಶಕ ಎಂ.ಡಿ. ಶಿವಪ್ರಕಾಶ್, ದುಶ್ಯಂತ್, ಗಿರಿರಾಜ್, ಡಾ.ಎಸ್. ಮಾವರ್ಕರ್, ಡಾ. ಸುಚಿತ್ರ, ಮಂಗಳ, ಸದಾನಂದ ಬಂಗೇರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.