
ನಯನಾ ಮೋಟಮ್ಮ
ಚಿಕ್ಕಮಗಳೂರು: ‘ಖಾಸಗಿ ಕಾರ್ಯಕ್ರಮಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೆ ನನ್ನ ಉಡುಪಿನ ಬಗ್ಗೆ ಕೆಲವರು ಟೀಕಿಸುತ್ತಾರೆ’ ಎಂದು ಶಾಸಕಿ ನಯನಾ ಮೋಟಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಾಲತಾಣಗಳಲ್ಲಿ ಎರಡು ಖಾತೆಗಳಿವೆ. ರಾಜಕೀಯ ಚಟುವಟಿಕೆಗಳ ಮಾಹಿತಿ ಹಂಚಿಕೊಳ್ಳಲು ಒಂದನ್ನು, ಮತ್ತೊಂದನ್ನು ವೈಯಕ್ತಿಕ ವಿಷಯ ಹಂಚಿಕೊಳ್ಳಲು ಬಳಸುತ್ತಿದ್ದೇನೆ. ಎಲ್ಲಾ ಮಾಹಿತಿ ಸಾರ್ವಜನಿಕರಿಗೆ ತಿಳಿಯಬೇಕು ಎಂಬುದು ನನ್ನ ಆಶಯ’ ಎಂದರು.
‘ಆದರೆ, ನನ್ನ ರಾಜಕೀಯ ಖಾತೆಗೆ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಖಾಸಗಿ ಖಾತೆಯಲ್ಲಿ ಕುಟುಂಬದ ಚಿತ್ರಗಳು, ಪ್ರವಾಸ, ಹಬ್ಬ ಆಚರಣೆ ಚಿತ್ರಗಳನ್ನು ಹಾಕಿದ ಕೂಡಲೇ ನನ್ನ ಉಡುಪು ಉಲ್ಲೇಖಿಸಿ ಕೆಲವರು ಟೀಕಿಸುತ್ತಾರೆ. ಕೆಲವರು ‘ಕೇವಲ ಇನ್‌ಸ್ಟಾಗ್ರಾಂ ಶಾಸಕಿ’ ಎಂದೂ ನನ್ನನ್ನು ಟೀಕಿಸಿದ್ದಾರೆ’ ಎಂದು ಹೇಳಿದರು.
ಚಾರ್ಜ್‌ಶೀಟ್: ಆಕ್ಷೇಪಾರ್ಹ ಕಮೆಂಟ್ ಹಾಕಿದ್ದ ರಾಮನಗರದ ಯಕ್ಷಿತ್ ರಾಜ್ ವಿರುದ್ಧ ಶಾಸಕಿಯ ಆಪ್ತ ಸಹಾಯಕ 2025ರ ಸೆಪ್ಟೆಂಬರ್‌ನಲ್ಲಿ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
‘ಬಳಿಕ ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ’ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.
ಮಹಿಳೆಯರು ರಾಜಕೀಯ ಪ್ರವೇಶ ಮಾಡುವುದು ವಿರಳ. ರಾಜ್ಯದಲ್ಲಿ 11 ಶಾಸಕಿಯರಿದ್ದೇವೆ. ಅವರನ್ನೂ ಗುರಿಯಾಗಿಸಿ ಕೆಟ್ಟದಾಗಿ ಟೀಕಿಸಿದರೆ ಹೇಗೆ?ನಯನಾ ಮೋಟಮ್ಮ ಶಾಸಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.