ADVERTISEMENT

ಮೂಡಿಗೆರೆ | ಸಂಜೀವಿನಿ ಒಕ್ಕೂಟದ ನೆರವು: ಬುಟ್ಟಿಯಲ್ಲಿ ಅರಳಿದ ಮಹಿಳೆ ಬದುಕು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 7:07 IST
Last Updated 3 ಮಾರ್ಚ್ 2026, 7:07 IST
ಮೂಡಿಗೆರೆ ತಾಲ್ಲೂಕಿನ ಹಂತೂರು ಗ್ರಾಮದ ಸಂಧ್ಯಾ ಅವರು ಸರಾಸ್ ಮೇಳದಲ್ಲಿ ಮಳಿಗೆ ತೆರೆದು ವ್ಯಾಪಾರ ಮಾಡುತ್ತಿರುವುದು
ಮೂಡಿಗೆರೆ ತಾಲ್ಲೂಕಿನ ಹಂತೂರು ಗ್ರಾಮದ ಸಂಧ್ಯಾ ಅವರು ಸರಾಸ್ ಮೇಳದಲ್ಲಿ ಮಳಿಗೆ ತೆರೆದು ವ್ಯಾಪಾರ ಮಾಡುತ್ತಿರುವುದು   

ಮೂಡಿಗೆರೆ: ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಸರ್ಕಾರ ಜಾರಿಗೊಳಿಸಿದ ಸಂಜೀವಿನಿ ಒಕ್ಕೂಟದ ನೆರವಿನಲ್ಲಿ ಉದ್ಯಮಿಯಾಗಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.

ಹಂತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಧ್ಯಾ ಈ ಸಾಧನೆಗೈದ ಮಹಿಳೆ.  ಇವರು ತಯಾರಿಸಿದ ಬುಟ್ಟಿ, ಕಾಫಿ ಪುಡಿ ಇತರೆ ವಸ್ತುಗಳು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಮೂಲತಃ ಹಂತೂರು ಗ್ರಾಮದವರಾದ ಇವರು, ಗ್ರಾಮದ ಪ್ರೀತಿ ಸ್ತ್ರೀಶಕ್ತಿ ಸಂಘದ ಸದಸ್ಯೆ. ರಾಜ್ಯದ‌ ಬೇರೆ ಬೇರೆ ಭಾಗಗಳಲ್ಲಿ ನಡೆಯುವ ಕಾರ್ಯಕ್ರಮ, ಸಮಾವೇಶ ಮುಂತಾದ ಕಡೆ ಮಳಿಗೆಯನ್ನು ತೆರೆದು ತಾವು ತಯಾರಿಸಿದ ಬುಟ್ಟಿ, ಕಾಫಿ ಪುಡಿ ಮುಂತಾದ ವಸ್ತುಗಳನ್ನು ಮಾರಾಟ ಮಾಡುತ್ತಾರೆ.

ADVERTISEMENT

ಈಚೆಗೆ ಮಂಗಳೂರಿನಲ್ಲಿ ನಡೆದ ಸರಸ್ ಮೇಳದಲ್ಲೂ ಭಾಗವಹಿಸಿ, ಗ್ರಾಹಕರ ಮನಸೂರೆಗೊಂಡ ಉತ್ಪನ್ನ ಮಾರಾಟ ಮಾಡುವ ಮೂಲಕ ಆದಾಯ ಪಡೆದಿದ್ದಾರೆ.

‘ಬುಟ್ಟಿ ಹೆಣೆಯುವ ಕೌಶಲ ಹಿಂದಿನಿಂದಲೂ ಇತ್ತು. ನಾನೇ ಹೆಣೆದ ಬುಟ್ಟಿಯಲ್ಲಿ ದೇವಾಲಯಕ್ಕೆ ಹಣ್ಣುಕಾಯಿ ತೆಗೆದುಕೊಂಡು ಹೋಗಿದ್ದಾಗ ಬುಟ್ಟಿಯನ್ನು ಗಮನಿಸಿದ ಕೆಲವರು ತಮಗೂ ಬುಟ್ಟಿ ಹೆಣೆದು ಕೊಡುವಂತೆ ಹೇಳಿದರು.‌ ಅಂದಿನಿಂದ ಬುಟ್ಟಿ ಹಾಕುವುದನ್ನು ಪ್ರಾರಂಭಿಸಿದೆ. ವಿವಿಧೆಡೆ ನಡೆಯುವ ಕಾರ್ಯಕ್ರಮಗಳಲ್ಲಿ ಮಳಿಗೆ ಹಾಕಿ ಬುಟ್ಟಿ ಮಾರಾಟ ಮಾಡಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬಳಿಕ, ಕೇವಲ ಬುಟ್ಟಿ ಮಾತ್ರ ತೆಗೆದುಕೊಂಡು ಹೋಗುವುದರ ಬದಲು, ಬುಟ್ಟಿಯೊಂದಿಗೆ ನಮ್ಮಲ್ಲಿಯೇ ಉತ್ಪತ್ತಿಯಾಗುವ ಕಾಫಿ ಇತರೆ ವಸ್ತುಗಳನ್ನೂ ತೆಗೆದುಕೊಂಡು ಹೋಗುತ್ತಿದ್ದೇನೆ. ಇದರಿಂದ ಇನ್ನಷ್ಟು ವ್ಯಾಪಾರ ನಡೆಸಲು‌ ಅನುಕೂಲವಾಗಿದೆ.‌  ಈ ಕಾರ್ಯಕ್ಕೆ ನಮ್ಮ ಪ್ರೀತಿ ಸ್ತ್ರೀಶಕ್ತಿ ಸಂಘ, ತಾಲ್ಲೂಕು ಪಂಚಾಯಿತಿ ಇಒ, ಸಂಜೀವಿನಿ ಒಕ್ಕೂಟದ ಶಾಲಿನಿ, ಪ್ರೀತಿ ಎಲ್ಲರ ಬೆಂಬಲ ನನಗೆ ನೆರವಾಗಿದೆ’ ಎನ್ನುತ್ತಾರೆ ಸಂಧ್ಯಾ.

‘ಸಂಜೀವಿನಿ ಒಕ್ಕೂಟಗಳು ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದ್ದು, ಮಾಸಿಕ‌ ಸಂತೆಗಳು ವರಮಾನ ತಂದುಕೊಡುವಲ್ಲಿ ಉತ್ತಮ ವೇದಿಕೆಯಾಗಿವೆ. ಮಹಿಳೆಯರು ಗುಂಪು ಚಟುವಟಿಕೆಗಳ ಮೂಲಕ ಉದ್ಯಮಿಗಳಾದರೆ, ಕುಟುಂಬವೂ ಆರ್ಥಿಕತೆಯಲ್ಲಿ ಪ್ರಗತಿ ಕಾಣುತ್ತದೆ ಎಂಬುದಕ್ಕೆ ಸಂಧ್ಯಾ ಸಾಕ್ಷಿಯಾಗಿದ್ದಾರೆ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದಯಾವತಿ.

ಮೂಡಿಗೆರೆ ತಾಲ್ಲೂಕಿನ ಹಂತೂರು ಗ್ರಾಮದ ಸಂಧ್ಯಾ ಅವರು ಸರಾಸ್ ಮೇಳದಲ್ಲಿ ಮಳಿಗೆ ತೆರೆದು ವ್ಯಾಪಾರ ಮಾಡುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.