ADVERTISEMENT

‘ಡೀಮ್ಡ್‌’ ಇತ್ಯರ್ಥವಾಗುವವರೆಗೆ ಪ್ರಕ್ರಿಯೆ ಕೈಬಿಡಿ

ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು ವಿರೋಧಿ ಹೋರಾಟ ಸಮಿತಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 1:31 IST
Last Updated 25 ಸೆಪ್ಟೆಂಬರ್ 2020, 1:31 IST
ಚಿಕ್ಕಮಗಳೂರಿನಲ್ಲಿ ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು ಪ್ರದೇಶ ಯೋಜನೆ ವಿರೋಧಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಚಿಕ್ಕಮಗಳೂರಿನಲ್ಲಿ ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು ಪ್ರದೇಶ ಯೋಜನೆ ವಿರೋಧಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.   

ಚಿಕ್ಕಮಗಳೂರು: ಪರಿಭಾವಿತ (ಡೀಮ್ಡ್‌) ಅರಣ್ಯ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥವಾಗುವವರೆಗೆ ತಾಲ್ಲೂಕಿನ ಮುಳ್ಳಯ್ಯನಗಿರಿ ಶ್ರೇಣಿಯನ್ನು ಸಂರಕ್ಷಣಾ ಮೀಸಲು ಪ್ರದೇಶವಾಗಿ ಘೋಷಿಸಬಾರದು ಎಂದು ಆಗ್ರಹಿಸಿ ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು ಪ್ರದೇಶ ಯೋಜನೆ ವಿರೋಧಿ ಹೋರಾಟ ಸಮಿತಿ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಜಮಾಯಿಸಿದ ಸಮಿತಿಯ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯಕುಮಾರ್ ಮಾತನಾಡಿ, ‘ತಾಲ್ಲೂಕಿನ ಎಂಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ 16,835 ಎಕರೆ ಜಾಗವನ್ನು ಸಂರಕ್ಷಣಾ ಮೀಸಲು ಪ್ರದೇಶ ವ್ಯಾಪ್ತಿಗೆ ಸೇರಿಸಲು ಅಂತಿಮ ಪಟ್ಟಿ ರಚಿಸಲಾಗಿತ್ತು. ಈ ಗ್ರಾಮಗಳ ಜನರ ಅಭಿಪ್ರಾಯ ಪಡೆಯುವಂತೆ ಹೋರಾಟ ನಡೆಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ನೇತೃತ್ವದಲ್ಲಿ ಈಚೆಗೆ ಸಭೆ ನಡೆದಿತು. ಮತ್ತೊಮ್ಮೆ ಗ್ರಾಮಸ್ಥರ ಅಭಿಪ್ರಾಯ ಪಡೆಯುವಂತೆ ಸಭೆಯಲ್ಲಿ ಆಗ್ರಹಿಸಲಾಗಿತ್ತು. ಅದರಂತೆ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಆದರೆ, ಅಧಿಕಾರಿಗಳು 3,935 ಎಕರೆ ಪ್ರದೇಶದ ಗ್ರಾಮಗಳ ಜನರ ಅಭಿಪ್ರಾಯ ಮಾತ್ರ ಸಂಗ್ರಹಿಸಿದ್ದಾರೆ’ ಎಂದು ದೂರಿದರು.

ADVERTISEMENT

‘ಸಂರಕ್ಷಣಾ ಮೀಸಲು ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಗೋವುಗಳ ಗಣತಿ ನಡೆಸಿಲ್ಲ. ನಮೂನೆ 53, 57, 94ಸಿ ನಲ್ಲಿ ಹಲವರು ಅರ್ಜಿ ಸಲ್ಲಿಸಿದ್ದಾರೆ. ಅವು ವಿಲೇವಾರಿ ಆಗಿಲ್ಲ. ಪ್ರಸ್ತಾವಿತ ಪ್ರದೇಶದಲ್ಲಿ 13 ಸಾವಿರ ಎಕರೆ ಡೀಮ್ಡ್ ಫಾರೆಸ್ಟ್ ಇದೆ ಎನ್ನುವುದಾಗಿ ಅರಣ್ಯ ಇಲಾಖೆ ಹೇಳುತ್ತಿದೆ. ಈ ಬಗ್ಗೆ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು ಪ್ರದೇಶ ಯೋಜನೆ ವಿರೋಧಿ ಹೋರಾಟ ಸಮಿತಿ ಸಂಚಾಲಕ ಕೆ.ಕೆ.ರಘು, ಬಿಎಸ್‌ಪಿ ಜಿಲ್ಲಾಘಟಕದ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪಿ.ಅಂಶುಮಂತ್, ಮುಖಂಡರಾದ ಗಾಯತ್ರಿ ಶಾಂತೇಗೌಡ, ರೇಖಾ ಹುಲಿಯಪ್ಪಗೌಡ, ಹಿರೇಮಗಳೂರು ಪುಟ್ಟಸ್ವಾಮಿ, ರಾಮಚಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.