ADVERTISEMENT

ನರಸಿಂಹರಾಜಪುರ| ಸಂಕಷ್ಟಕ್ಕೆ ಮಿಡಿಯುತ್ತಿರುವ ಮುಸ್ಲಿಂ ಕುಟುಂಬ

ಜಾತಿ, ಧರ್ಮದ ಹಂಗಿಲ್ಲದೆ ಬಡ ಕುಟುಂಬಗಳಿಗೆ ನೆರವು

ಕೆ.ವಿ.ನಾಗರಾಜ್
Published 23 ಏಪ್ರಿಲ್ 2020, 4:05 IST
Last Updated 23 ಏಪ್ರಿಲ್ 2020, 4:05 IST
ನರಸಿಂಹರಾಜಪುರದಲ್ಲಿ ಸಂಕಷ್ಟದಲ್ಲಿರುವವರಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸುತ್ತಿರುವ ಹಾಜಿ ಮಹಮ್ಮದ್ ಹುಸೇನ್.
ನರಸಿಂಹರಾಜಪುರದಲ್ಲಿ ಸಂಕಷ್ಟದಲ್ಲಿರುವವರಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸುತ್ತಿರುವ ಹಾಜಿ ಮಹಮ್ಮದ್ ಹುಸೇನ್.   

ನರಸಿಂಹರಾಜಪುರ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸರ್ಕಾರ ಲಾಕ್‌ಡೌನ್ ಘೋಷಿಸಿರುವುದರಿಂದ ಹಲವು ಬಡಕುಟುಂಬಗಳು ಕೆಲಸವಿಲ್ಲದೆ ನಲುಗಿವೆ. ಇಂತಹ ಕುಟುಂಬಗಳಿಗೆ ಪಟ್ಟಣದ ವ್ಯಾಪ್ತಿಯಲ್ಲಿ ಮುಸ್ಲಿಂ ಕುಟುಂಬವೊಂದು ಸದ್ದಿಲ್ಲದೆ ಕೈಲಾದಷ್ಟು ನೆರವಿನ ಹಸ್ತ ಚಾಚುವ ಮೂಲಕ ಬಡ ಕುಟುಂಬಗಳ ಸಂಕಷ್ಟಕ್ಕೆ ಮಿಡಿಯುತ್ತಿದೆ.

ಪಟ್ಟಣದ ಹಳೆಮಂಡಗದ್ದೆ ಸಮೀಪದಲ್ಲಿ ವಾಸವಾಗಿರುವ ಮಹಮ್ಮದ್ ಹುಸೇನ್ ಹಲವಾರು ದಿನಗಳಿಂದ ಬಡ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದ್ದಾರೆ. ಯಾವುದೇ ಜಾತಿ, ಧರ್ಮ, ಪಂಥ ಎಂಬ ಭೇದ ಮಾಡದೆ ದಾರಿಯಲ್ಲಿ ಹೋಗುವ ಬಡವರನ್ನು ಮನೆಗೆ ಕರೆದು ಆಹಾರ ಸಾಮಗ್ರಿಯ ಕಿಟ್ ನೀಡುತ್ತಿದ್ದಾರೆ. ಇವರ ಈ ಕಾಯಕದಲ್ಲಿ ಮಗ, ಮೊಮ್ಮಗ ಕೈಜೋಡಿಸಿದ್ದು, ಪಟ್ಟಣದ ವ್ಯಾಪ್ತಿಯಲ್ಲಿರುವ ಬಡವರನ್ನು ಗುರುತಿಸಿ ಮನೆಬಾಗಿಲಿಗೆ ತೆರಳಿ ದಿನಸಿ ನೀಡುವ ಕಾಯಕವನ್ನು ಮಾಡುತ್ತಿದ್ದಾರೆ.

ಹಾಜಿಮಹಮ್ಮದ್ ಹುಸೇನ್ ಅವರನ್ನು ಮಾತಿಗೆಳೆದಾಗ, ‘ಸಮಾಜದಲ್ಲಿರುವುದು ಕೇವಲ ಎರಡೇ ಜಾತಿ. ಅದು ಗಂಡು ಮತ್ತು ಹೆಣ್ಣು. ಉಳಿದ ಜಾತಿ, ಧರ್ಮ ಇವೆಲ್ಲವೂ ಮನುಷ್ಯ ತಮ್ಮನ್ನು ಗುರುತಿಸಲು ಮಾಡಿಕೊಂಡಿರುವ ವ್ಯವಸ್ಥೆಯಾಗಿದೆ. ಸಂಕಷ್ಟದ
ಲ್ಲಿರುವವರಿಗೆ ನೆರವು ನೀಡಲು ಜಾತಿ, ಧರ್ಮ ಅಡ್ಡಿಯಾಗಬಾರದು. ಮನುಷ್ಯತ್ವ ಬೆಳೆಸಿಕೊಳ್ಳಬೇಕು’ ಎಂದರು.

ADVERTISEMENT

ಬಡವರನ್ನು ಗುರುತಿಸಿ ಪ್ರಮುಖವಾಗಿ ಅಕ್ಕಿ, ಗೋಧಿಹಿಟ್ಟು, ತೊಗರಿ ಬೆಳೆ, ಕಾಯಿ, ಬೆಂಕಿ ಪೊಟ್ಟಣ ಮೊದಲಾದ ವಸ್ತುಗಳು ಇರುವ ಕಿಟ್ ಮಾಡಿ ವಿತರಿಸುತ್ತಿದ್ದಾರೆ.

ದಿನಸಿ ಜತೆಗೆ ಕಾಯಿ, ಅಗರಬತ್ತಿ ಮತ್ತು ಬೆಂಕಿಪೊಟ್ಟಣ ಏಕೆ ವಿತರಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ, ‘ಕಿಟ್ ಪಡೆದ ಪ್ರತಿಯೊಬ್ಬರೂ ಸರ್ವ
ಜ್ಞನ ವಚನದಂತೆ ನಾನು, ನನ್ನದು ಎಂಬುದನ್ನು ಬಿಟ್ಟು ಅವರವರು ನಂಬಿರುವ ದೇವರ ಬಳಿ ಕುಟುಂಬ ಮತ್ತು ಸರ್ವರ ಒಳಿತಿಗೆ ಪ್ರಾರ್ಥಿಸಬೇಕೆಂಬ ಉದ್ದೇಶದಿಂದ ವಿತರಿಸುತ್ತಿದ್ದೇನೆ’ ಎಂದು ಭಾವುಕರಾದರು.

‘ನಾವು ಸತ್ತಾಗ ಒಳ್ಳೆಯದು ಮತ್ತು ಕೆಟ್ಟದ್ದು ಇವೆರಡನ್ನು ಮಾತ್ರ ತೆಗೆದುಕೊಂಡು ಹೋಗುವುದು’ ಎಂದು ಮಹಮ್ಮದ್ ಹುಸೇನ್ ಹೇಳಿದರು.

ಕೆಲವು ದಿನಗಳಿಂದ ಮಹಮ್ಮದ್ ಹುಸೇನ್ ಕುಟುಂಬದವರು ಬಡವರಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ವಿಜಯಣ್ಣ ತಿಳಿಸಿದರು.

ಮುಸ್ಲಿಂ ಕುಟುಂಬವೊಂದು ಬಡವರಿಗೆ ನೆರವಿನ ಹಸ್ತ ಚಾಚುತ್ತಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.