ADVERTISEMENT

ಚಿಕ್ಕಮಗಳೂರು: ಡಿ.8ರಂದು ಅಧಿಸೂಚನೆ; ನಗರಸಭೆಗೆ ಚುನಾವಣೆ ಘೋಷಣೆ, 27ರಂದು ಮತದಾನ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 3:01 IST
Last Updated 30 ನವೆಂಬರ್ 2021, 3:01 IST
ಚಿಕ್ಕಮಗಳೂರು ನಗರಸಭೆ ಕಾರ್ಯಾಲಯ.
ಚಿಕ್ಕಮಗಳೂರು ನಗರಸಭೆ ಕಾರ್ಯಾಲಯ.   

ಚಿಕ್ಕಮಗಳೂರು: ರಾಜ್ಯ ಚುನಾವಣಾ ಆಯೋಗವು ಸೋಮವಾರ ನಗರಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದ್ದು, ಡಿ. 27ರಂದು ಮತದಾನ ನಿಗದಿಯಾಗಿದೆ.

ಜಿಲ್ಲಾಧಿಕಾರಿ ಡಿ.8ರಂದು ಚುನಾವಣೆ ಅಧಿಸೂಚನೆ ಹೊಡಿಸುವರು. ನಾಮಪತ್ರ ಸಲ್ಲಿಸಲು ಡಿ.15 ಕೊನೆ ದಿನ.

ಡಿ.16ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್‌ ಪಡೆಯಲು ಡಿ.18 ಕಡೆ ದಿನ.

ADVERTISEMENT

ಡಿ.27ರಂದು ಬೆಳಿಗ್ಗೆ 7ರಿಂದ ಸಂಜೆ 5ಗಂಟೆವರೆಗೆ ಮತದಾನ ನಡೆಯಲಿದೆ. ಅಗತ್ಯವಿದ್ದ ಕಡೆಗಳಲ್ಲಿ ಡಿ. 29ರಂದು ಮರು ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಡಿ.30ರಂದು ಬೆಳಿಗ್ಗೆ 8 ಗಂಟೆಯಿಂದ ಮತಗಳ ಎಣಿಕೆ ನಡೆಯಲಿದೆ. 30ರಂದು ಚುನಾವಣಾ ಪ್ರಕ್ರಿಯೆ ಅಂತ್ಯಗೊಳ್ಳಲಿದೆ.

ನಗರದ ಎಲ್ಲ 35 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ. ಡಿ.8 ರಿಂದ 30ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.

ವೆಚ್ಚದ ಮಿತಿ: ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ನಗರಸಭೆಗಳಲ್ಲಿ ತಲಾ ₹ 2ಲಕ್ಷ ವೆಚ್ಚ ಮಿತಿ ನಿಗದಿಪಡಿಸಲಾಗಿದೆ.

ಚಿಕ್ಕಮಗಳೂರು ನಗರಸಭೆ ಸದಸ್ಯರ ಅವಧಿ 2019ರ ಮಾರ್ಚ್‌ನಲ್ಲಿ ಮುಗಿದಿತ್ತು. ಮೀಸಲಾತಿ ವಿಚಾರದಲ್ಲಿ ಕೆಲವರು ಕೋರ್ಟ್‌ ಮೆಟ್ಟಿಲು ಏರಿದ್ದರು. ಹೀಗಾಗಿ, ಚುನಾವಣೆ ಬಾಕಿ ಉಳಿದಿತ್ತು.

‘ಕೋರ್ಟ್‌ನಲ್ಲಿ ವಿಚಾರಣೆ ಇಂದು’

‘ಮೀಸಲಾತಿ ವಿಚಾರ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲು ಏರಿದ್ದೇವೆ. ನ.30ರಂದು ಕೋರ್ಟ್‌ನಲ್ಲಿ ವಿಚಾರಣೆ ಇದೆ’ ಎಂದು ನಗರಸಭೆ ಮಾಜಿ ಸದಸ್ಯ ಮುತ್ತಯ್ಯ ತಿಳಿಸಿದರು.

‘ವಾರ್ಡ್‌ ನಂ 3, 9, 20 ಹಾಗೂ 33ರ ಮೀಸಲಾತಿಗೆ ಸಂಬಂಧಿಸಿದಂತೆ ತಕರಾರು ಎತ್ತಿದ್ದೇವೆ. ಜಯಣ್ಣ, ಸುಧೀರ್‌, ಮುತ್ತಯ್ಯ, ಶ್ರೀನಿವಾಸ ಕೋರ್ಟ್‌ ಮೊರೆ ಹೋಗಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.