ADVERTISEMENT

ನರಸಿಂಹರಾಜಪುರ: ಕುಂಟುತ್ತ ಸಾಗಿದ ಸೇತುವೆ ಕಾಮಗಾರಿ

2018ರಲ್ಲಿ ಮಂಜೂರು ಆಗಿದ್ದ ಯೋಜನೆ

ಕೆ.ವಿ.ನಾಗರಾಜ್
Published 12 ಡಿಸೆಂಬರ್ 2023, 8:06 IST
Last Updated 12 ಡಿಸೆಂಬರ್ 2023, 8:06 IST
ನರಸಿಂಹರಾಜಪುರ ತಾಲ್ಲೂಕು ಕೇಂದ್ರದ ಸಮೀಪದ ಭದ್ರಾ ಹಿನ್ನೀರಿಗೆ ಹಂದೂರು ಗ್ರಾಮದಕ್ಕೆ ತಲುಪಲು ನಿರ್ಮಿಸುತ್ತಿರುವ ಸೇತುವೆಯ ಕಾಮಗಾರಿ ಅರೆಬರೆ ಆಗಿರುವುದು
ನರಸಿಂಹರಾಜಪುರ ತಾಲ್ಲೂಕು ಕೇಂದ್ರದ ಸಮೀಪದ ಭದ್ರಾ ಹಿನ್ನೀರಿಗೆ ಹಂದೂರು ಗ್ರಾಮದಕ್ಕೆ ತಲುಪಲು ನಿರ್ಮಿಸುತ್ತಿರುವ ಸೇತುವೆಯ ಕಾಮಗಾರಿ ಅರೆಬರೆ ಆಗಿರುವುದು   

ನರಸಿಂಹರಾಜಪುರ: ತಾಲ್ಲೂಕು ಕೇಂದ್ರದಿಂದ ಹೊನ್ನೆಕೂಡಿಗೆ ಗ್ರಾಮ ಪಂಚಾಯಿತಿಗೆ ಸೇರಿದ ಹಂದೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಆರಂಭವಾಗಿ ಆರು ವರ್ಷಗಳು ಕಳೆದಿದ್ದರೂ, ಕಾಮಗಾರಿ ಕುಂಟುತ್ತ ಸಾಗಿದೆ.

2016ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಟ್ಟಣಕ್ಕೆ ಭೇಟಿ ನೀಡಿದ್ದ ವೇಳೆ ಆಗ ವಿಧಾನ ಪರಿಷತ್ ಸದಸ್ಯರಾಗಿದ್ದ ಎಂ.ಶ್ರೀನಿವಾಸ್‌ ಅವರು ಈ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ವಿನಂತಿಸಿದ್ದರು. ನಂತರ ₹4.90ಕೋಟಿ ಅನುದಾನ ಬಿಡುಗಡೆಯಾಗಿದ್ದು, 2017ರಲ್ಲಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು. ನಿರ್ಮಾಣಕ್ಕೆ ₹20ಕೋಟಿ ವೆಚ್ಚ ತಗಲುವುದಾಗಿ ತಾಂತ್ರಿಕ ಸಮಿತಿ ವರದಿ ನೀಡಿತ್ತು. ನಂತರ ಸೇತುವೆ ನಿರ್ಮಾಣಕ್ಕೆ ₹34.85ಕೋಟಿ ಬಿಡುಗಡೆಯಾಯಿತು. 2018ರಲ್ಲಿ ಆರಂಭವಾಗಿದ್ದ ಕಾಮಗಾರಿ, 2021ರಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಇದುವರೆಗೂ ಕಾಮಗಾರಿ ಮುಗಿದಿಲ್ಲ.

‘ಕಾಮಗಾರಿ ಪೂರ್ಣಗೊಳ್ಳದಿರುವುದು ಬೇಸರ ಮೂಡಿಸಿದೆ. ಗುತ್ತಿಗೆದಾರರಿಗೆ ಈಗಾಗಲೇ ₹21ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿದೆ. ಪ್ರಸ್ತುತ ₹5ಕೋಟಿ ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಬಂಧಪಟ್ಟ ಇಲಾಖೆಗೆ ಸೂಚಿಸಿದ್ದಾರೆ. ಅಲ್ಲದೆ, ಕಾಮಗಾರಿ ತ್ವರಿತಗೊಳಿಸುವಂತೆ ಸೂಚಿಸಿದ್ದಾರೆ. ಸ್ಥಳೀಯ ಶಾಸಕರು ಕಾಮಗಾರಿ ಬಗ್ಗೆ ಗಮನಹರಿಸುವಂತೆ ಸೂಚಿಸಲಾಗುವುದು. 2024ರ ಏಪ್ರಿಲ್ ಒಳಗೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ಮನವಿ ಮಾಡಲಾಗಿದೆ’ ಎಂದು ಎಂ.ಶ್ರೀನಿವಾಸ್ ಪ್ರತಿಕ್ರಿಯಿಸಿದರು.

ADVERTISEMENT

ಸೇತುವೆ ಕಾಮಗಾರಿ ಪೂರ್ಣಗೊಂಡರೆ ಹೊನ್ನೆಕೂಡಿಗೆ ಗ್ರಾಮ ಪಂಚಾಯಿತಿಯ ಬಹುತೇಕ ಗ್ರಾಮದ ಜನರು 10 ಕಿ.ಮೀ ಅಂತರದಲ್ಲಿ ತಾಲ್ಲೂಕು ಕೇಂದ್ರ ತಲುಪಬಹುದು ಎಂದು ಹೊನ್ನೆಕೂಡಿಗೆ ಗ್ರಾಮಸ್ಥ ಕೃಷ್ಣಯ್ಯಗೌಡ ತಿಳಿಸಿದರು.

ಎಂ.ಶ್ರೀನಿವಾಸ್

ಇದೇ ಸೇತುವೆಯಂತೆ ಬಾಳೆಹೊನ್ನೂರಿನಲ್ಲಿ ಭದ್ರಾ ನದಿಗೆ ನಿರ್ಮಿಸುತ್ತಿರುವ ಬಾಳೆಹೊನ್ನೂರು– ಚಿಕ್ಕಮಗಳೂರು ಸೇತುವೆ ಕಾಮಗಾರಿಯೂ ಇದೇ ಅವಧಿಯಲ್ಲಿ ಆರಂಭವಾಗಿದೆ. ಇದು ಸಹ ಪೂರ್ಣಗೊಂಡಿಲ್ಲ. ಶಾಸಕರು ಈ ಸೇತುವೆಗಳ ಕಾಮಗಾರಿ ಬಗ್ಗೆ ಗಮನ ಹರಿಸುತ್ತಿಲ್ಲ ಸಾರ್ವಜನಿಕರು ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.